ನವದೆಹಲಿ: ಪುರುಷರ ಏಷ್ಯಾ ಕಪ್ ಮತ್ತು ಮಹಿಳೆಯರ ಎಮರ್ಜಿಂಗ್ ಟೀಮ್ಸ್ ಏಷ್ಯಾ ಕಪ್ ಟೂರ್ನಿಗಳಿಂದ ಭಾರತ ಹಿಂದೆಸರಿಯಲು ತೀರ್ಮಾನಿಸಿದೆ ಎಂಬ ವರದಿ ಬರೇ ಊಹಾಪೋಹದ್ದು ಮತ್ತು ಕಾಲ್ಪನಿಕವಾದುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸೋಮವಾರ ಸ್ಪಷ್ಟಪಡಿಸಿದೆ.
ಕೆಲವೇ ದಿನಗಳ ಹಿಂದೆ ಭಾರತ ಮತ್ತು ಪಾಕಿಸ್ತಾನ ನಡುವಣ ಸೇನಾ ಸಂಘರ್ಷ ನಡೆದ ಕಾರಣ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಹಾಲಿ ಮುಖ್ಯಸ್ಥರು ಪಾಕಿಸ್ತಾನದವರಾದ ಕಾರಣ ಭಾರತ ತಂಡಗಳ ಸ್ಪರ್ಧೆಗೆ ಅನುಮತಿ ನೀಡುತ್ತಿಲ್ಲ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿತ್ತು. ಪಾಕಿಸ್ತಾನ ಆಂತರಿಕ ಭದ್ರತಾ ಸಚಿವ ಮೊಹ್ಸಿನ್ ನಕ್ವಿ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿದ್ದು, ಎಸಿಸಿಗೂ ಅಧ್ಯಕ್ಷರಾಗಿದ್ದಾರೆ.
ಟಿ20 ಮಾದರಿಯ ಏಷ್ಯಾ ಕಪ್ ಟೂರ್ನಿಯು ಸೆಪ್ಟೆಂಬರ್‌ನಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಬೇಕಿದೆ. ಮಹಿಳೆಯರ ಎಮರ್ಜಿಂಗ್ ಏಷ್ಯಾ ಕಪ್ ಶ್ರೀಲಂಕಾದಲ್ಲಿ ಮುಂದಿನ ತಿಂಗಳು ನಡೆಯಬೇಕಿದೆ.
‘ಮಂಡಳಿಯು ಈ ಬಗ್ಗೆ ಏನೂ ಚರ್ಚೆ ನಡೆಸಿಲ್ಲ. ಭಾರತ ಏಷ್ಯಾ ಕಪ್‌ನಿಂದ ಹಿಂದೆಸರಿದಿದೆ ಎಂಬ ವರದಿ ಸತ್ಯಕ್ಕೆ ದೂರವಾದುದು’ ಎಂದು ಸೈಕಿಯಾ ಪಿಟಿಐಗೆ ತಿಳಿಸಿದ್ದಾರೆ.
‘ಈಗ ನಮ್ಮ ಗಮನ ಇಂಡಿಯನ್ ಪ್ರೀಮಿಯರ್ ಲೀಗ್ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುವುದರ ಕಡೆ ಮತ್ತು ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ಆರಂಭವಾಲಿರುವ ಐದು ಟೆಸ್ಟ್‌ಗಳ ಸರಣಿಯ ಬಗ್ಗೆಯಷ್ಟೇ ಇದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.