ADVERTISEMENT

India VS New Zealand ಟ್ವೆಂಟಿ–20: ರಾಹುಲ್ ಅರ್ಧಶತಕ, ಭಾರತಕ್ಕೆ 7 ವಿಕೆಟ್ ಜಯ

ಸರಣಿಯಲ್ಲಿ 2–0 ಮುನ್ನಡೆ ಕಾಯ್ದುಕೊಂಡ ಟೀಂ ಇಂಡಿಯಾ

ಏಜೆನ್ಸೀಸ್
Published 26 ಜನವರಿ 2020, 10:14 IST
Last Updated 26 ಜನವರಿ 2020, 10:14 IST
ಕೆ.ಎಲ್‌.ರಾಹುಲ್ ಬ್ಯಾಟಿಂಗ್
ಕೆ.ಎಲ್‌.ರಾಹುಲ್ ಬ್ಯಾಟಿಂಗ್   

ಆಕ್ಲೆಂಡ್‌:ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಟ್ವೆಂಟಿ–20 ಪಂದ್ಯವನ್ನೂ ಭಾರತ7ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದ್ದು, ಸರಣಿಯಲ್ಲಿ 2–0 ಮುನ್ನಡೆ ಕಾಯ್ದುಕೊಂಡಿದೆ.

ಅತಿಥೇಯ ತಂಡ ನೀಡಿದ್ದ 133 ರನ್‌ಗಳ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ17.3ಓವರ್‌ಗಳಲ್ಲಿ3ವಿಕೆಟ್‌ ನಷ್ಟಕ್ಕೆ 135 ರನ್ ಗಳಿಸಿ ಗೆಲುವು ಸಾಧಿಸಿತು.

ಗುರಿ ಬೆನ್ನತ್ತಿ ಕ್ರೀಸಿಗಿಳಿದ ಭಾರತ ತಂಡಕ್ಕೆ ಮೊದಲ ಓವರ್‌ನಲ್ಲೇ ಆಘಾತ ಕಾದಿತ್ತು.ಟಿಮ್‌ ಸೌಥೀ ಓವರ್‌ನಲ್ಲಿ ಎರಡು ಬೌಂಡರಿ ಬಾರಿಸಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಸುಳಿವು ನೀಡಿದ ‘ಹಿಟ್‌ ಮ್ಯಾನ್’ ಖ್ಯಾತಿಯ ರೋಹಿತ್ ಶರ್ಮಾ 8 ರನ್‌ ಗಳಿಸುವಷ್ಟರಲ್ಲಿ ರಾಸ್ ಟೇಲರ್ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಕ್ರೀಸಿಗಿಳಿದ ನಾಯಕ ಕೊಹ್ಲಿ ಕೂಡ ಹೆಚ್ಚು ಹೊತ್ತು ಆಟವಾಡಲಿಲ್ಲ. ತಂಡದ ಮೊತ್ತ 39 ಆಗುವಷ್ಟರಲ್ಲಿ 11 ರನ್‌ ಗಳಿಸಿದ್ದ ಕೊಹ್ಲಿಯೂ ಔಟಾದರು.

ADVERTISEMENT

ಆಸರೆಯಾದ ರಾಹುಲ್:ಭಾರತದ ಪರ ಕನ್ನಡಿಗ ಕೆ.ಎಲ್.ರಾಹುಲ್ ಔಟಾಗದೆ (57ರನ್,50ಎಸೆತ,3ಬೌಂಡರಿ,2ಸಿಕ್ಸ್) ಅರ್ಧಶತಕ ಗಳಿಸಿ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಶ್ರೇಯಸ್ ಅಯ್ಯರ್44ರನ್ ಗಳಿಸಿ (33ಎಸೆತ,1ಬೌಂಡರಿ,3ಸಿಕ್ಸ್) ರಾಹುಲ್‌ಗೆ ಸಾಥ್ ನೀಡಿದರು.

ಸರಣಿಯ ಮೊದಲ ಪಂದ್ಯದಲ್ಲೇ ಸೋಲನುಭವಿಸಿ ಒತ್ತಡಕ್ಕೆ ಸಿಲುಕಿದ್ದ ನ್ಯೂಜಿಲೆಂಡ್ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತ್ತು.

ಮಾರ್ಟಿನ್‌ ಗಪ್ಟಿಲ್‌ ಮತ್ತುಕಾಲಿನ್‌ ಮನ್ರೊ ಆರಂಭದಲ್ಲಿನಾಯಕನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಬ್ಯಾಟಿಂಗ್ ಮಾಡಿದರು. 5ನೇ ಓವರ್‌ ಕೊನೆಯಲ್ಲಿ ತಂಡದ ಮೊತ್ತ 48 ಆಗಿದ್ದಾಗ ಶಾರ್ದೂಲ್ ಠಾಕೂರ್‌ ಎಸೆದ ಬಾಲ್‌ ಅನ್ನು ಕೊಹ್ಲಿ ಅವರಿಗೆ ಕ್ಯಾಚ್ ನೀಡಿಗಪ್ಟಿಲ್‌ ನಿರ್ಗಮಿಸಿದರು. ಇವರು 20 ಎಸೆತಗಳಿಂದ 33 ರನ್‌ ಗಳಿಸಿದ್ದರು. ಇದರಲ್ಲಿ 4 ಬೌಂಡರಿ, 2 ಸಿಕ್ಸರ್‌ ಇದ್ದವು. 8.4ನೇ ಓವರ್‌ನಲ್ಲಿಶಿವಂ ದುಬೆ ಬೌಲಿಂಗ್‌ನಲ್ಲಿ ಕಾಲಿನ್‌ ಮನ್ರೊ ಸಹ ಕೊಹ್ಲಿ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಮನ್ರೊ 25 ಎಸೆತಗಳಿಂದ 26 ರನ್‌ ಗಳಿಸಿದ್ದರು (2 ಬೌಂಡರಿ, 1 ಸಿಕ್ಸ್).

ಬಳಿಕ ಟಿಮ್‌ ಸೀಫರ್ಟ್‌ 33 ರನ್‌ ಗಳಿಸಿದ್ದು ಬಿಟ್ಟರೆ ಉಳಿದವರ್‍ಯಾರೂ ಗಮನಾರ್ಹ ಮೊತ್ತ ದಾಖಲಿಸುವುದು ಸಾಧ್ಯವಾಗಲಿಲ್ಲ. ನಾಯಕಕೇನ್‌ ವಿಲಿಯಮ್ಸನ್‌ 14,ಕಾಲಿನ್ ಡಿ ಗ್ರ್ಯಾಂಡ್‌ಹೋಮ್‌ 3,ರಾಸ್‌ ಟೇಲರ್‌ 18,ಮಿಷೆಲ್‌ ಸ್ಯಾಂಟನರ್‌ ಔಟಾಗದೆ 0 ರನ್‌ ಗಳಿಸಿದರು.

ಭಾರತದ ಪರ ಜಸ್‌ಪ್ರೀತ್‌ ಬೂಮ್ರಾ,ಮೊಹಮ್ಮದ್ ಶಮಿ,ರವೀಂದ್ರ ಜಡೇಜ ಉತ್ತಮ ಬೌಲಿಂಗ್ ಮಾಡುವ ಮೂಲಕ ಅತಿಥೇಯರು ರನ್‌ ಹೊಳೆ ಹರಿಸದಂತೆ ನೋಡಿಕೊಂಡರು.

ರವೀಂದ್ರ ಜಡೇಜ 2, ಬೂಮ್ರಾ, ಶಿವಂ ದುಬೆ, ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.