
ಕೋಲ್ಕತ್ತ: ಭಾರತ ಕ್ರಿಕೆಟ್ ತಂಡಕ್ಕೆ ಮರಳುವ ತವಕದಲ್ಲಿರುವ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ರಣಜಿ ಟ್ರೋಫಿ ಟೂರ್ನಿಯ ಎರಡೂ ಪಂದ್ಯಗಳಲ್ಲಿ ಅಮೋಘವಾಗಿ ಬೌಲಿಂಗ್ ಮಾಡಿ ತಮ್ಮ ಫಿಟ್‌ನೆಸ್ ಸಾಬೀತುಮಾಡಿದ್ದಾರೆ.
ರಣಜಿ ಟ್ರೋಫಿ ಟೂರ್ನಿಯಲ್ಲಿ ಬಂಗಾಳ ತಂಡಕ್ಕೆ ಆಡುತ್ತಿರುವ ಶಮಿ ಅವರು ಗುಜರಾತ್ ವಿರುದ್ಧದ ಪಂದ್ಯದಲ್ಲಿ ಎಂಟು ವಿಕೆಟ್ ಕಬಳಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಮೂರು ವಿಕೆಟ್ ಗಳಿಸಿದ ಅವರು, ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದರು. ಅವರ ಆಟದ ನೆರವಿನಿಂದ ಬಂಗಾಳ ತಂಡವು 141 ರನ್‌ಗಳಿಂದ ಗೆದ್ದಿದೆ.
35 ವರ್ಷದ ಶಮಿ ಅವರು ಇದಕ್ಕೂ ಮುನ್ನ ಉತ್ತರಾಖಂಡದ ವಿರುದ್ಧದ ಪಂದ್ಯದಲ್ಲೂ ಏಳು ವಿಕೆಟ್ ಪಡೆದು ಪಂದ್ಯದ ಆಟಗಾರ ಗೌರವಕ್ಕೆ ಪಾತ್ರರಾಗಿದ್ದರು. ಸತತ ಎರಡೂ ಪಂದ್ಯಗಳಲ್ಲಿ ಮಿಂಚುವ ಮೂಲಕ ತಮ್ಮ ಫಿಟ್‌ನೆಸ್ ಪ್ರಶ್ನಿಸಿದ್ದ ಬಿಸಿಸಿಐ ಆಯ್ಕೆ ಸಮಿತಿಗೆ ಆಟದ ಮೂಲಕವೇ ಉತ್ತರ ನೀಡಿದ್ದಾರೆ.
‘ಕಠಿಣ ಪರಿಸ್ಥಿತಿಯಿಂದ ಚೇತರಿಸಿಕೊಂಡು ಮಾನಸಿಕವಾಗಿ, ದೈಹಿಕವಾಗಿ ಸುದೃಢವಾಗಿರುವೆ. ರಾಷ್ಟ್ರೀಯ ತಂಡಕ್ಕೆ ವಾಪಸಾಗಲು ಸಿದ್ಧನಿದ್ದೇನೆ. ಎಲ್ಲಾ ಸಮಯದಲ್ಲಿ ಫಿಟ್ ಆಗಿ ಇರುವುದು ನನ್ನ ಆದ್ಯತೆ. ನನ್ನ ಪ್ರಯತ್ನ ಮುಂದುವರಿಸುವೆ. ಉಳಿದದ್ದು ಆಯ್ಕೆದಾರರ ಕೈಯಲ್ಲಿದೆ’ ಎಂದು ಶಮಿ ಹೇಳಿದ್ದಾರೆ.
ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಕಡೆಗಣಿಸಿದ ಆಯ್ಕೆಗಾರರ ವಿರುದ್ಧ ಶಮಿ ಅಸಮಾಧಾನ ಹೊರಹಾಕಿದ್ದರು. ಆಯ್ಕೆ ಸಮಿತಿಗೆ ಫಿಟ್ನೆಸ್ ಬಗ್ಗೆ ಅಪ್ಡೇಟ್ ಮಾಡುವುದು ತಮ್ಮ ಕೆಲಸವಲ್ಲ ಎಂದು ಹೇಳಿದ್ದರು. ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊನೆಯ ಬಾರಿ ಭಾರತ ತಂಡವನ್ನು
ಪ್ರತಿನಿಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.