ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್
ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಈಗಾಗಲೇ ನಾಕೌಟ್ ಹಂತ ತಲುಪಿರುವ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಸೋಮವಾರ ಇಲ್ಲಿ ಮುಖಾಮುಖಿಯಾಗಲಿವೆ.
ಲಖನೌನಲ್ಲಿ ಶನಿವಾರ ನಡೆದಿದ್ದ ಪಂದ್ಯದಲ್ಲಿ ಯು.ಪಿ. ವಾರಿಯರ್ಸ್ ತಂಡವು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 12 ರನ್‌ಗಳಿಂದ ಸೋಲಿಸಿತ್ತು. ಅದರೊಂದಿಗೆ ಆರ್‌ಸಿಬಿಯು ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಸೋತು ನಾಕೌಟ್ ಪ್ರವೇಶದ ಅವಕಾಶವನ್ನು ಕಳೆದುಕೊಂಡಿತು. ವಾರಿಯರ್ಸ್ ತಂಡವು ಈ ಮುಂಚೆಯೇ ನಾಕೌಟ್ ಪ್ರವೇಶದಿಂದ ಹೊರಬಿತ್ತು.
ಇನ್ನುಳಿದಿರುವ ಮುಂಬೈ, ಗುಜರಾತ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ನಾಕೌಟ್ ಪ್ರವೇಶ ಖಚಿತಪಡಿಸಿಕೊಂಡಿವೆ. ಆದರೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ನೇರ ಫೈನಲ್ ಪ್ರವೇಶಿಸಲು ಪೈಪೋಟಿ ನಡೆಸುತ್ತಿವೆ. 10 ಅಂಕ ಗಳಿಸಿರುವ ಡೆಲ್ಲಿ ಅಗ್ರಸ್ಥಾನದಲ್ಲಿದೆ. ತನ್ನ ಎಲ್ಲ 8 ಪಂದ್ಯಗಳನ್ನೂ ಆಡಿದೆ.
ತಲಾ 8 ಅಂಕ ಗಳಿಸಿರುವ ಗುಜರಾತ್ ಮತ್ತು ಮುಂಬೈ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಗುಜರಾತ್ ಇನ್ನೊಂದು ಮತ್ತು ಮುಂಬೈ ಇನ್ನೆರಡು ಪಂದ್ಯಗಳನ್ನು ಆಡಬೇಕಿದೆ. ಒಂದೊಮ್ಮೆ ಮುಂಬೈ ಎರಡೂ ಪಂದ್ಯಗಳಲ್ಲಿ ಗೆದ್ದರೆ ಅಗ್ರಸ್ಥಾನಕ್ಕೇರುವುದು ಖಚಿತ.
ಆದ್ದರಿಂದ ಗುಜರಾತ್ ಎದುರು ಜಯಿಸುವತ್ತ ಕಣ್ಣಿಟ್ಟಿದೆ. ತನ್ನ ಕೊನೆಯ ಪಂದ್ಯವನ್ನು ಆರ್‌ಸಿಬಿ ಎದುರು ಆಡಲಿದೆ. ಮುಂಬೈ ತಂಡದ ಹೆಲಿ ಮ್ಯಾಥ್ಯೂಸ್, ಆಲ್‌ರೌಂಡರ್ ನ್ಯಾಟ್ ಶಿವರ್ ಬ್ರಂಟ್ ಅವರು ಅಮೋಘ ಲಯದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಐದು ವಿಕೆಟ್ ಗಳಿಸಿದ್ದ ಅಮೆಲಿಯಾ ಕೆರ್ ಬೌಲಿಂಗ್ ವಿಭಾಗದ ಪ್ರಮುಖ ಶಕ್ತಿಯಾಗಿದ್ದಾರೆ. ಮಧ್ಯಮವೇಗಿ ಶಬ್ನಿಮ್ ಇಸ್ಮಾಯಿಲ್ ಅವರು ಕಳೆದ ಪಂದ್ಯದಲ್ಲಿ ಹೆಚ್ಚು ರನ್‌ಗಳನ್ನು ನೀಡಿದ್ದರು. ಅವರು ತಮ್ಮ ಲಯಕ್ಕೆ ಮರಳಿದರೆ ಮುಂಬೈ ಬೌಲಿಂಗ್ ಮತ್ತಷ್ಟು ಬಲಿಷ್ಠವಾಗಲಿದೆ.
ಆ್ಯಷ್ಲೆ ಗಾರ್ಡನರ್ ನಾಯಕತ್ವದ ಗುಜರಾತ್ ತಂಡವು ವಡೋದರಾದಲ್ಲಿ ಮೊದಲ ಹಂತದ ಪಂದ್ಯಗಳು ಮುಗಿದಾಗ ಪಾಯಿಂಟ್ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿತ್ತು. ನಂತರದ ಪಂದ್ಯಗಳಲ್ಲಿ ಅಮೋಘ ಆಟವಾಡಿ ನಾಕೌಟ್ ಹಂತಕ್ಕೆ ಪ್ರವೇಶ ಗಿಟ್ಟಿಸಿದೆ. ತಂಡದ ಬೆತ್ ಮೂನಿ, ಹರ್ಲಿನ್ ಡಿಯೊಲ್, ಗಾರ್ಡನರ್, ದಿಯಾಂದ್ರ ಡಾಟಿನ್ ಅವರು ಉತ್ತಮ ಲಯದಲ್ಲಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಮುಂಬೈ ತಂಡದ ಎದುರು ಗುಜರಾತ್ ಸೋತಿತ್ತು. ಇದೀಗ ಮುಯ್ಯಿ ತೀರಿಸಿಕೊಳ್ಳುವ ಅವಕಾಶ ಒದಗಿಬಂದಿದೆ.
ಪಂದ್ಯ ಆರಂಭ : ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.