ADVERTISEMENT

ಸರಣಿ ಜಯದ ಮೇಲೆ ಭಾರತದ ಕಣ್ಣು

ನ್ಯೂಜಿಲೆಂಡ್ ಎದುರಿನ ಮೂರನೇ ಏಕದಿನ ಕ್ರಿಕೆಟ್ ಪಂದ್ಯ

ಪಿಟಿಐ
Published 27 ಜನವರಿ 2019, 20:33 IST
Last Updated 27 ಜನವರಿ 2019, 20:33 IST
ಸ್ಪಿನ್ನರ್ ಕುಲದೀಪ್ ಯಾದವ್‌ ಮೇಲೆ ಭಾರತ ತಂಡ ಭರವಸೆ ಇರಿಸಿದೆ
ಸ್ಪಿನ್ನರ್ ಕುಲದೀಪ್ ಯಾದವ್‌ ಮೇಲೆ ಭಾರತ ತಂಡ ಭರವಸೆ ಇರಿಸಿದೆ   

ಮೌಂಟ್ ಮಾಂಗನೂಯಿ: ಮೊದಲ ಎರಡು ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆದ್ದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ ಸರಣಿಯನ್ನು ಗೆಲ್ಲುವ ಭರವಸೆಯೊಂದಿಗೆ ಸೋಮವಾರ ಕಣಕ್ಕೆ ಇಳಿಯಲಿದೆ.

ಐದು ಪಂದ್ಯಗಳ ಸರಣಿಯಲ್ಲಿ ಭಾರತ 2–0 ಮುನ್ನಡೆ ಸಾಧಿಸಿದೆ. ನಾಲ್ಕು ಮತ್ತು ಐದನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಮೂರನೇ ಪಂದ್ಯದಲ್ಲೇ ಸರಣಿ ಗೆದ್ದು ವಿರಾಮಕ್ಕೆ ತೆರಳುವುದು ಕೊಹ್ಲಿ ಅವರ ಆದ್ಯತೆ ಆಗಲಿದೆ. ಅತ್ತ, ಎಲ್ಲ ವಿಭಾಗಗಳಲ್ಲೂ ವೈಫಲ್ಯ ಕಂಡಿರುವ ಆತಿಥೇಯ ತಂಡ ಪಂದ್ಯ ಗೆದ್ದು ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಪ್ರಯತ್ನಿಸಲಿದೆ.

2014ರಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ಭಾರತವನ್ನು ನ್ಯೂಜಿಲೆಂಡ್‌ 4–0ಯಿಂದ ಮಣಿಸಿತ್ತು. ಇದರ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜಾಗಿದೆ. ಆಸ್ಟ್ರೇಲಿಯಾದಲ್ಲಿ ಐತಿಹಾಸಿ ಸರಣಿ ಗೆದ್ದು ಇಲ್ಲಿಗೆ ಬಂದಿರುವ ತಂಡ ಎಲ್ಲ ಬ್ಯಾಟಿಂಗ್ ಬೌಲಿಂಗ್ ಮತ್ತು ಫೀಲ್ಡಿಂಗ್‌ ವಿಭಾಗಗಳಲ್ಲಿ ಉತ್ತಮ ಸಾಮರ್ಥ್ಯ ತೋರುತ್ತಿದೆ.

ADVERTISEMENT

ಹಾರ್ದಿಕ್ ಪಾಂಡ್ಯ ಮೇಲೆ ಕಣ್ಣು: ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಅಮಾನತಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಶಿಕ್ಷೆಯಿಂದ ಮುಕ್ತಗೊಳಿಸಲಾಗಿದೆ. ಹೀಗಾಗಿ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಅವರು ಸೋಮವಾರ ಕಣಕ್ಕೆ ಇಳಿಯುವ ಸಾಧ್ಯತೆ ಇರುವುದರಿಂದ ಎಲ್ಲರ ಕಣ್ಣು ಅವರ ಮೇಲೆ ಬಿದ್ದಿದೆ.

ಎರಡನೇ ಪಂದ್ಯದಲ್ಲಿ ವಿಜಯಶಂಕರ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಅವರು ನಿರೀಕ್ಷಿತ ಸಾಮರ್ಥ್ಯ ತೋರಲಿಲ್ಲ. ಪಾಂಡ್ಯ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ತಂಡಕ್ಕೆ ಬಲ ತುಂಬಬಲ್ಲ ಆಟಗಾರ ಆಗಿರುವುದರಿಂದ ತಂಡ ಭರವಸೆ ಇರಿಸಿಕೊಂಡಿದೆ.

ಎರಡು ಪಂದ್ಯಗಳಲ್ಲಿ ನ್ಯೂಜಿಲೆಂಡ್‌ನ ಒಟ್ಟು 20 ವಿಕೆಟ್‌ಗಳ ಪೈಕಿ 12 ವಿಕೆಟ್‌ಗಳನ್ನು ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಹಂಚಿಕೊಂಡಿದ್ದಾರೆ. ಸೋಮವಾರದ ಪಂದ್ಯದಲ್ಲೂ ಅವರ ಮೇಲೆ ತಂಡ ಭರವಸೆ ಇರಿಸಿದೆ. ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಕೂಡ ಉತ್ತಮ ಲಯದಲ್ಲಿದ್ದಾರೆ.

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿಖರ್‌ ಧವನ್‌ ಮತ್ತು ರೋಹಿತ್ ಶರ್ಮಾ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಿದ್ದು ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಅಂಬಟಿ ರಾಯುಡು ಮತ್ತು ಮಹೇಂದ್ರ ಸಿಂಗ್ ಧೋನಿ ಉತ್ತಮ ಕಾಣಿಕೆ ನೀಡುತ್ತಿದ್ದಾರೆ.

ಪಂದ್ಯ ಆರಂಭ: ಬೆಳಿಗ್ಗೆ 7.30 (ಭಾರತೀಯ ಕಾಲಮಾನ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.