ADVERTISEMENT

ಅಭ್ಯಾಸಕ್ಕೆ ಮರಳಿದ ಕಿವೀಸ್‌ ಕ್ರಿಕೆಟಿಗರು

ಪಿಟಿಐ
Published 13 ಜುಲೈ 2020, 5:50 IST
Last Updated 13 ಜುಲೈ 2020, 5:50 IST
ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿರುವ ಆಟಗಾರ್ತಿಯರಿಗೆ ತಂಡದ ಸಿಬ್ಬಂದಿ ಸಲಹೆ ನೀಡುತ್ತಿರುವುದು –ಟ್ವಿಟರ್‌ ಚಿತ್ರ 
ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿರುವ ಆಟಗಾರ್ತಿಯರಿಗೆ ತಂಡದ ಸಿಬ್ಬಂದಿ ಸಲಹೆ ನೀಡುತ್ತಿರುವುದು –ಟ್ವಿಟರ್‌ ಚಿತ್ರ    

ವೆಲ್ಲಿಂಗ್ಟನ್‌: ಕೊರೊನಾ ಬಿಕ್ಕಟ್ಟಿನಿಂದಾಗಿ ಸುಮಾರು ನಾಲ್ಕು ತಿಂಗಳ ಕಾಲ ಮನೆಯಲ್ಲೇ ಇದ್ದ ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡದ ಆಟಗಾರರು ಮೈದಾನಕ್ಕೆ ಮರಳಿದ್ದಾರೆ.

‘ಲಿಂಕನ್‌ನಲ್ಲಿರುವ ಹೈ ಪರ್ಫಾರ್ಮೆನ್ಸ್‌ ಕೇಂದ್ರದಲ್ಲಿ ಸೋಮವಾರದಿಂದ ಕ್ರಿಕೆಟಿಗರ ತಾಲೀಮು ಶುರುವಾಗಲಿದೆ’ ಎಂದು ನ್ಯೂಜಿಲೆಂಡ್‌ ಕ್ರಿಕೆಟ್‌ (ಎನ್‌ಜೆಡ್‌ಸಿ) ಪ್ರಕಟಣೆಯಲ್ಲಿ ತಿಳಿಸಿದೆ.

‘ಮುಂದಿನ ಕೆಲ ತಿಂಗಳುಗಳಲ್ಲಿ ಒಟ್ಟು ಆರು ರಾಷ್ಟ್ರೀಯ ಶಿಬಿರಗಳನ್ನು ಆಯೋಜಿಸಲು ತೀರ್ಮಾನಿಸಿದ್ದೇವೆ. ಇದರ ಭಾಗವಾಗಿ ಈ ವಾರ ಮೊದಲ ಶಿಬಿರ ನಡೆಯಲಿದೆ. ದಕ್ಷಿಣ ದ್ವೀಪ ಪ್ರದೇಶ ಹಾಗೂ ವೆಲ್ಲಿಂಗ್ಟನ್‌ ಭಾಗದಲ್ಲಿ ನೆಲೆಸಿರುವ ನ್ಯೂಜಿಲೆಂಡ್‌ ಪುರುಷರ ಮತ್ತು ಮಹಿಳಾ ತಂಡದ ಸದಸ್ಯರುಕ್ಯಾಂಟರ್‌ಬರಿ ಹಬ್‌ನಲ್ಲಿನಿಗದಿಯಾಗಿರುವ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದುಎನ್‌ಜೆಡ್‌ಸಿ ಹೇಳಿದೆ.

ADVERTISEMENT

‘ಉತ್ತರ ಭಾಗದಲ್ಲಿ ನೆಲೆಸಿರುವ ಕ್ರಿಕೆಟಿಗರಿಗಾಗಿ ಜುಲೈ 19ರಿಂದ ಮೌಂಟ್‌ ಮಂಗಾನೂಯಿಯ ಬೇ ಓವಲ್‌ ಮೈದಾನದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದೂ ತಿಳಿಸಲಾಗಿದೆ.

ನ್ಯೂಜಿಲೆಂಡ್‌ ತಂಡದ ಆಟಗಾರ್ತಿಯರು ಲಿಂಕನ್‌ನಲ್ಲಿ ತಾಲೀಮು ಆರಂಭಿಸಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ. ನಾವು ಮತ್ತೆ ಮೈದಾನಕ್ಕೆ ಮರಳಿದ್ದೇವೆ. ಲಾಕ್‌ಡೌನ್ ‌ನಂತರದ ಮೊದಲ ಶಿಬಿರ ಆರಂಭವಾಗಿದೆ ಎಂದು ಬರೆದುಕೊಂಡಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ಇದುವರೆಗೂ 1500 ಕೊರೊನಾ ಪ್ರಕರಣಗಳಷ್ಟೇ ಪತ್ತೆಯಾಗಿವೆ. ಈ ಪೈಕಿ 1400ಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ. 22 ಮಂದಿ ಮೃತಪಟ್ಟಿದ್ದಾರೆ.

ಕೋವಿಡ್‌ 19 ಬಿಕ್ಕಟ್ಟಿನ ನಡುವೆಯೂ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಕ್ರಿಕೆಟ್‌ ಚಟುವಟಿಕೆಗಳು ಗರಿಗೆದರಿವೆ. ಆಸ್ಟ್ರೇಲಿಯಾ, ಶ್ರೀಲಂಕಾ ತಂಡಗಳ ಕ್ರಿಕೆಟಿಗರೂ ಈಗಾಗಲೇ ತಾಲೀಮು ಆರಂಭಿಸಿದ್ದಾರೆ.

ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳ ನಡುವೆ ಜೀವ ಸುರಕ್ಷಾ (ಬಯೊ ಸೆಕ್ಯೂರ್‌) ವಾತಾವರಣದಲ್ಲಿ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಕೂಡ ಆರಂಭವಾಗಿದ್ದು ಭಾನುವಾರ ಮುಕ್ತಾಯಗೊಂಡ ಮೊದಲ ಟೆಸ್ಟ್‌ನಲ್ಲಿ ವೆಸ್ಟ್‌ ಇಂಡೀಸ್‌ ಜಯಿಸಿದೆ.

ಈ ಸರಣಿಯ ಬಳಿಕ ಆಂಗ್ಲರ ನಾಡಿನಲ್ಲಿ ಇಂಗ್ಲೆಂಡ್‌ ಮತ್ತು ಐರ್ಲೆಂಡ್‌ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಆಯೋಜನೆಯಾಗಿದೆ. ಬಳಿಕ ಇಂಗ್ಲೆಂಡ್‌ ತಂಡವು ತವರಿನ ಅಂಗಳದಲ್ಲಿ ಪಾಕಿಸ್ತಾನದ ವಿರುದ್ಧ ತಲಾ ಮೂರು ಪಂದ್ಯಗಳ ಟೆಸ್ಟ್‌ ಹಾಗೂ ಟ್ವೆಂಟಿ–20 ಕ್ರಿಕೆಟ್‌ ಸರಣಿಗಳನ್ನೂ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.