ADVERTISEMENT

ನಜ್ಮುಲ್ ಶತಕ: ಬಾಂಗ್ಲಾದೇಶ ನಿರಾಳ

ಶ್ರೀಲಂಕಾ ಎದುರಿನ ಮೊದಲ ಟೆಸ್ಟ್ ಪಂದ್ಯ: ಬೃಹತ್ ಮೊತ್ತದತ್ತ ಮೊಮಿನುಲ್ ಬಳಗ

ಏಜೆನ್ಸೀಸ್
Published 21 ಏಪ್ರಿಲ್ 2021, 16:44 IST
Last Updated 21 ಏಪ್ರಿಲ್ 2021, 16:44 IST
ಶತಕ ಗಳಿಸಿದ ಬಾಂಗ್ಲಾದೇಶದ ನಜ್ಮುಲ್ ಹೊಸೇನ್ –ಎಎಫ್‌ಪಿ ಚಿತ್ರ
ಶತಕ ಗಳಿಸಿದ ಬಾಂಗ್ಲಾದೇಶದ ನಜ್ಮುಲ್ ಹೊಸೇನ್ –ಎಎಫ್‌ಪಿ ಚಿತ್ರ   

ಪಲ್ಲೆಕೆಲೆ, ಶ್ರೀಲಂಕಾ: ಎರಡನೇ ಓವರ್‌ನಲ್ಲೇ ವಿಕೆಟ್ ಉರುಳಿಸಿ ಸಂಭ್ರಮಿಸಿದ ಶ್ರೀಲಂಕಾ ತಂಡ ನಂತರ ದಿನವಿಡೀ ಮರುಗಿತು. ಅಮೋಘ ಬ್ಯಾಟಿಂಗ್ ಮೂಲಕ ಆತಿಥೇಯ ಬೌಲರ್‌ಗಳನ್ನು ಕಂಗೆಡಿಸಿದ ಬಾಂಗ್ಲಾದೇಶ ಮೊದಲ ಟೆಸ್ಟ್‌ನಲ್ಲಿ ಉತ್ತಮ ಮೊತ್ತದತ್ತ ಹೆಜ್ಜೆ ಹಾಕಿದೆ.

ಮೊದಲ ದಿನವಾದ ಬುಧವಾರ ಆಟದ ಮುಕ್ತಾಯದ ವೇಳೆ 90 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್‌ ಕಳೆದುಕೊಂಡು ತಂಡ 302 ರನ್ ಗಳಿಸಿದೆ. ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ನಜ್ಮುಲ್ ಹೊಸೇನ್ ಶಾಂಟೊ (126; 288 ಎಸೆತ, 14 ಬೌಂಡರಿ, 1 ಸಿಕ್ಸರ್‌) ಅವರ ಶತಕ, ಆರಂಭಿಕ ಬ್ಯಾಟ್ಸ್‌ಮನ್‌ ತಮೀಮ್ ಇಕ್ಬಾಲ್ (90; 101ಎ, 15 ಬೌಂ) ಮತ್ತು ನಾಯಕ ಮೊಮಿನುಲ್ ಹಕ್‌ (64; 150 ಎ, 6 ಬೌಂ) ಅವರ ಅರ್ಧಶತಕಗಳು ತಂಡದ ಇನಿಂಗ್ಸ್‌ಗೆ ಬಲ ತುಂಬಿದವು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ಎಂಟು ರನ್ ಗಳಿಸಿದ್ದಾಗ ಸೈಫ್ ಹಸನ್ ಅವರ ವಿಕೆಟ್ ಕಳೆದುಕೊಂಡಿತು. ತಮೀಮ್ ಜೊತೆಗೂಡಿದ ನಜ್ಮುಲ್ ಎರಡನೇ ವಿಕೆಟ್‌ಗೆ 144 ರನ್‌ಗಳ ಜೊತೆಯಾಟವಾಡಿದರು. ಶತಕದತ್ತ ಸಾಗಿದ್ದ ತಮೀಮ್ ಭೋಜನ ವಿರಾಮದ ನಂತರ ಔಟಾದರು.

ADVERTISEMENT

ನಂತರ ನಜ್ಮುಲ್ ಮತ್ತು ಮೊಮಿನುಲ್ ನಡುವಿನ ಆಟ ರಂಗೇರಿತು. ಲಂಕಾ ಬೌಲರ್‌ಗಳ ಬೆವರಿಳಿಸಿದ ಇವರಿಬ್ಬರು ಮೂರನೇ ವಿಕೆಟ್‌ಗೆ 150 ರನ್ ಸೇರಿಸಿ ಔಟಾಗದೇ ಉಳಿದರು. ಕೊನೆಯ ಅವಧಿಯಲ್ಲಿ 74ನೇ ಓವರ್‌ನಲ್ಲಿ ಇವರಿಬ್ಬರು ತಂಡದ ಮೊತ್ತವನ್ನು 250 ದಾಟಿಸಿದರು. ಇದರ ಬೆನ್ನಲ್ಲೇ ನಜ್ಮುಲ್ ಶತಕ ಪೂರೈಸಿದರು. ಮೂರಂಕಿ ದಾಟಲು ಅವರು 235 ಎಸೆತ ತೆಗೆದುಕೊಂಡರು. ಆಗಲೇ 12 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದ್ದರು.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ, ಮೊದಲ ಇನಿಂಗ್ಸ್‌: 90 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 302 (ತಮೀಮ್ ಇಕ್ಬಾಲ್‌ 90, ನಜ್ಮುಲ್ ಹೊಸೇನ್ ಔಟಾಗದೆ 126, ಮೊಮಿನುಲ್ ಹಕ್‌ ಔಟಾಗದೆ 64; ವಿಶ್ವ ಫೆರ್ನಾಂಡೊ 62ಕ್ಕೆ2). ಶ್ರೀಲಂಕಾ ಎದುರಿನ ಪಂದ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.