ADVERTISEMENT

ಟಿ20 ವಿಶ್ವಕಪ್: ಮ್ಯಾಕ್ಸ್ ಒಡೌಡ್‌ ಅರ್ಧಶತಕ, ನೆದರ್ಲೆಂಡ್ಸ್‌ಗೆ ಮಣಿದ ಜಿಂಬಾಬ್ವೆ

ಪಿಟಿಐ
Published 2 ನವೆಂಬರ್ 2022, 13:00 IST
Last Updated 2 ನವೆಂಬರ್ 2022, 13:00 IST
ಮ್ಯಾಕ್ಸ್ ಒಡೌಡ್‌ ಬ್ಯಾಟಿಂಗ್‌– ಎಎಫ್‌ಪಿ ಚಿತ್ರ
ಮ್ಯಾಕ್ಸ್ ಒಡೌಡ್‌ ಬ್ಯಾಟಿಂಗ್‌– ಎಎಫ್‌ಪಿ ಚಿತ್ರ   

ಅಡಿಲೇಡ್‌: ಆರಂಭಿಕ ಆಟಗಾರ ಮ್ಯಾಕ್ಸ್ ಒಡೌಡ್‌ (52, 47ಎ, 4X8, 6X1) ಅವರ ಸೊಗಸಾದ ಅರ್ಧಶತಕ ಮತ್ತು ಬೌಲರ್‌ಗಳ ಶ್ರಮದಿಂದ ನೆದರ್ಲೆಂಡ್ಸ್ ತಂಡವು ಈ ಬಾರಿಯ ಟಿ20 ವಿಶ್ವಕಪ್ ಸೂಪರ್ 12 ಹಂತದಲ್ಲಿ ಮೊದಲ ಜಯ ಸಂಪಾದಿಸಿತು. ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಜಿಂಬಾಬ್ವೆ ತಂಡವನ್ನು ಪರಾಭವಗೊಳಿಸಿತು.

ನೆದರ್ಲೆಂಡ್ಸ್ ತಂಡವು ಈಗಾಗಲೇ ಟೂರ್ನಿಯ ಸೆಮಿಫೈನಲ್ ಅರ್ಹತೆಯ ಸ್ಪರ್ಧೆಯಿಂದ ಹೊರಬಿದ್ದಿದೆ. ಈ ಜಯದೊಂದಿಗೆ ಆ ತಂಡವು ಜಿಂಬಾಬ್ವೆಯನ್ನೂ ಬಹುತೇಕ ಹೊರದಬ್ಬಿತು.

ಟಾಸ್‌ ಗೆದ್ದ ಜಿಂಬಾಬ್ವೆ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಾಲ್‌ ವ್ಯಾನ್‌ ಮೀಕೆರನ್ (29ಕ್ಕೆ 3) ಅವರನ್ನೊಳಗೊಂಡ ನೆದರ್ಲೆಂಡ್ಸ್ ಬೌಲಿಂಗ್ ಪಡೆಯು ಕ್ರೇಗ್‌ ಇರ್ವಿನ್ ಬಳಗವನ್ನು 19.2 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲೌಟ್ ಮಾಡಿತು.

ADVERTISEMENT

ಗುರಿ ಬೆನ್ನತ್ತಿದ್ದ ನೆದರ್ಲೆಂಡ್ಸ್ ಇನ್ನೂ ಎರಡು ಓವರ್‌ಗಳು ಬಾಕಿ ಇರುವಂತೆಯೇ ಐದು ವಿಕೆಟ್‌ ಕಳೆದುಕೊಂಡು 120 ರನ್‌ ಗಳಿಸಿತು. ಮ್ಯಾಕ್ಸ್ ಒಡೌಡ್‌ ಮತ್ತು ಟಾಪ್‌ ಕೂಪರ್‌ (32) ಗೆಲುವಿನ ರೂವಾರಿಗಳಾದರು.

ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಜಿಂಬಾಬ್ವೆ ಪರ ಸಿಕಂದರ್ ರಾಜಾ (40, 24ಎ, 4X3, 6X3) ಮಾತ್ರ ಮಿಂಚಿದರು. ಸೀನ್ ವಿಲಿಯಮ್ಸ್ (28) ಕೂಡ ತಂಡವು ನೂರರ ಗಡಿ ದಾಟಲು ಕಾರಣರಾದರು. ಉಳಿದವರ ವೈಫಲ್ಯ ತಂಡವನ್ನು ಕಾಡಿತು.

ನೆದರ್ಲೆಂಡ್ಸ್ ತಂಡಕ್ಕಾಗಿ ಲೋಗನ್ ವ್ಯಾನ್ ಬೀಕ್‌ (17ಕ್ಕೆ 2), ಬ್ಯಾಸ್‌ ಡಿ ಲೀಡ್‌ (14ಕ್ಕೆ 2) ಬೌಲಿಂಗ್‌ನಲ್ಲಿ ಪರಿಣಾಮಕಾರಿ ಎನಿಸಿದರು.

ಜಿಂಬಾಬ್ವೆ ತಂಡವು ಈ ಮೊದಲು ಪಾಕಿಸ್ತಾನಕ್ಕೆ ಸೋಲುಣಿಸಿ ಅಚ್ಚರಿ ಮೂಡಿಸಿತ್ತು. ಸೂಪರ್ 12 ಹಂತದ ತನ್ನ ಕೊನೆಯ ಪಂದ್ಯದಲ್ಲಿ ಕ್ರೇಗ್ ಪಡೆಯು ಭಾರತ ತಂಡಕ್ಕೆ ಮುಖಾಮುಖಿಯಾಗಲಿದೆ.

ನೆದರ್ಲೆಂಡ್ಸ್‌ ತಂಡವು ದಕ್ಷಿಣ ಆಫ್ರಿಕಾ ಸವಾಲು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರು: ಜಿಂಬಾಬ್ವೆ 19.2 ಓವರ್‌ಗಳಲ್ಲಿ 117 (ಸೀನ್ ವಿಲಿಯಮ್ಸ್ 28, ಸಿಕಂದರ್ ರಾಜಾ 40; ಫ್ರೆಡ್‌ ಕ್ಲಾಸೆನ್‌ 17ಕ್ಕೆ 1, ಪಾಲ್ ವ್ಯಾನ್‌ ಮೀಕೆರನ್‌ 29ಕ್ಕೆ 3, ಬ್ರೆಂಡನ್ ಗ್ಲೋವರ್ 29ಕ್ಕೆ 2, ಲೋಗನ್ ವ್ಯಾನ್‌ ಬ್ರೀಕ್‌ 17ಕ್ಕೆ 2, ಬ್ಯಾಸ್‌ ಡಿ ಲೀಡ್‌ 14ಕ್ಕೆ 2).

ನೆದರ್ಲೆಂಡ್ಸ್: 18 ಓವರ್‌ಗಳಲ್ಲಿ 5 ವಿಕೆಟ್‌ಗೆ 120 (ಮ್ಯಾಕ್ಸ್ ಒಡೌಡ್‌ 52, ಟಾಮ್ ಕೂಪರ್ 32,ಬ್ಯಾಸ್‌ ಡಿ ಲೀಡ್‌ 12; ರಿಚರ್ಡ್‌ ಗರವಾ 18ಕ್ಕೆ 2, ಬ್ಲೆಸಿಂಗ್ ಮುಜರಬಾನಿ 23ಕ್ಕೆ 2, ಲ್ಯೂಕ್ ಜಾಂಗ್ವೆ 25ಕ್ಕೆ 1).

ಫಲಿತಾಂಶ: ನೆದರ್ಲೆಂಡ್ಸ್ ತಂಡಕ್ಕೆ 5 ವಿಕೆಟ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.