ADVERTISEMENT

ಪಾಕ್‌ಗೆ ಮತ್ತೆ ಮುಖಭಂಗ; ಏಕದಿನ ಸರಣಿಯಲ್ಲಿ ಕಿವೀಸ್ ಕ್ಲೀನ್ ಸ್ವೀಪ್ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಏಪ್ರಿಲ್ 2025, 10:10 IST
Last Updated 5 ಏಪ್ರಿಲ್ 2025, 10:10 IST
<div class="paragraphs"><p>ನ್ಯೂಜಿಲೆಂಡ್ ಆಟಗಾರರ ಸಂಭ್ರಮ</p></div>

ನ್ಯೂಜಿಲೆಂಡ್ ಆಟಗಾರರ ಸಂಭ್ರಮ

   

(ಚಿತ್ರ ಕೃಪೆ: X/@BLACKCAPS)

ಮೌಂಟ್‌ ಮಾಂಗಾನೂಯಿ: ವೇಗದ ಬೌಲರ್ ಬೆನ್‌ ಸಿಯರ್ಸ್ ಅವರ ಐದು ವಿಕೆಟ್‌ ಗೊಂಚಲಿನ ನೆರವಿನಿಂದ ನ್ಯೂಜಿಲೆಂಡ್ ತಂಡ ಶನಿವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 43 ರನ್‌ಗಳಿಂದ ಸೋಲಿಸಿತು. ಸರಣಿಯನ್ನು ಆತಿಥೇಯರು 3–0 ಯಿಂದ ಗೆದ್ದುಕೊಂಡರು.

ADVERTISEMENT

ಮಳೆಯ ಪರಿಣಾಮ ಮೈದಾನ ತೇವದಿಂದ ಕೂಡಿದ್ದು ಪಂದ್ಯವನ್ನು 42 ಓವರುಗಳಿಗೆ ಮೊಟಕುಗೊಳಿಸಲಾಯಿತು. ಬ್ಯಾಟಿಂಗಿಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್‌ 8 ವಿಕೆಟ್‌ಗೆ 264 ರನ್ ಹೊಡೆಯಿತು. ಪಾಕಿಸ್ತಾನ 40 ಓವರುಗಳಲ್ಲಿ 221 ರನ್‌ಗಳಿಗೆ ಆಲೌಟಾಯಿತು.

ಆಕ್ರಮಣಕಾರಿಯಾಗಿದ್ದ ಸಿಯರ್ಸ್‌ 34 ರನ್ನಿಗೆ 5 ವಿಕೆಟ್ ಪಡೆದರು. ಅವರ ಬೌಲಿಂಗ್‌ನಲ್ಲಿ ನಾಲ್ಕು ಮಂದಿ ಶಾರ್ಟ್‌ಪಿಚ್‌ ಎಸೆತಕ್ಕೆ ವಿಕೆಟ್‌ ತೆತ್ತರು. ಸರಣಿಯ ಸರ್ವೋತ್ತಮ ಗೌರವಕ್ಕೆ ಪಾತ್ರರಾದ ಸಿಯರ್ಸ್‌ ಸತತ ಎರಡು ಪಂದ್ಯಗಳಲ್ಲಿ ಐದು ವಿಕೆಟ್‌ಗಳನ್ನು ಪಡೆದ ನ್ಯೂಜಿಲೆಂಡ್‌ನ ಮೊದಲ ಬೌಲರ್ ಎನಿಸಿದರು. ಸಿಯರ್ಸ್ ಅವರು ಟಿ20 ಪರಿಣತ ಬೌಲರ್ ಆಗಿಯೇ ಹೆಸರು ಪಡೆದವರು.

ಇದಕ್ಕೆ ಮೊದಲು ನಡೆದ ಟಿ20 ಸರಣಿಯನ್ನೂ ನ್ಯೂಜಿಲೆಂಡ್ 4–1 ರಿಂದ ಗೆದ್ದುಕೊಂಡಿತ್ತು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್‌: 42 ಓವರುಗಳಲ್ಲಿ 8 ವಿಕೆಟ್‌ಗೆ 264 (ರಿಸ್‌ ಮರಿಯು 58, ಹೆನ್ರಿ ನಿಕೋಲ್ಸ್ 31, ಡೇರಿಲ್ ಮಿಚೆಲ್‌ 43, ಟಿಮ್ ಸೀಫರ್ಟ್‌ 26, ಮೈಕೆಲ್ ಬ್ರೇಸ್‌ವೆಲ್‌ 59; ನಸೀಮ್ ಶಾ 54ಕ್ಕೆ2, ಅಕಿಫ್ ಜಾವೆದ್‌ 52ಕ್ಕೆ4); ಪಾಕಿಸ್ತಾನ: 40 ಓವರುಗಳಲ್ಲಿ 221 (ಅಬ್ದುಲ್ಲಾ ಶಫೀಕ್‌ 33, ಬಾಬರ್ ಆಜಂ 50, ಮೊಹಮ್ಮದ್ ರಿಜ್ವಾನ್‌ 37, ತಯ್ಯಬ್ ತಾಹಿರ್ 33; ಜಾಕೋಬ್ ಡಫಿ 40ಕ್ಕೆ2, ಬೆನ್‌ ಸಿಯರ್ಸ್ 34ಕ್ಕೆ5) ಪಂದ್ಯದ ಆಟಗಾರ: ಮೈಕೆಲ್‌ ಬ್ರೇಸ್‌ವೆಲ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.