ADVERTISEMENT

ವಿನಯ್‌–ಮಿಥುನ್‌ ಛಲದ ಹೋರಾಟ: ಸತತ ಐದನೇ ಜಯ ದಾಖಲಿಸಿದ ಕರ್ನಾಟಕ

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2019, 11:44 IST
Last Updated 27 ಫೆಬ್ರುವರಿ 2019, 11:44 IST
ಆರ್‌. ವಿನಯ್‌ ಕುಮಾರ್‌ 
ಆರ್‌. ವಿನಯ್‌ ಕುಮಾರ್‌    

ಕಟಕ್‌: ರೋಚಕ ಘಟ್ಟದಲ್ಲಿ ಸ್ಫೋಟಕ ಬ್ಯಾಟಿಂಗ್‌ ಮಾಡಿದ ಆರ್‌.ವಿನಯ್‌ ಕುಮಾರ್‌ (ಔಟಾಗದೆ 34; 13ಎ, 4ಸಿ) ಮತ್ತು ಅಭಿಮನ್ಯು ಮಿಥುನ್‌ (ಔಟಾಗದೆ 18; 7ಎ, 1ಬೌಂ, 2ಸಿ) ಛತ್ತೀಸಗಡ ತಂಡದ ಗೆಲುವಿನ ಕನಸಿಗೆ ತಣ್ಣೀರು ಸುರಿದರು.

ಬಾರಾಬತಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ನಾಲ್ಕು ವಿಕೆಟ್‌ಗಳ ಜಯಭೇರಿ ಮೊಳಗಿಸಿತು. ಮನೀಷ್‌ ಪಾಂಡೆ ಬಳಗ ಟೂರ್ನಿಯಲ್ಲಿ ಸತತ ಐದನೇ ಗೆಲುವು ದಾಖಲಿಸಿದ ಶ್ರೇಯಕ್ಕೂ ಪಾತ್ರವಾಯಿತು.

ಈ ಜಯದೊಂದಿಗೆ ‍‘ಡಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿರುವ ರಾಜ್ಯ ತಂಡ ‘ನಾಕೌಟ್‌’ ಪ್ರವೇಶದ ಹಾದಿಯನ್ನು ಸುಲಭ ಮಾಡಿಕೊಂಡಿದೆ.

ADVERTISEMENT

ಮೊದಲು ಬ್ಯಾಟ್‌ ಮಾಡಿದ ಛತ್ತೀಸಗಡ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 171ರನ್‌ ದಾಖಲಿಸಿತು. ಎರಡನೇ ಓವರ್‌ನಲ್ಲಿ ಆರಂಭಿಕ ಆಟಗಾರ ಶಶಾಂಕ್‌ ಚಂದ್ರಕರ್‌ (3) ವಿಕೆಟ್‌ ಕಳೆದುಕೊಂಡರೂ ಈ ತಂಡ ಎದೆಗುಂದಲಿಲ್ಲ.

ರಿಷಭ್‌ ತಿವಾರಿ (33; 30ಎ, 4ಬೌಂ, 1ಸಿ), ನಾಯಕ ಹರ್‌ಪ್ರೀತ್‌ ಸಿಂಗ್‌ (79; 56ಎ, 8ಬೌಂ, 3ಸಿ) ಮತ್ತು ಅಮನ್‌ದೀಪ್‌ ಖರೆ (ಔಟಾಗದೆ 45; 31ಎ, 4ಬೌಂ, 2ಸಿ) ಜವಾಬ್ದಾರಿಯುತ ಆಟ ಆಡಿ ತಂಡ ಸವಾಲಿನ ಮೊತ್ತ ಪೇರಿಸಲು ನೆರವಾದರು.

ಕಠಿಣ ಗುರಿಯನ್ನು ಕರ್ನಾಟಕ 19.2 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ನಡೆಯದ ರೋಹನ್‌ ಆಟ: ಹಿಂದಿನ ಎರಡು ಪಂದ್ಯಗಳಲ್ಲಿ ಅಬ್ಬರಿಸಿದ್ದ ರೋಹನ್‌ ಕದಂ (16; 16ಎ, 3ಬೌಂ) ಛತ್ತೀಸಗಡ ಬೌಲರ್‌ಗಳ ಎದುರು ರಟ್ಟೆ ಅರಳಿಸಿ ಆಡಲು ವಿಫಲರಾದರು. ಮಯಂಕ್‌ ಅಗರವಾಲ್‌ (21; 17ಎ, 3ಬೌಂ) ಕೂಡಾ ದೊಡ್ಡ ಮೊತ್ತ ಪೇರಿಸಲಿಲ್ಲ.

ಮನೀಷ್‌ ಪಾಂಡೆ (9) ಮತ್ತು ವಿಕೆಟ್‌ ಕೀಪರ್‌ ಬಿ.ಆರ್‌.ಶರತ್‌ (0) ಲಘುಬಗೆಯಲ್ಲಿ ವಿಕೆಟ್‌ ನೀಡಿದ್ದರಿಂದ ತಂಡದ ಮೇಲೆ ಆತಂಕದ ಕಾರ್ಮೋಡ ಕವಿದಿತ್ತು.

ಈ ಹಂತದಲ್ಲಿ ಒಂದಾದ ಕರುಣ್‌ ನಾಯರ್‌ (35; 28ಎ, 3ಬೌಂ, 1ಸಿ) ಮತ್ತು ಜೆ.ಸುಚಿತ್‌ (34; 24ಎ, 3ಬೌಂ, 1ಸಿ) ಮಿಂಚಿನ ಬ್ಯಾಟಿಂಗ್‌ ನಡೆಸಿ ತಂಡದ ಗೆಲುವಿನ ಕನಸು ಚಿಗುರೊಡೆಯುವಂತೆ ಮಾಡಿದರು.

17ನೇ ಓವರ್‌ನ ವೇಳೆಗೆ ಪ್ರಮುಖ ಆರು ವಿಕೆಟ್‌ ಕಳೆದುಕೊಂಡಿದ್ದ ರಾಜ್ಯ ತಂಡ 122ರನ್‌ ಮಾತ್ರ ಗಳಿಸಿತ್ತು. ಹೀಗಾಗಿ ಜಯ ಕಷ್ಟ ಎಂದೇ ಭಾವಿಸಲಾಗಿತ್ತು.

ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ವಿನಯ್‌ ಮತ್ತು ಮಿಥುನ್‌ ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದರು. ಮುರಿಯದ ಏಳನೇ ವಿಕೆಟ್‌ಗೆ ಈ ಜೋಡಿ 53 ರನ್‌ ಕಲೆಹಾಕಿ ಮನೀಷ್‌ ಪಡೆಯ ಆಟಗಾರರು ಖುಷಿಯ ಕಡಲಲ್ಲಿ ತೇಲುವಂತೆ ಮಾಡಿತು.

ಸಂಕ್ಷಿಪ್ತ ಸ್ಕೋರ್‌
ಛತ್ತೀಸಗಡ: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 171 (ರಿಷಭ್ ತಿವಾರಿ 33, ಶಶಾಂಕ್‌ ಚಂದ್ರಕರ್‌ 3, ಹರ್‌ಪ್ರೀತ್‌ ಸಿಂಗ್‌ 79, ಅಮನ್‌ದೀಪ್‌ ಖರೆ ಔಟಾಗದೆ 45; ಅಭಿಮನ್ಯು ಮಿಥುನ್‌ 46ಕ್ಕೆ1, ವಿ. ಕೌಶಿಕ್‌ 36ಕ್ಕೆ1, ಶ್ರೇಯಸ್‌ ಗೋಪಾಲ್‌ 19ಕ್ಕೆ1).

ಕರ್ನಾಟಕ: 19.2 ಓವರ್‌ಗಳಲ್ಲಿ 6 ವಿಕೆಟ್‌ಗೆ 175 (ರೋಹನ್‌ ಕದಂ 16, ಮಯಂಕ್‌ ಅಗರವಾಲ್‌ 21, ಕರುಣ್‌ ನಾಯರ್‌ 35, ಮನೀಷ್‌ ಪಾಂಡೆ 9, ಜೆ.ಸುಚಿತ್‌ 34, ಆರ್‌.ವಿನಯ್‌ ಕುಮಾರ್‌ ಔಟಾಗದೆ 34, ಅಭಿಮನ್ಯು ಮಿಥುನ್‌ ಔಟಾಗದೆ 18; ವಿಶಾಲ್‌ ಕುಶ್ವಾಹ್‌ 40ಕ್ಕೆ2, ಶುಭಂ ಸಿಂಗ್‌ 35ಕ್ಕೆ2, ಐಶ್ವರ್ಯ ಮೌರ್ಯ 13ಕ್ಕೆ2).

ಫಲಿತಾಂಶ: ಕರ್ನಾಟಕ ತಂಡಕ್ಕೆ 4 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.