ADVERTISEMENT

ರಣಜಿ ಟ್ರೋಫಿ: ಸ್ಮರಣ್‌ಗೆ ಗಾಯ, ಮರಳಿದ ನಿಕಿನ್

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 16:05 IST
Last Updated 16 ಜನವರಿ 2026, 16:05 IST
ನಿಕಿನ್‌ ಜೋಸ್‌
ನಿಕಿನ್‌ ಜೋಸ್‌   

ಬೆಂಗಳೂರು: ಅಗ್ರಕ್ರಮಾಂಕದ ಬ್ಯಾಟರ್ ನಿಕಿನ್ ಜೋಸ್ ಅವರು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕ ತಂಡಕ್ಕೆ ಮರಳಿದ್ದಾರೆ. ಗಾಯಗೊಂಡಿರುವ ಸ್ಮರಣ್ ರವಿಚಂದ್ರನ್ ಅವರ ಬದಲಿಗೆ ನಿಕಿನ್ ಸ್ಥಾನ ಪಡೆದಿದ್ದಾರೆ. 

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಇದೇ 22ರಿಂದ ಮಧ್ಯಪ್ರದೇಶ ಎದುರು ರಣಜಿ ಪಂದ್ಯ ನಡೆಯಲಿದೆ. ಗುರುವಾರ ನಡೆದಿದ್ದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಕರ್ನಾಟಕವು ವಿದರ್ಭ ಎದುರು ಸೋತಿತ್ತು. 

ರಣಜಿ ಟೂರ್ನಿಯ ಪ್ರಥಮ ಹಂತದ  ಐದು ಪಂದ್ಯಗಳಲ್ಲಿ ಯುವ ಬ್ಯಾಟರ್ ಸ್ಮರಣ್ ಅವರು 595 ರನ್‌ ಗಳಿಸಿದ್ದರು. ಅದರಲ್ಲಿ ಎರಡು ಶತಕ ಮತ್ತು ಎರಡು ಅರ್ಧಶತಕಗಳಿದ್ದವು. ಏಕದಿನ ಟೂರ್ನಿಯಲ್ಲಿ 725 ರನ್ ಗಳಿಸಿದ್ದ ದೇವದತ್ತ ಪಡಿಕ್ಕಲ್, ಅನುಭವಿ ಕರುಣ್ ನಾಯರ್ ಅವರ ಮೇಲೆ ತಂಡದ ಬ್ಯಾಟಿಂಗ್ ವಿಭಾಗದ ಅವಲಂಬಿತವಾಗಿದೆ.

ADVERTISEMENT

ವೇಗಿ ವೈಶಾಖ ವಿಜಯಕುಮಾರ್ ಅವರನ್ನೂ ಆಯ್ಕೆ ಮಾಡಿಲ್ಲ. ಗುರುವಾರ ವಿದರ್ಭ ಎದುರಿನ ಪಂದ್ಯದಲ್ಲಿ ವೈಶಾಖ ತಲೆಗೆ ಚೆಂಡು ಬಡಿದಿತ್ತು. ಕಂಕಷನ್ ನಿಯಮದನ್ವಯ ಬದಲೀ ಆಟಗಾರ ವೈಶಾಖ ಬದಲಿಗೆ ಆಡಿದ್ದರು.  ವೇಗಿ ಎಂ. ವೆಂಕಟೇಶ್ ಕಣಕ್ಕಿಳಿಯಲಿದ್ದಾರೆ.

ರಣಜಿ ಟ್ರೋಫಿಯಲ್ಲಿ ಸದ್ಯ ಕರ್ನಾಟಕ ತಂಡವು ಬಿ ಗುಂಪಿನಲ್ಲಿ 21 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರ (18) ಮತ್ತು ಮಧ್ಯಪ್ರದೇಶ (16) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. 

ತಂಡ ಇಂತಿದೆ: ಮಯಂಕ್ ಅಗರವಾಲ್ (ನಾಯಕ), ನಿಕಿನ್ ಜೋಸ್, ದೇವದತ್ತ ಪಡಿಕ್ಕಲ್, ಕರುಣ್ ನಾಯರ್, ಕೆ.ಎಲ್. ಶ್ರೀಜಿತ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ವಿದ್ಯಾಧರ್ ಪಾಟೀಲ, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ಮೊಹಸಿನ್ ಖಾನ್, ಶಿಖರ್ ಶೆಟ್ಟಿ, ಕೃತಿಕ್ ಕೃಷ್ಣ, ಕೆ.ವಿ. ಅನೀಶ್, ಎಂ. ವೆಂಕಟೇಶ್. ಕೋಚ್: ಯರೇಗೌಡ

ಸಿ.ಕೆ. ನಾಯ್ಡು ಟ್ರೋಫಿ: ಸಮಿತ್ ದ್ರಾವಿಡ್‌ಗೆ ಸ್ಥಾನ

ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕರ್ನಾಟಕ ತಂಡದಲ್ಲಿ ಸಮಿತ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ. ಇದೇ 23ರಿಂದ 26ರವರೆಗೆ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣ (3) ದಲ್ಲಿ ಉತ್ತರಾಖಂಡ ಎದುರು ಪಂದ್ಯ ನಡೆಯಲಿದೆ. ಅನೀಶ್ವರ್ ಗೌತಮ್ ತಂಡವನ್ನು ಮುನ್ನಡೆಸುವರು.

ತಂಡ: ಅನೀಶ್ವರ್ ಗೌತಮ್ (ನಾಯಕ) ಪ್ರಖರ್ ಚತುರ್ವೇದಿ ಎಸ್‌.ಯು ಕಾರ್ತಿಕ್ ಹರ್ಷಿಲ್ ಧರ್ಮಾನಿ ಕೆ.ಪಿ. ಕಾರ್ತಿಕೇಯ ಧ್ರುವ ಪ್ರಭಾಕರ್ ಸಮಿತ್ ದ್ರಾವಿಡ್ ಸಂಜಯ್ ಅಶ್ವಿನ್ (ವಿಕೆಟ್‌ಕೀಪರ್) ಯಶೋವರ್ಧನ್ ಪರಂತಾಪ್ ಎಲ್. ಮನ್ವಂತ್ ಕುಮಾರ್ ಹಾರ್ದಿಕ್ ರಾಜ್ ಕೆ. ಶಶಿಕುಮಾರ್ ಧನುಷ್ ಗೌಡ ಮೊನಿಷ್ ರೆಡ್ಡಿ ಫೈಜಾನ್ ಖಾನ್ (ಔಇಕೆಟ್‌ಕೀಪರ್). ಕೋಚ್: ಗಣೇಶ್ ಸತೀಶ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.