ADVERTISEMENT

ಫೈನಲ್‌ನಲ್ಲಿ ಭಾರತಕ್ಕೆ ಸೋಲು; ವಿಶ್ವ ಟೆಸ್ಟ್‌ಗೆ ನ್ಯೂಜಿಲೆಂಡ್ ಪ್ರಥಮ ಚಾಂಪಿಯನ್

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌: ರಿಷಭ್ ಪಂತ್, ರವೀಂದ್ರ ಜಡೇಜ ಹೋರಾಟ; ಕಿವೀಸ್ ವೇಗಿಗಳ ಮಿಂಚು

ಪಿಟಿಐ
Published 23 ಜೂನ್ 2021, 18:17 IST
Last Updated 23 ಜೂನ್ 2021, 18:17 IST
ನ್ಯೂಜಿಲೆಂಡ್‌ನ ಟಿಮ್ ಸೌಥಿ ಸಂಭ್ರಮ
ನ್ಯೂಜಿಲೆಂಡ್‌ನ ಟಿಮ್ ಸೌಥಿ ಸಂಭ್ರಮ   

ಸೌತಾಂಪ್ಟನ್ : ‘ಕ್ಯಾಪ್ಟನ್ ಕೂಲ್‘ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡವು ಚೊಚ್ಚಲ ವಿಶ್ವ ಟೆಸ್ಟ್ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನ ಕಿರೀಟ ಧರಿಸಿತು.

ಏಜಿಸ್‌ ಬೌಲ್‌ನಲ್ಲಿ ಬುಧವಾರ ಮುಕ್ತಾಯವಾದ ಫೈನಲ್ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಭಾರತ ತಂಡವನ್ನು ಸೋಲಿಸಿದ ನ್ಯೂಜಿಲೆಂಡ್ ವಿಶ್ವ ಚಾಂಪಿಯನ್ ಪಟ್ಟಕ್ಕೇರಿತು. ಗೆಲುವಿಗಾಗಿ 53 ಓವರ್‌ಗಳಲ್ಲಿ 139 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ತಂಡವು ನಾಯಕ ಕೇನ್ (ಅಜೇಯ 52) ಮತ್ತು ರಾಸ್ ಟೇಲರ್ (ಅಜೇಯ 47) ತಾಳ್ಮೆಯ ಬ್ಯಾಟಿಂಗ್‌ ಬಲದಿಂದ 45.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 140 ರನ್ ಗಳಿಸಿತು. ಭಾರತದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಕಿವೀಸ್ ಎರಡನೇ ಇನಿಂಗ್ಸ್‌ನ ಆರಂಭದಲ್ಲಿಯೇ ಎರಡು ವಿಕೆಟ್ ಗಳಿಸಿ ಭರವಸೆ ಮೂಡಿಸಿದ್ದರು. ಮೊಹಮ್ಮದ್ ಶಮಿ ಕೂಡ ಉತ್ತಮ ದಾಳಿ ಮಾಡಿದರು. ಆದರೆ ಭಾರತದ ಬೌಲಿಂಗ್ ಪಡೆಯ ಪ್ರಯತ್ನಗಳಿಗೆ ಕೇನ್ ಮತ್ತು ಟೇಲರ್ ಅಡ್ಡಿಯಾಗಿ ನಿಂತರು.

ಸುಮಾರು ಎರಡು ವರ್ಷ ನಡೆದ ಡಬ್ಲ್ಯುಟಿಸಿಯ ಪಾಯಿಂಟ್ ಪಟ್ಟಿಯಲ್ಲಿ ಭಾರತ ಮೊದಲ ಮತ್ತು ನ್ಯೂಜಿಲೆಂಡ್ ಎರಡನೇ ಸ್ಥಾನ ಪಡೆದು ಪ್ರಶಸ್ತಿ ಸುತ್ತಿಗೆ ತಲುಪಿದ್ದವು.

ADVERTISEMENT

ಫೈನಲ್ ಪಂದ್ಯದ ಮೊದಲ ಮತ್ತು ನಾಲ್ಕನೇ ದಿನದಾಟಗಳು ಮಳೆಗೆ ಆಹುತಿಯಾಗಿದ್ದವು. ಆದ್ದರಿಂದ ಪಂದ್ಯವನ್ನು ಮೀಸಲಾಗಿದ್ದ ಆರನೇ ದಿನಕ್ಕೆ ವಿಸ್ತರಿಸಲಾಗಿತ್ತು. ಅಮೋಘ ಬೌಲಿಂಗ್ ಮಾಡಿದ ಟಿಮ್ ಸೌಥಿ (48ಕ್ಕೆ4) ಮತ್ತು ಟ್ರೆಂಟ್ ಬೌಲ್ಟ್ (39ಕ್ಕೆ3)ತಮ್ಮ ಸ್ವಿಂಗ್ ಅಸ್ತ್ರಗಳ ಮೂಲಕ ನ್ಯೂಜಿಲೆಂಡ್ ತಂಡ ಗೆಲುವಿನ ಅವಕಾಶ ಸೃಷ್ಟಿಸಿದರು.

ಎರಡನೇ ಇನಿಂಗ್ಸ್‌ನಲ್ಲಿ ಭಾರತ ತಂಡವನ್ನು 170 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಕಿವೀಸ್ ಬೌಲಿಂಗ್ ಪಡೆಯು ಯಶಸ್ವಿಯಾಯಿತು. ಕಿವೀಸ್ ಬಳಗವು ಗೆಲುವಿಗಾಗಿ 53 ಓವರ್‌ಗಳಲ್ಲಿ 139 ರನ್‌ಗಳನ್ನು ಗಳಿಸುವ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿತು.

ಐದನೇ ದಿನವಾದ ಮಂಗಳವಾರ ಎರಡನೇ ಇನಿಂಗ್ಸ್ ಆರಂಭಿಸಿದ್ದ ಭಾರತವು 30 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 64 ರನ್ ಗಳಿಸಿತ್ತು. ಕೊನೆಯ ದಿನದಂದು ಆಟ ಮುಂದುವರಿಸಿದ ನಾಯಕ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ್ ಪೂಜಾರ ಬೆಳಗಿನ ವಾತಾವರಣದಲ್ಲಿ ಹೆಚ್ಚು ಆಡಲಿಲ್ಲ. ದಿನದಾಟದ ಆರನೇ ಓವರ್‌ನಲ್ಲಿ ಜೆಮಿಸನ್ ಎಸೆತದಲ್ಲಿ ವಿರಾಟ್ ಕೊಹ್ಲಿ ವಿಕೆಟ್‌ಕೀಪರ್ ಬಿಜೆ ವಾಟ್ಲಿಂಗ್‌ಗೆ ಕ್ಯಾಚಿತ್ತರು. ಜೆಮಿಸನ್ ತಮ್ಮ ಇನ್ನೊಂದು ಓವರ್‌ನಲ್ಲಿ ಪೂಜಾರ (15; 80ಎ) ವಿಕೆಟ್ ಕೂಡ ಗಳಿಸಿದರು.

ರಿಷಭ್ ಆಟ: ಈ ಹೊತ್ತಿನಲ್ಲಿ ಜೊತೆಗೂಡಿದ ಉಪನಾಯಕ ಅಜಿಂಕ್ಯ ರಹಾನೆ ಮತ್ತು ರಿಷಭ್ ಪಂತ್ ಇನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರು. 40ನೇ ಓವರ್‌ನಲ್ಲಿ ಜೆಮಿಸನ್ ಎಸೆತವನ್ನು ಆಡಿದ್ದ ಪಂತ್ ಕ್ಯಾಚ್‌ ಅನ್ನು ಸ್ಲಿಪ್ ಫೀಲ್ಡರ್ ಕೈಚೆಲ್ಲಿದ್ದರು. ಇದರಿಂದಾಗಿ ಪಂತ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿದು, ಭಾರತ ತಂಡವು ನೂರು ರನ್‌ಗಳ ಗಡಿ ದಾಟಲು ಕಾರಣರಾದರು.

ರಿಷಭ್ ಮತ್ತು ಅಜಿಂಕ್ಯ ಐದನೇ ವಿಕೆಟ್ ಜೊತೆಯಾಟದಲ್ಲಿ 37 ರನ್ ಸೇರಿಸಿದರು. ಊಟದ ವಿರಾಮಕ್ಕೂ ಮುನ್ನ ರಹಾನೆ ಔಟಾದರು. ಪಂತ್ ಜೊತೆಗೂಡಿದ ರವೀಂದ್ರ ಜಡೇಜ ಆತ್ಮವಿಶ್ವಾಸದಿಂದ ಆಡಿದರು. ಆರನೇ ವಿಕೆಟ್ ಜೊತೆಯಾಟದಲ್ಲಿ 33 ರನ್‌ ಸೇರಿಸಿದರು. ಜಡೇಜ ತಮ್ಮ ಆಕ್ರಮಣಕಾರಿ ಶೈಲಿಯ ಬ್ಯಾಟಿಂಗ್ ಬದಲು ತಾಳ್ಮೆಯಿಂದ ಆಡಿದರು. ಪಂತ್ ಕೂಡ ಅವಕಾಶ ಸಿಕ್ಕಾಗ ಬೌಂಡರಿ ಗಳಿಸಿದರು. ಆದರೆ 63ನೇ ಓವರ್‌ನಲ್ಲಿ ನೀಲ್ ವಾಗ್ನರ್ ಎಸೆತದಲ್ಲಿ ಜಡೇಜ ಔಟಾದಾಗ ಜೊತೆಯಾಟ ಮುರಿದುಬಿತ್ತು. ಆರು ಓವರ್‌ಗಳ ನಂತರ ಪಂತ್ (41 ರನ್) ಕೂಡ ಔಟಾದರು. ಇದರೊಂದಿಗೆ ಪಂದ್ಯವನ್ನು ಡ್ರಾದತ್ತ ಕೊಂಡೊಯ್ಯುವ ಪ್ರಯತ್ನಕ್ಕೂ ತೆರೆಬಿದ್ದಂತಾಯಿತು. ಕೊನೆಯ ಹಂತದಲ್ಲಿ ಮೊಹಮ್ಮದ್ ಶಮಿ (13) ಅಲ್ಪಕಾಣಿಕೆ ನೀಡಿದರು. ಆದರೆ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಪ್ರಯೋಜನ ಕೇನ್ ಬಳಗಕ್ಕೆ ಲಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.