ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್
ದುಬೈ: ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್ ವಿರಾಟ್ ಕೊಹ್ಲಿ ಅವರು ರನ್ ಗಳಿಸಲು ಹೆಣಗಾಡುತ್ತಿದ್ದಾರೆಂದು ಎಂದಿಗೂ ಭಾವಿಸಬೇಡಿ ಎಂದು ಸಹ ಆಟಗಾರ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರೊಂದಿಗೆ 114 ರನ್‌ಗಳ ಅದ್ಭುತ ಜೊತೆಯಾಟ ಆಡಿರುವುದು ಸಂತಸ ಮೂಡಿಸಿದೆ. ವಿರಾಟ್ ರನ್‌ಗಾಗಿ ಪರದಾಡುವ ಬಗ್ಗೆ ನಾನು ಎಂದಿಗೂ ಯೋಚಿಸಲಿಲ್ಲ. ಅವರು (ಕೊಹ್ಲಿ) ಯಾವಾಗಲೂ ರನ್ ಗಳಿಸಲು ಹಾತೊರೆಯುತ್ತಿರುತ್ತಾರೆ. ಇದು ಹಲವು ವರ್ಷಗಳಿಂದ ಅವರು ಹೊಂದಿರುವ ಮನಸ್ಥಿತಿಯಾಗಿದೆ ಎಂದು ಅಯ್ಯರ್ ತಿಳಿಸಿದ್ದಾರೆ.
ಶನಿವಾರ ಕೊಹ್ಲಿ ಅವರು ಒಂದು ಗಂಟೆ ಮೊದಲೇ ಅಭ್ಯಾಸಕ್ಕೆ ಬಂದಿದ್ದರು. ಕೆಲವು ಎಸೆತಗಳನ್ನು ಎದುರಿಸಿದ್ದರು. ಜತೆಗೆ ಪಿಚ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು ಎಂದು ಅಯ್ಯರ್ ತಿಳಿಸಿದ್ದಾರೆ.
ದುಬೈಯಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾನುವಾರ ಭಾರತ ತಂಡವು 6 ವಿಕೆಟ್‌ಗಳಿಂದ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡವನ್ನು ಮಣಿಸಿತು. ‘ಎ’ ಗುಂಪಿನಲ್ಲಿರುವ ಉಭಯ ತಂಡಗಳಿಗೂ ಗುಂಪು ಹಂತದಲ್ಲಿ ತಲಾ ಒಂದು ಪಂದ್ಯ ಬಾಕಿ ಇದೆ. ಆದರೆ, ಪಾಕ್ ತಂಡವು ಸತತ ಎರಡೂ ಪಂದ್ಯಗಳಲ್ಲಿ ಸೋತು ಹೊರಬಿದ್ದಿದೆ.
ಆತಿಥೇಯ ಪಾಕ್ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಭಾರತ ತಂಡದ ಬೌಲರ್‌ಗಳ ದಾಳಿಯ ಎದುರು 241 ರನ್‌ಗಳ ಸಾಧಾರಣ ಗುರಿಯೊಡ್ಡಿತು. ಏಕದಿನ ಕ್ರಿಕೆಟ್‌ನಲ್ಲಿ 51ನೇ ಶತಕ ದಾಖಲಿಸಿದ ವಿರಾಟ್ ಕೊಹ್ಲಿ ಶತಕ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕದ ಬಲದಿಂದ ತಂಡವು 42.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 244 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.