ADVERTISEMENT

ನನಸಾಗುವುದೇ ಹೈದರಾಬಾದ್ ಪ್ಲೇ ಆಫ್ ಕನಸು?

13ನೇ ಆವೃತ್ತಿಯ ಕೊನೆಯ ಲೀಗ್ ಪಂದ್ಯ; ಮುಂಬೈ ಇಂಡಿಯನ್ಸ್‌ಗೆ ಡೇವಿಡ್ ವಾರ್ನರ್ ಬಳಗದ ಸವಾಲು

ಪಿಟಿಐ
Published 2 ನವೆಂಬರ್ 2020, 14:43 IST
Last Updated 2 ನವೆಂಬರ್ 2020, 14:43 IST
ಜೇಸನ್ ಹೋಲ್ಡರ್ (ಎಡ) ಸನ್‌ರೈಸರ್ಸ್ ಹೈದರಾಬಾದ್ ತಂಡದ ಭರವಸೆ ಎನಿಸಿದ್ದಾರೆ –ಪಿಟಿಐ ಚಿತ್ರ
ಜೇಸನ್ ಹೋಲ್ಡರ್ (ಎಡ) ಸನ್‌ರೈಸರ್ಸ್ ಹೈದರಾಬಾದ್ ತಂಡದ ಭರವಸೆ ಎನಿಸಿದ್ದಾರೆ –ಪಿಟಿಐ ಚಿತ್ರ   

ಶಾರ್ಜಾ: ಅಮೋಘ ಆಟದ ಮೂಲಕ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿ ವಿರಾಜಮಾನವಾಗಿರುವ ಮತ್ತು ಈಗಾಗಲೇ ಪ್ಲೇ ಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಒಂದೆಡೆ, ಗೆದ್ದು ಪ್ಲೇ ಆಫ್‌ ಹಂತಕ್ಕೇರುವ ಕನಸು ಹೊತ್ತುಕೊಂಡು ಕಣಕ್ಕೆ ಇಳಿಯಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಮತ್ತೊಂದೆಡೆ. ಈ ಎರಡು ತಂಡಗಳ ಪೈಕಿ ಗೆಲುವು ಯಾರಿಗೆ ಒಲಿಯಲಿದೆ..?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ 13ನೇ ಆವೃತ್ತಿಯ ಕೊನೆಯ ಲೀಗ್ ಪಂದ್ಯದಲ್ಲಿ ಮಂಗಳವಾರ ಮುಂಬೈ ಮತ್ತು ಸನ್‌ರೈಸರ್ಸ್ ತಂಡಗಳು ಸೆಣಸಲಿದ್ದು ಹಿಂದಿನ ಎರಡು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿ ಭರವಸೆಯ ಅಲೆಯಲ್ಲಿ ತೇಲುತ್ತಿರುವ ಸನ್‌ರೈಸರ್ಸ್‌ ಈ ಪಂದ್ಯ ಗೆದ್ದರೆ ಮಾತ್ರ ಪ್ಲೇ ಆಫ್‌ಗೆ ಪ್ರವೇಶಿಸಲಿದೆ.

ಪಂದ್ಯ ಗೆದ್ದರೆ ಸನ್‌ರೈಸರ್ಸ್ ತಂಡದ ಪಾಯಿಂಟ್ ಗಳಿಗೆ 14ಕ್ಕೆ ಏರಲಿದೆ. ಭಾನುವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆದ್ದು ಸದ್ಯ ನಾಲ್ಕನೇ ಸ್ಥಾನದಲ್ಲಿರುವ ಕೋಲ್ಕತ್ತ ನೈಟ್ ರೈಡರ್ಸ್ ಖಾತೆಯಲ್ಲೂ 14 ಪಾಯಿಂಟ್‌ಗಳು ಇವೆ. ಆದರೆ ಉತ್ತಮ ರನ್‌ ರೇಟ್ ಹೊಂದಿರುವ ಕಾರಣ ಸನ್‌ರೈಸರ್ಸ್‌ ತಂಡ ಕೋಲ್ಕತ್ತವನ್ನು ಹಿಂದಿಕ್ಕಲಿದೆ. ಆದರೆ ಸೋತರೆ ಟೂರ್ನಿಯಿಂದ ಹೊರಬೀಳಲಿದ್ದು ಕೋಲ್ಕತ್ತ ಪ್ಲೇ ಆಫ್ ಹಣಾಹಣಿಗೆ ಸಜ್ಜಾಗಲಿದೆ.

ADVERTISEMENT

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಮೋಘ ಜಯ ಸಾಧಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧವೂ ಹೈದರಾಬಾದ್ ಉತ್ತಮ ಸಾಧನೆ ಮಾಡಿದೆ. ಜಾನಿ ಬೆಸ್ಟೊ ಅವರನ್ನು ಅಂತಿಮ 11ರಿಂದ ಹೈದರಾಬಾದ್ ಕೈಬಿಟ್ಟಿದ್ದರೂ ತಂಡದ ಲಯ ತಪ್ಪಲಿಲ್ಲ. ಆವರಿಲ್ಲದ ಪಂದ್ಯಗಳಲ್ಲೂ ತಂಡ ಭರ್ಜರಿ ಗೆಲುವು ದಾಖಲಿಸಿಕೊಂಡಿತ್ತು.

ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರ ಹೊಸ ಜೋಡಿ ವೃದ್ಧಿಮಾನ್ ಸಹಾ ಅವರು ಕಳೆದ ಎರಡು ಪಂದ್ಯಗಳಲ್ಲಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದ್ದಾರೆ. ಜೇಸನ್ ಹೋಲ್ಡರ್ ಮರಳಿರುವುದು ಕೂಡ ತಂಡದ ಬಲ ಹೆಚ್ಚಿಸಿದೆ. ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಹೋಲ್ಡರ್ ಮತ್ತು ಸಂದೀಪ್ ಶರ್ಮಾ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ್ದರು. ಪವರ್‌ ಪ್ಲೇ ಅವಧಿಯಲ್ಲೂ ಡೆತ್ ಓವರ್‌ಗಳಲ್ಲೂ ಸರಿಯಾದ ಲೈನ್ ಮತ್ತು ಲೆಂಗ್ತ್ ಕಾಪಾಡಿಕೊಳ್ಳಲು ಸಾಧ್ಯವಾಗಿರುವುದು ಇವರಿಬ್ಬರ ಗರಿಮೆ. ಎಡಗೈ ಮಧ್ಯಮವೇಗಿ ಟಿ.ನಟರಾಜನ್ ಮತ್ತು ತಂಡದ ‘ಟ್ರಂಪ್ ಕಾರ್ಡ್’ ಎನಿಸಿರುವ ಸ್ಪಿನ್ನರ್ ರಶೀದ್ ಖಾನ್ ಪ್ರತಿ ಪಂದ್ಯದಲ್ಲೂ ತಂಡಕ್ಕೆ ಆಸರೆಯಾಗಿದ್ದಾರೆ. ಹೀಗಾಗಿ ತಂಡ ಆತ್ಮವಿಶ್ವಾಸದಲ್ಲಿದೆ.

ಪೊಲಾರ್ಡ್ ನಾಯಕತ್ವದಲ್ಲೂ ಮುಂಬೈ ಜಯಭೇರಿ

ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದೇ ಹೇಳಲಾಗುವ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಗಾಯಗೊಂಡು ಆಡುತ್ತಿಲ್ಲ. ಆದರೂ ತಂಡದ ಶಕ್ತಿ ಕುಂದಲಿಲ್ಲ. ಕೀರನ್ ಪೊಲಾರ್ಡ್ ನೇತೃತ್ವದಲ್ಲೂ ತಂಡ ಜಯಭೇರಿ ಮೊಳಗಿಸುತ್ತ ಮುನ್ನುಗ್ಗಿದೆ. ಸನ್‌ರೈಸರ್ಸ್‌ನಂತೆ ‌ಈ ತಂಡವೂ ಹಿಂದಿನ ಎರಡು ಪಂದ್ಯಗಳಲ್ಲಿ ಬೆಂಗಳೂರು ಮತ್ತು ಡೆಲ್ಲಿ ವಿರುದ್ಧ ಜಯ ಗಳಿಸಿದೆ. ಪ್ಲೇಆಫ್‌ ಹಂತ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆ ಹೊಂದಿರುವ ಮುಂಬೈ ಪರ ಟ್ರೆಂಟ್ ಬೌಲ್ಟ್ ಮತ್ತು ಜಸ್‌ಪ್ರೀತ್ ಬೂಮ್ರಾ ಅಪ್ರತಿಮ ಬೌಲಿಂಗ್ ದಾಳಿ ಸಂಘಟಿಸುತ್ತಿದ್ದಾರೆ. ‌ಕ್ವಿಂಟನ್ ಡಿಕಾಕ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಮತ್ತು ಪಾಂಡ್ಯ ಸಹೋದರರ ಜೊತೆ ನಾಯಕ ಪೊಲಾರ್ಡ್ ಅವರ ಬಲವೂ ಬ್ಯಾಟಿಂಗ್‌ ವಿಭಾಗಕ್ಕೆ ಇದೆ. ಆರು ಪಂದ್ಯಗಳಿಂದ 102 ರನ್‌ ಕಲೆ ಹಾಕಿರುವ ಸೌರಭ್ ತಿವಾರಿ ಅವರ ಮೇಲೆಯೂ ತಂಡ ಭರವಸೆ ಇರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.