ADVERTISEMENT

IND vs NZ ಎರಡನೇ ಟೆಸ್ಟ್ | ಬೌಲರ್ ಶ್ರಮ ವ್ಯರ್ಥಗೊಳಿಸಿದ ಬ್ಯಾಟ್ಸ್‌ಮನ್‌

ಪಿಟಿಐ
Published 1 ಮಾರ್ಚ್ 2020, 19:53 IST
Last Updated 1 ಮಾರ್ಚ್ 2020, 19:53 IST
ಮೊಹಮ್ಮದ್ ಶಮಿ --–ಎಎಫ್‌ಪಿ ಚಿತ್ರ
ಮೊಹಮ್ಮದ್ ಶಮಿ --–ಎಎಫ್‌ಪಿ ಚಿತ್ರ   
""

ಕ್ರೈಸ್ಟ್‌ಚರ್ಚ್: ಮಧ್ಯಮವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಅವರು ತಮ್ಮ ಅಮೋಘ ಬೌಲಿಂಗ್‌ನಿಂದ ಸೃಷ್ಟಿಸಿದ ಚಿನ್ನದಂತಹ ಅವಕಾಶವನ್ನು ಬ್ಯಾಟ್ಸ್‌ಮನ್‌ಗಳು ಹಾಳು ಮಾಡಿದರು.ಹೆಗ್ಲಿ ಓವಲ್‌ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಎದುರಿನ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತವು ಮೊದಲ ಇನಿಂಗ್ಸ್‌ನಲ್ಲಿ ಏಳು ರನ್‌ಗಳ ಸಣ್ಣ ಮುನ್ನಡೆ ಗಳಿಸಲು ಬೌಲರ್‌ಗಳು ಕಾರಣರಾದರು.ಅದರಲ್ಲೂ ಶಮಿ (81ಕ್ಕೆ4) ಮತ್ತು ಬೂಮ್ರಾ (62ಕ್ಕೆ3) ಅವರ ಪಾತ್ರವೇ ಪ್ರಮುಖವಾಯಿತು.

ಶನಿವಾರ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವು 242 ರನ್‌ಗಳಿಗೆ ಆಲೌಟ್ ಆಗಿತ್ತು. ದಿನದಾಟದ ಕೊನೆಗೆ ಆತಿಥೇಯ ತಂಡವು ವಿಕೆಟ್‌ ನಷ್ಟವಿಲ್ಲದೆ 66 ರನ್ ಗಳಿಸಿತ್ತು. ಭಾನುವಾರ ಆಟ ಮುಂದುವರಿಸಿದ ಕಿವೀಸ್ ಬಳಗವು 73.1 ಓವರ್‌ಗಳಲ್ಲಿ 235 ರನ್‌ಗಳಿಗೆ ಆಲೌಟ್ ಆಯಿತು.

ದೊಡ್ಡ ಗುರಿ ಒಡ್ಡುವ ಉತ್ಸಾ ಹದಿಂದ ಕಣಕ್ಕಿಳಿದ ಭಾರತ ತಂಡದ ಅಗ್ರ ಬ್ಯಾಟ್ಸ್‌ಮನ್‌ಗಳಿಗೆ ಎಡಗೈ ವೇಗಿ ಟ್ರೆಂಟ್ ಬೌಲ್ಟ್‌ (12ಕ್ಕೆ3) ಅವರ ದಾಳಿಗೆ ತತ್ತರಿಸಿದರು. ಇದರಿಂದಾಗಿ ದಿನದಾಟದ ಅಂತ್ಯಕ್ಕೆ ಭಾರತವು 36 ಓವರ್‌ಗಳಲ್ಲಿ 90 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿದೆ. 97 ರನ್‌ಗಳ ಮುನ್ನಡೆಯಲ್ಲಿದೆ. ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದ ಪೃಥ್ವಿ ಶಾ ಕೇವಲ 14 ರನ್‌ ಗಳಿಸಿ ಔಟಾದರು. ಮಯಂಕ್ ಅಗರವಾಲ್ ಮತ್ತೊಮ್ಮೆ ವಿಫಲರಾದರು.

ADVERTISEMENT

ಪೂಜಾರ (24 ರನ್) ಕ್ರೀಸ್‌ನಲ್ಲಿ ಕಾಲೂರುವ ಪ್ರಯತ್ನಕ್ಕೆ ಬೌಲ್ಟ್‌ ಅಡ್ಡಗಾಲು ಹಾಕಿದರು. ನಾಯಕ ವಿರಾಟ್ ಕೊಹ್ಲಿಯ (14 ರನ್) ವೈಫಲ್ಯ ಈ ಇನಿಂಗ್ಸ್‌ನಲ್ಲಿಯೂ ಮುಂದುವರಿಯಿತು. ಈ ಸಲ ಅವರು ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಭರವಸೆಯ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ 31ನೇ ಓವರ್‌ನಲ್ಲಿ ನೀಲ್ ವಾಗ್ನರ್ ಕ್ಲೀನ್‌ಬೌಲ್ಡ್‌ ಮಾಡಿದರು. ‘ರಾತ್ರಿ ಕಾವಲುಗಾರ’ ಉಮೇಶ್ ಯಾದವ್‌ಗೆ ಕೇವಲ 12 ಎಸೆತಗಳನ್ನು ಎದುರಿಸಲು ಮಾತ್ರ ಸಾಧ್ಯವಾಯಿತು. ಒಂದು ರನ್ ಗಳಿಸಿದ ಅವರಿಗೆ ಟ್ರೆಂಟ್ ಬೌಲ್ಟ್‌ ಪೆವಿಲಿಯನ್‌ ಹಾದಿ ತೋರಿಸಿದರು. ಹನುಮವಿಹಾರಿ (ಔಟಾಗದೆ 5) ಮತ್ತು ರಿಷಭ್ ಪಂತ್ (ಔಟಾಗದೆ 1) ಕ್ರೀಸ್‌ನಲ್ಲಿದ್ದಾರೆ.

ಶಮಿ–ಬೂಮ್ರಾ ಮಿಂಚು: ದಿನದಾಟದ ಮೂರನೇ ಓವರ್‌ನಲ್ಲಿ ಉಮೇಶ್ ಯಾದವ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಟಾಮ್ ಬ್ಲಂಡೆಲ್ ಬಿದ್ದರು. ಅಲ್ಲಿಂದ ಬೌಲರ್‌ಗಳ ದರಬಾರು ಆರಂಭವಾಯಿತು.

ಕೆಲವು ನಿಮಿಷಗಳ ನಂತರ ನಾಯಕ ಕೇನ್ ವಿಲಿಯಮ್ಸನ್‌ ಅವರಿಗೆ ಬೂಮ್ರಾ ಆಘಾತ ನೀಡಿದರು. ಇದಾಗಿ ಹತ್ತು ಓವರ್‌ಗಳ ನಂತರ ರಾಸ್ ಟೇಲರ್‌ ಆಟಕ್ಕೆ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ತಡೆಯೊಡ್ಡಿದರು.

ಇನ್ನೊಂದೆಡೆ ಅರ್ಧಶತಕ ಗಳಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್ ಟಾಮ್ ಲಥಾಮ್ (52; 122ಎಸೆತ, 5ಬೌಂಡರಿ) ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿದ ಶಮಿ ತಮ್ಮ ವಿಕೆಟ್ ಬೇಟೆ ಆರಂಭಿಸಿದರು. ತಮ್ಮ ಇನ್ನೊಂದು ಓವರ್‌ನಲ್ಲಿ ಹೆನ್ರಿ ನಿಕೋಲ್ಸ್‌ ವಿಕೆಟ್ ಗಳಿಸಿದರು. ಕ್ರೀಸ್‌ಗೆ ಬಂದು 16 ಎಸೆತಗಳನ್ನು ಎದುರಿಸಿದ ಬಿಜೆ ವಾಟ್ಲಿಂಗ್ ಖಾತೆ ತೆರೆಯಲು ಬೂಮ್ರಾ ಬಿಡಲಿಲ್ಲ. ಅದೇ ಓವರ್‌ನಲ್ಲಿ ಟಿಮ್ ಸೌಥಿ ಔಟಾದರು.

ಆದರೆ ಕೈಲ್ ಜೆಮಿಸನ್ (49;63ಎ,7ಬೌಂ) ತಮ್ಮ ಬ್ಯಾಟಿಂಗ್ ಪ್ರತಿಭೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿದರು. ಒಂದು ರನ್‌ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡರು.

ಆದರೆ, ತಂಡದ ಹಿನ್ನಡೆಯ ಅಂತರವನ್ನು ಕಡಿಮೆ ಮಾಡಿದರು. ಅವರಿಗೆ ಉತ್ತಮ ಜೊತೆ ನೀಡಿದ ಕಾಲಿನ್ ಡಿ ಗ್ರ್ಯಾಂಡ್‌ ಹೋಮ್ ವಿಕೆಟ್‌ ಅನ್ನು ಜಡೇಜ ಗಳಿಸಿದರು. ವಾಗ್ನರ್ ಮತ್ತು ಜೆಮಿಸನ್ ಒಂಬತ್ತನೇ ವಿಕೆಟ್‌ಗೆ 51 ರನ್‌ ಸೇರಿಸಿದರು. ಇವರಿಬ್ಬರಿಗೂ ಶಮಿಯೇ ಪೆವಿಲಿಯನ್ ದಾರಿ ತೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.