(ಚಿತ್ರ ಕೃಪೆ: X/@BLACKCAPS)
ಡುನೆಡಿನ್ (ನ್ಯೂಜಿಲೆಂಡ್): ಆರಂಭ ಆಟಗಾರರು ಸಿಡಿಸಿದ ಸಿಕ್ಸರ್‌ಗಳ ಅಬ್ಬರದಿಂದ ನ್ಯೂಜಿಲೆಂಡ್ ತಂಡ ಮಂಗಳವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡದ ಮೇಲೆ ಆರು ವಿಕೆಟ್‌ಗಳ ಜಯ ಪಡೆಯಿತು. ಐದು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿತು.
ಮಳೆಯಿಂದ ತಲಾ 15 ಓವರುಗಳಿಗೆ ಮೊಟಕುಗೊಂಡಿದ್ದ ಪಂದ್ಯದಲ್ಲಿ ಮೊದಲು ಆಡಿದ ಪಾಕಿಸ್ತಾನ 9 ವಿಕೆಟ್‌ಗೆ 135 ರನ್ ಹೊಡೆಯಿತು. ಆತಿಥೇಯರು 11 ಎಸೆತಗಳಿರುವಂತೆ 5 ವಿಕೆಟ್‌ಗೆ 137 ರನ್ ಬಾರಿಸಿದರು.
ನ್ಯೂಜಿಲೆಂಡ್ ಆರಂಭಿಕರಾದ ಟಿಮ್ ಸೀಫರ್ಟ್ (45, 22ಎ, 4x3, 6x5) ಮತ್ತು ಫಿನ್ ಅಲೆನ್ (38, 16ಎ, 4x1, 6x5) ತಂಡಕ್ಕೆ ಮಿಂಚಿನ ಆರಂಭ ನೀಡಿದರು. ಮೊದಲ ಎಂಟು ಸ್ಕೋರಿಂಗ್ ಹೊಡೆತಗಳಲ್ಲಿ ಆರು ಸಿಕ್ಸರ್‌ಗಳಾಗಿದ್ದವು! 4.3 ಓವರುಗಳಲ್ಲಿ 66 ರನ್‌ಗಳು ಹರಿದುಬಂದವು! ಮೊದಲ ಓವರ್ ಮೇಡನ್ ಮಾಡಿದ್ದ ಅಫ್ರಿದಿ ಅವರ ಎರಡನೇ ಓವರ್‌ನಲ್ಲಿ ಸೀಫರ್ಟ್ 4 ಸಿಕ್ಸರ್ ಸೇರಿ 26 ರನ್ ಸೂರೆ ಮಾಡಿದರು.
ನಾಲ್ಕು ಓವರುಗಳ ಅಂತರದಲ್ಲಿ ನ್ಯೂಜಿಲೆಂಡ್ 4 ವಿಕೆಟ್ ಕಳೆದುಕೊಂಡರೂ ಮಿಚೆಲ್ ಹೇ ಅಜೇಯ 21 ರನ್ ಗಳಿಸಿ ತಂಡ ಗುರಿತಲುಪಲು ನೆರವಾದರು.
ಮೊದಲು ಆಡಿದ ಪಾಕಿಸ್ತಾನದ ಪರ ನಾಯಕ ಸಲ್ಮಾನ್ ಆಘಾ 28 ಎಸೆತಗಳಲ್ಲಿ 46 ರನ್ ಗಳಿಸಿದ್ದರು. ಶದಾಬ್ ಖಾನ್ (26, 14ಎ) ಮತ್ತು ಶಹೀನ್ ಶಾ ಅಫ್ರೀದಿ (ಅಜೇಯ 22, 14ಎ) ಕೂಡ ತಂಡ ಗೌರವಾರ್ಹ ಮೊತ್ತ ತಲುಪಲು ನೆರವಾದರು.
ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೀಫರ್ಟ್ 44 ರನ್ ಹೊಡೆದಿದ್ದು, ನ್ಯೂಜಿಲೆಂಡ್ 9 ವಿಕೆಟ್‌ಗಳ ಜಯ ಪಡೆದಿತ್ತು. ಮೂರನೇ ಪಂದ್ಯ ಆಕ್ಲೆಂಡ್‌ನಲ್ಲಿ ಶುಕ್ರವಾರ ನಡೆಯಲಿದೆ.
ಸ್ಕೋರುಗಳು:
ಪಾಕಿಸ್ತಾನ: 15 ಓವರುಗಳಲ್ಲಿ 9 ವಿಕೆಟ್‌ಗೆ 135 (ಸಲ್ಮಾನ್ ಆಘಾ 28, ಶದಾಬ್ ಖಾನ್ 26, ಶಹೀನ್ ಶಾ ಅಫ್ರೀದಿ ಔಟಾಗದೇ 22; ಡಫಿ 20ಕ್ಕೆ2, ಸಿಯರ್ಸ್ 23ಕ್ಕೆ2, ನೀಶಮ್ 26ಕ್ಕೆ2, ಈಶ್ ಸೋಧಿ 17ಕ್ಕೆ2);
ನ್ಯೂಜಿಲೆಂಡ್: 13.1 ಓವರುಗಳಲ್ಲಿ 5 ವಿಕೆಟ್‌ಗೆ 137 (ಸೀಫರ್ಟ್ 45, ಫಿನ್ ಅಲೆನ್ 38, ಮಿಚೆಲ್ ಹೇ ಔಟಾಗದೇ 21; ಹ್ಯಾರಿಸ್ ರವೂಫ್ 20ಕ್ಕೆ2). ಪಂದ್ಯದ ಆಟಗಾರ: ಟಿಮ್ ಸೀಫರ್ಟ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.