
ನೇಥನ್ ಎಲಿಸ್
ಕೊಲಂಬೊ (ಪಿಟಿಐ): ವೇಗದ ಬೌಲರ್ ನೇಥನ್ ಎಲಿಸ್ (3.5–1–12–4) ಅವರ ಅಮೋಘ ಬೌಲಿಂಗ್ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ತಂಡ ಬುಧವಾರ 67 ರನ್‌ಗಳಿಂದ ಐರ್ಲೆಂಡ್ ತಂಡವನ್ನು ಸದೆಬಡಿದು ಶುಭಾರಂಭ ಮಾಡಿತು. ತಂಡ ಪೂರ್ಣ ಸಾಮರ್ಥ್ಯ ಹೊಂದಿಲ್ಲದಿದ್ದರೂ, ‘ಬಿ’ ಗುಂಪಿನ ಈ ಪಂದ್ಯದಲ್ಲಿ ಗೆಲುವಿಗೆ ಪರದಾಡಲಿಲ್ಲ.
ಮೊದಲ ಎಲ್ಲಿಸ್ (3.5–1–12–4) ಅವರು ಐರ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರೆ, ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ (4–0–23–4) ಅವರು ಕೆಳಕ್ರಮಾಂಕವನ್ನು ಧ್ವಂಸ ಮಾಡಿದರು. 183 ರನ್‌ಗಳ ಗುರಿಯನ್ನು ಎದುರಿಸಿದ ಐರ್ಲೆಂಡ್ 16.5 ಓವರುಗಳಲ್ಲಿ 9 ವಿಕೆಟ್‌ಗೆ 115 ರನ್ ಗಳಿಸಲಷ್ಟೇ ಶಕ್ತವಾಯಿತು. ಅನುಭವಿ ಆಟಗಾರ ಪಾಲ್ ಸ್ಟರ್ಲಿಂಗ್ ಗಾಯಾಳಾದ ಕಾರಣ ಬ್ಯಾಟಿಂಗ್ ಮಾಡಲಾಗಲಿಲ್ಲ.
ನಾಯಕ ಮಿಚೆಲ್ ಮಾರ್ಷ್ ತೊಡೆಯ ನೋವಿನಿಂದ ಈ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಮಿಚೆಲ್ ಸ್ಟಾರ್ಕ್ (ಟಿ20ಗೆ ನಿವೃತ್ತಿ), ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹ್ಯಾಜಲ್‌ವುಡ್ (ಇಬ್ಬರೂ ಗಾಯಾಳುಗಳು) ಅವರು ತಂಡದಲ್ಲಿರಲಿಲ್ಲ. ಆದರೆ ಅವರ ಗೈರಿನಲ್ಲಿ ಪ್ರಮುಖ ವೇಗದ ಬೌಲರ್ ಹೊಣೆಯನ್ನು ಎಲಿಸ್ ಸಮರ್ಥವಾಗಿ ನಿಭಾಯಿಸಿದರು.
ಎಲಿಸ್ ಬೌಲಿಂಗ್‌ನಲ್ಲಿ ವೇಗವಾಗಿ ಕೆಳಮಟ್ಟದಲ್ಲಿ ಧಾವಿಸಿ ಬಂದ ಚೆಂಡಿಗೆ ಆರಂಭ ಆಟಗಾರ ರಾಸ್ ಅಡೇರ್ ಅವರು ಬೌಲ್ಡ್ ಆದರು. ಬೆನ್ ಕ್ಯಾಲಿಟ್ಝ್ ಅವರು ಎದೆಯ ಮಟ್ಟಕ್ಕೆ ಎಗರಿದ ಚೆಂಡನ್ನು ಆಡಲು ಹೋಗಿ ವಿಕೆಟ್‌ಗೆ ಎಳೆದುಕೊಂಡರು. ಆರಂಭದಲ್ಲೇ ದಾಳಿಗಿಳಿದ ಎಡಗೈ ಸ್ಪಿನ್ನರ್ ಕುನ್ಹೆಮನ್ ಕೂಡ ವಿಕೆಟ್ ಪಡೆದರು. ಹೀಗಾಗಿ ಐರ್ಲೆಂಡ್ ಆಘಾತಕ್ಕೆ ಒಳಗಾಯಿತು. ಜಾರ್ಜ್ ಡಾಕ್ರೆಲ್ (41, 29 ಎಸೆತ) ಅವರ ಆಟದಿಂದಾಗಿ ತಂಡ ನೂರರ ಗಡಿ ದಾಟಲು ಸಾಧ್ಯವಾಯಿತು.
ಇದಕ್ಕೆ ಮೊದಲು, ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದ ಆಸ್ಟ್ರೇಲಿಯಾ ತಂಡ 88 ರನ್‌ಗಳಾಗುವಷ್ಟರಲ್ಲಿ 4 ವಿಕೆಟ್ (9.3 ಓವರ್) ಕಳೆದುಕೊಂಡಿತ್ತು. ಈ ವೇಳೆ ಮ್ಯಾಥ್ಯೂ ರೆನ್ಶಾ (37, 33 ಎಸೆತ) ಮತ್ತು ಮಾರ್ಕಸ್ ಸ್ಟೊಯಿನಿಸ್ (45, 29ಎ) ಐದನೇ ವಿಕೆಟ್‌ಗೆ 61 ರನ್ ಜೊತೆಯಾಟದ ಮೂಲಕ ಚೇತರಿಕೆ ನೀಡಿದ್ದರಿಂದ ತಂಡ 20 ಓವರುಗಳಲ್ಲಿ 6 ವಿಕೆಟ್‌ಗೆ 182 ರನ್‌ಗಳ ಸವಾಲಿನ ಮೊತ್ತ ಗಳಿಸಿತು.
ನಿಧಾನಗತಿಯ ಪಿಚ್‌ನಲ್ಲಿ ಐರ್ಲೆಂಡ್ ಸ್ಪಿನ್ನರ್‌ಗಳು ಮಿತವ್ಯಯಿಗಳಾದರು. ಆದರೆ ಕೆಲವು ಕ್ಯಾಚುಗಳನ್ನು ಬಿಟ್ಟಿದು ದುಬಾರಿಯಾಯಿತು. ಹಂಗಾಮಿ ನಾಯಕ ಟ್ರಾವಿಸ್ ಹೆಡ್ (1), ಕ್ಯಾಮರಾನ್ ಗ್ರೀನ್ (21) ಮತ್ತು ಮ್ಯಾಕ್ಸ್‌ವೆಲ್ (9) ವಿಫಲರಾದರು. ಆದರೆ ಐರ್ಲೆಂಡ್ ತಂಡ ಕೊನೆಯ ಐದು ಓವರುಗಳಲ್ಲಿ 53 ರನ್ ಬಿಟ್ಟುಕೊಟ್ಟಿತು.
ಆಸ್ಟ್ರೇಲಿಯಾ: 20 ಓವರುಗಳಲ್ಲಿ 6ಕ್ಕೆ 182 (ಜೋಶ್ ಇಂಗ್ಲಿಸ್ 37, ಮ್ಯಾಥ್ಯೂ ರೆನ್ಶಾ 37, ಮಾರ್ಕಸ್ ಸ್ಟೊಯಿನಿಸ್ 45; ಮಾರ್ಕ್ ಅಡೇರ್ 44ಕ್ಕೆ2);
ಐರ್ಲೆಂಡ್: 16.5 ಓವರುಗಳಲ್ಲಿ 115 (ಲೋರ್ಕನ್ ಟಕರ್ 24, ಜಾರ್ಜ್ ಡಾಕ್ರೆಲ್ 41; ನೇಥನ್ ಎಲಿಸ್ 12ಕ್ಕೆ4, ಆ್ಯಡಂ ಜಂಪಾ 23ಕ್ಕೆ4). ಪಂದ್ಯದ ಆಟಗಾರ: ನೇಥನ್ ಎಲಿಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.