ADVERTISEMENT

ಸೈಯದ್ ಮುಷ್ತಾಕ್ ಅಲಿ ಟೂರ್ನಿ: ಫೈನಲ್‌ನಲ್ಲಿ ಮುಂಬೈ, ಮಧ್ಯಪ್ರದೇಶ ಹಣಾಹಣಿ

ಚಿನ್ನಸ್ವಾಮಿ ಅಂಗಳದಲ್ಲಿ ಅಜಿಂಕ್ಯ ರಹಾನೆ, ರಜತ್ ಪಾಟೀದಾರ್ ಆರ್ಭಟ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 16:25 IST
Last Updated 13 ಡಿಸೆಂಬರ್ 2024, 16:25 IST
<div class="paragraphs"><p>ಮುಂಬೈ ಕ್ರಿಕೆಟ್ ತಂಡದ ಬ್ಯಾಟರ್ ಅಜಿಂಕ್ಯ ರಹಾನೆ&nbsp; </p></div>

ಮುಂಬೈ ಕ್ರಿಕೆಟ್ ತಂಡದ ಬ್ಯಾಟರ್ ಅಜಿಂಕ್ಯ ರಹಾನೆ 

   

–ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್

ಬೆಂಗಳೂರು: ಶ್ರೇಯಸ್ ಅಯ್ಯರ್ ನಾಯಕತ್ವದ ಮುಂಬೈ ಮತ್ತು ರಜತ್ ಪಾಟೀದಾರ್ ನೇತೃತ್ವದ ಮಧ್ಯಪ್ರದೇಶ ತಂಡಗಳು ಸೈಯದ್ ಮುಷ್ತಾಕ್ ಅಲಿ  ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. 

ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಅಜಿಂಕ್ಯ ರಹಾನೆ (98; 56ಎ, 4X11, 6X5) ಅಬ್ಬರದ ಬ್ಯಾಟಿಂಗ್ ಬಲದಿಂದ ಮುಂಬೈ ತಂಡವು 6 ವಿಕೆಟ್‌ಗಳಿಂದ ಬರೋಡಾ ಎದುರು ಜಯಿಸಿತು. 

ಸಂಜೆ ನಡೆದ ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಸಿಡಿಲಬ್ಬರದ ಅರ್ಧಶತಕ ಬಾರಿಸಿದ ರಜತ್ (ಅಜೇಯ 66; 29ಎ, 4X4, 6X6) ನೆರವಿನಿಂದ ಮಧ್ಯಪ್ರದೇಶ ತಂಡವು 7 ವಿಕೆಟ್‌ಗಳಿಂದ ಡೆಲ್ಲಿ ವಿರುದ್ಧ ಗೆದ್ದಿತು. 

ಉಭಯ ತಂಡಗಳು ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಸೆಣಸಲಿವೆ.

ಅಜಿಂಕ್ಯ ಆರ್ಭಟ: ಭಾರತ ತಂಡಕ್ಕೆ ಮರಳಲು ಕಾತುರದಿಂದ ಕಾಯುತ್ತಿರುವ ಅಜಿಂಕ್ಯ ರಹಾನೆ ಈ ಟೂರ್ನಿಯಲ್ಲಿ 5ನೇ ಅರ್ಧಶತಕ ದಾಖಲಿಸಿದರು. ಇಲ್ಲಿ ಕೇವಲ 2 ರನ್‌ ಅಂತರದಿಂದ ಶತಕ ಕೈತಪ್ಪಿಸಿಕೊಂಡರು. ಕ್ವಾರ್ಟರ್‌ಫೈನಲ್‌ನಲ್ಲಿ 84, ಲಿಂಗ್ ಹಂತದ ಕೊನೆಯ ಪಂದ್ಯದಲ್ಲಿ 95 ರನ್‌ ಹೊಡೆದು, ಶತಕದಂಚಿನಲ್ಲಿ ಎಡವಿದ್ದರು. ಒಟ್ಟು 7 ಇನಿಂಗ್ಸ್‌ಗಳಿಂದ 432 ರನ್‌ ಪೇರಿಸಿದ್ದಾರೆ. 

ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ತಂಡದ ಬೌಲಿಂಗ್ ಪಡೆಯು ಪರಿಣಾಮಕಾರಿ ದಾಳಿ ನಡೆಸಿತು. ಇದರಿಂದಾಗಿ ಬರೋಡಾ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 158 ರನ್ ಗಳಿಸಿತು. ಬರೋಡಾ ನಾಯಕ ಕೃಣಾಲ್ ಪಾಂಡ್ಯ (30; 24ಎ) ಮತ್ತು ಶಿವಾಲಿಕ್ ಶರ್ಮಾ (ಔಟಾಗದೆ 36) ಅವರಿಬ್ಬರೂ ಕಾಣಿಕೆ ನೀಡಿದರು. 

ಗುರಿ ಬೆನ್ನಟ್ಟಿದ್ದ ಮುಂಬೈ ತಂಡವು 17.2 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 164 ರನ್ ಗಳಿಸಿ ಗೆದ್ದಿತು. ನಾಯಕ ಶ್ರೇಯಸ್ (46; 30ಎ) ಮತ್ತು ಅಜಿಂಕ್ಯ ಅವರ ಆರ್ಭಟ ರಂಗೇರಿತು. 

ಇನ್ನೊಂದು ಪಂದ್ಯದಲ್ಲಿ; ಡೆಲ್ಲಿ ತಂಡವುಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 146 ರನ್ ಗಳಿಸಿತು. ಅದಕ್ಕುತ್ತರವಾಗಿ ಮಧ್ಯಪ್ರದೇಶ ತಂಡವು 15.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 152 ರನ್ ಗಳಿಸಿ ಜಯಿಸಿತು. 

ನುಗ್ಗಿದ ಅಭಿಮಾನಿಗಳು: ಮುಂಬೈ ಮತ್ತು ಬರೋಡಾ ಪಂದ್ಯವು ನಡೆಯುವ ಹೊತ್ತಿನಲ್ಲಿ ಅಭಿಮನಿಗಳಿಬ್ಬರು ಮೈದಾನಕ್ಕೆ ನುಗ್ಗಿ ಹಾರ್ದಿಕ್ ಪಾಂಡ್ಯ ಅವರ ಕಾಲುಮುಟ್ಟಿ ನಮಸ್ಕರಿಸಿದರು. ಬೌಂಡರಿಲೈನ್ ಬೇಲಿ ಜಿಗಿದು ನುಗ್ಗಿದ್ದ ಅಭಿಮಾನಿಗಳನ್ನು ಭದ್ರತಾ ಸಿಬ್ಬಂದಿಯು ಹೊರಗೆ ಕರೆದುಕೊಂಡು ಹೋದರು. 

ದಿನದ ಎರಡೂ ಪಂದ್ಯಗಳನ್ನು ನೋಡಲು ಕ್ರೀಡಾಂಗಣದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. 

ಸಂಕ್ಷಿಪ್ತ ಸ್ಕೋರು: ಬರೋಡಾ: 20 ಓವರ್‌ಗಳಲ್ಲಿ 7ಕ್ಕೆ158 (ಶಾಶ್ವತ್ ರಾವತ್ 33, ಕೃಣಾಲ್ ಪಾಂಡ್ಯ 30, ಶಿವಾಲಿಕ್ ಶರ್ಮಾ 36, ಅತಿಥ್ ಶೇಠ್ 22, ಸೂರ್ಯಾಂಶ್ ಶೆಡಗೆ 11ಕ್ಕೆ2) ಮುಂಬೈ:17.2 ಓವರ್‌ಗಳಲ್ಲಿ 4ಕ್ಕೆ164 (ಅಜಿಂಕ್ಯ ರಹಾನೆ 98, ಶ್ರೇಯಸ್ ಅಯ್ಯರ್ 46, ಹಾರ್ದಿಕ್ ಪಾಂಡ್ಯ 29ಕ್ಕೆ1, ಅಭಿಮನ್ಯು ಸಿಂಗ್ ರಜಪೂತ್ 10ಕ್ಕೆ1) ಫಲಿತಾಂಶ: ಮುಂಬೈ ತಂಡಕ್ಕೆ 6 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಅಜಿಂಕ್ಯ ರಹಾನೆ.

ಡೆಲ್ಲಿ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 146 (ಪ್ರಿಯಾಂಶ್ ಆರ್ಯ 29, ಅನುಜ್ ರಾವತ್ ಔಟಾಗದೆ 33, ಮಯಾಂಕ್ ರಾವತ್ 24, ವೆಂಕಟೇಶ್ ಅಯ್ಯರ್ 12ಕ್ಕೆ2) ಮಧ್ಯಪ್ರದೇಶ: 15.4 ಓವರ್‌ಗಳಲ್ಲಿ 3ಕ್ಕೆ152 (ಹರ್ಷ ಗೌಳಿ 30, ಹರಪ್ರೀತ್ ಸಿಂಗ್ ಭಾಟಿಯಾ ಔಟಾಗದೆ 46, ರಜತ್ ಪಾಟೀದಾರ್ ಔಟಾಗದೆ 66, ಇಶಾಂತ್ ಶರ್ಮಾ 12ಕ್ಕೆ2, ಹಿಮಾಂಶು ಚವ್ಹಾಣ 37ಕ್ಕೆ1) ಫಲಿತಾಂಶ:ಮಧ್ಯಪ್ರದೇಶ ತಂಡಕ್ಕೆ 7 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ರಜತ್ ಪಾಟೀದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.