ADVERTISEMENT

NZ vs WI: ಕಿವೀಸ್ ವಿರುದ್ಧ ಇನ್ನಿಂಗ್ಸ್ ಸೋಲಿನ ಭೀತಿಯಲ್ಲಿ ವಿಂಡೀಸ್

ಏಜೆನ್ಸೀಸ್
Published 5 ಡಿಸೆಂಬರ್ 2020, 7:47 IST
Last Updated 5 ಡಿಸೆಂಬರ್ 2020, 7:47 IST
ಟಿಮ್ ಸೌಥಿ
ಟಿಮ್ ಸೌಥಿ   

ಹ್ಯಾಮಿಲ್ಟನ್: ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಇನ್ನಿಂಗ್ಸ್ ಗೆಲುವಿನ ಸನಿಹದಲ್ಲಿದೆ. ನ್ಯೂಜಿಲೆಂಡ್‌ನ 519 ರನ್‌ಗಳಿಗೆ ಉತ್ತರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 138 ರನ್‌ಗಳಿಗೆ ಸರ್ವಪತನಗೊಂಡು ಫಾಲೋ ಆನ್‌ಗೆ ಗುರಿಯಾಗಿರುವ ವೆಸ್ಟ್‌ಇಂಡೀಸ್, ದ್ವಿತೀಯ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿ ಮೂರನೇ ದಿನದಂತ್ಯಕ್ಕೆ 42 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದೆ.

ಈಗ ಕ್ರೀಸಿನಲ್ಲಿರುವ ಜೆರ್ಮೈನ್ ಬ್ಲ್ಯಾಕ್‌ವುಡ್ (80*) ಹಾಗೂ ಅಲ್ಜಾರಿ ಜೋಸೆಫ್ (59*) ದಿಟ್ಟ ಹೋರಾಟ ಮುಂದುವರಿಸಿದ್ದಾರೆ. ಅಲ್ಲದೆ ನಾಲ್ಕು ವಿಕೆಟ್ ಮಾತ್ರ ಬಾಕಿ ಉಳಿದಿರುವಂತೆಯೇ ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನು 185 ರನ್ ಗಳಿಸಬೇಕಾದ ಅಗತ್ಯವಿದೆ.

49/0 ಎಂಬಲ್ಲಿದ್ದ ಮೂರನೇ ದಿನದಾಟ ಆರಂಭಿಸಿದ ವಿಂಡೀಸ್‌ಗೆ ಕಿವೀಸ್ ಅನುಭವಿ ವೇಗಿ ಟಿಮ್ ಸೌಥಿ ಮಾರಕವಾಗಿ ಕಾಡಿದರು. ಕಿವೀಸ್ ವೇಗಿಗಳ ದಾಳಿಗೆ ಪರದಾಡಿದ ವಿಂಡೀಸ್, ಮೊದಲ ಇನ್ನಿಂಗ್ಸ್‌ನಲ್ಲಿ 64 ಓವರ್‌ಗಳಲ್ಲಿ 138 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ADVERTISEMENT

ನಿಖರ ದಾಳಿ ಸಂಘಟಿಸಿದ ಸೌಥಿ 35 ರನ್ ತೆತ್ತು ನಾಲ್ಕು ವಿಕೆಟ್ ಕಬಳಿಸಿ ಮಿಂಚಿದರು. ಇವರಿಗೆ ತಕ್ಕ ಸಾಥ್ ನೀಡಿದ ಕೈಲ್ ಜೆಮಿಸನ್ ಹಾಗೂ ನೀಲ್ ವ್ಯಾಗ್ನರ್ ತಲಾ ಎರಡು ಮತ್ತು ಟ್ರೆಂಟ್ ಬೌಲ್ಟ್ ಒಂದು ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್‌ನಲ್ಲಿ 381 ರನ್‌ಗಳ ಬೃಹತ್ ಮುನ್ನಡೆ ಪಡೆದ ನ್ಯೂಜಿಲೆಂಡ್, ಎದುರಾಳಿ ತಂಡವನ್ನು ಫಾಲೋ ಒನ್‌ಗೆ ಗುರಿಪಡಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲೂ ಕಳಪೆ ಬ್ಯಾಟಿಂಗ್ ನಿರ್ವಹಣೆ ತೋರಿದ ವಿಂಡೀಸ್, ಒಂದು ಹಂತದಲ್ಲಿ 89 ರನ್ನಿಗೆ ಆರು ವಿಕೆಟ್ ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಒಳಗಾಗಿತ್ತು.

ಈ ಸಂದರ್ಭದಲ್ಲಿ ಕೆಳ ಕ್ರಮಾಂಕದಲ್ಲಿ ಜೊತೆಗೂಡಿದ ಜೆರ್ಮೈನ್ ಬ್ಲ್ಯಾಕ್‌ವುಡ್ ಹಾಗೂ ಅಲ್ಜಾರಿ ಜೋಸೆಫ್ ಮುರಿಯದ ಏಳನೇ ವಿಕೆಟ್‌ಗೆ 107 ರನ್‌ಗಳ ಜೊತೆಯಾಟ ನೀಡಿ ಕಿವೀಸ್ ಗೆಲುವನ್ನು ವಿಳಂಬಗೊಳಿಸಿದರು. 98 ಎಸೆತಗಳನ್ನು ಎದುರಿಸಿದ ಜೆರ್ಮೈನ್ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 80 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ. ಇವರಿಗೆ ಸಾಥ್ ನೀಡುತ್ತಿರುವ ಅಲ್ಜಾರಿ ಜೋಸೆಫ್ ಚೊಚ್ಚಲ ಅರ್ಧಶತಕ (59*) ಸಾಧನೆ ಮಾಡಿದ್ದಾರೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಿವೀಸ್ ಪರ ನೀಲ್ ವ್ಯಾಗ್ನರ್ ಎರಡು ವಿಕೆಟ್ ಪಡೆದರು.

ಈ ಮುನ್ನ ನಾಯಕ ಕೇನ್ ವಿಲಿಯಮ್ಸನ್ ಮೂರನೇ ಹಾಗೂ ಜೀವನಶ್ರೇಷ್ಠ ದ್ವಿಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡವು ಏಳು ವಿಕೆಟ್ ನಷ್ಟಕ್ಕೆ 519 ರನ್‌ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತ್ತು.

ಸಂಕ್ಷಿಪ್ತ ಸ್ಕೋರ್ ಪಟ್ಟಿ (3ನೇ ದಿನದಂತ್ಯಕ್ಕೆ)
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 519/7 ಡಿ. (ವಿಲಿಯಮ್ಸನ್ 251, ಲೇಥಮ್ 86, ಜೇಮಿಸನ್ 51*)
ವೆಸ್ಟ್‌ಇಂಡೀಸ್ ಮೊದಲ ಇನ್ನಿಂಗ್ಸ್ 138ಕ್ಕೆ ಆಲೌಟ್ (ಕ್ಯಾಂಪ್‌ಬೆಲ್ 26, ಸೌಥಿ 35/4)
ವೆಸ್ಟ್‌ಇಂಡೀಸ್ ದ್ವಿತೀಯ ಇನ್ನಿಂಗ್ಸ್ 196/6 (ಜೆರ್ಮೈನ್ 80*, ಜೋಸೆಫ್ 59*, ವ್ಯಾಗ್ನರ್ 62/2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.