ಬೆಂಗಳೂರು: ಈಗಾಗಲೇ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಕೌಟ್ ಪ್ರವೇಶ ಕೈತಪ್ಪಿದ ಬೇಸರದಲ್ಲಿರುವ ಕರ್ನಾಟಕ ತಂಡದ ಗಾಯಕ್ಕೆ ಹರಿಯಾಣದ ನಿಶಾಂತ್ ಸಿಂಧು ಉಪ್ಪು ಸವರಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿ ಗುಂಪಿನ ಕೊನೆಯ ಪಂದ್ಯದಲ್ಲಿ ಆತಿಥೇಯ ತಂಡವು ಮೊದಲ ಇನಿಂಗ್ಸ್ ಮುನ್ನಡೆ ಗಳಿಸುವ ಆಸೆಯೂ ಶನಿವಾರ ಕಮರಿತು. ನಿಶಾಂತ್ (165; 184ಎ, 4X15, 6X6) ಅವರ ಅಬ್ಬರದ ಶತಕದ ಬಲದಿಂದ ಹರಿಯಾಣ ತಂಡವು ಮೊದಲ ಇನಿಂಗ್ಸ್‌ನಲ್ಲಿ 115.3 ಓವರ್‌ಗಳಲ್ಲಿ 450 ರನ್ ಗಳಿಸಿತು. 146 ರನ್‌ಗಳ ಮುನ್ನಡೆಯೂ ಸಾಧಿಸಿತು.
ಇದಕ್ಕುತ್ತರವಾಗಿ ಕರ್ನಾಟಕ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಮೂರನೇ ದಿನದಾಟದ ಮುಕ್ತಾಯಕ್ಕೆ 32 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 108 ರನ್ ಗಳಿಸಿದೆ. ದೇವದತ್ತ ಪಡಿಕ್ಕಲ್ (ಬ್ಯಾಟಿಂಗ್ 41) ಮತ್ತು ಸ್ಮರಣ್ ರವಿಚಂದ್ರನ್ (ಬ್ಯಾಟಿಂಗ್ 9) ಕ್ರೀಸ್‌ನಲ್ಲಿದ್ದಾರೆ. ಲೆಕ್ಕ ಚುಕ್ತಾ ಮಾಡಲು ಇನ್ನೂ 38 ರನ್‌ಗಳು ಬೇಕು.
ಪಂದ್ಯದಲ್ಲಿ ಉಳಿದಿರುವ ಒಂದು ದಿನದಾಟದಲ್ಲಿ ಹರಿಯಾಣ ತಂಡವು ಕರ್ನಾಟಕ ತಂಡದ ಏಳು ವಿಕೆಟ್‌ಗಳನ್ನು ಬೇಗನೆ ಗಳಿಸಿ ಜಯದ ಸಂಭ್ರಮ ಆಚರಿಸುವ ಛಲದಲ್ಲಿದೆ. ಸದ್ಯ 26 ಅಂಕ ಹೊಂದಿರುವ ಹರಿಯಾಣ ಈ ಪಂದ್ಯದಲ್ಲಿ ಜಯಿಸಿದರೆ 6 ಅಂಕ ಸಿಗಲಿವೆ. ಕರ್ನಾಟಕ ತಂಡದ ಬ್ಯಾಟರ್‌ಗಳು ಜಿಗುಟುತನ ತೋರಿ ಪಂದ್ಯವನ್ನು ಡ್ರಾದತ್ತ ಕೊಂಡೊಯ್ದರೆ ಹರಿಯಾಣಕ್ಕೆ 3 ಅಂಕಗಳು ಲಭಿಸುತ್ತವೆ. ಏನೇ ಆದರೂ ಸದ್ಯ ಪಾಯಿಂಟ್ ಪಟ್ಟಿಯ ಮೊದಲ ಸ್ಥಾನದಲ್ಲಿರುವ ಕೇರಳ (28 ) ತಂಡವನ್ನು ಹಿಂದಿಕ್ಕುವ ಅಂಕಿತಕುಮಾರ್ ಬಳಗವು ಅಗ್ರಸ್ಥಾನಕ್ಕೇರಲಿದೆ.
ನಿಶಾಂತ್ ಸದ್ದು
ನಿಶಾಂತ್ ಸಿಂಧು ಅವರು 2022ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಭಾರತ ತಂಡದ ಉಪನಾಯಕರಾಗಿದ್ದರು. ಈ ಎಡಗೈ ಬ್ಯಾಟರ್ ಕರ್ನಾಟಕದ ಅನುಭವಿ ಬೌಲರ್‌ಗಳಾದ ಪ್ರಸಿದ್ಧಕೃಷ್ಣ, ವಿದ್ವತ್ ಕಾವೇರಪ್ಪ ಮತ್ತು ವಿ. ಕೌಶಿಕ್ ಅವರನ್ನು ಭರ್ತಿ ಆತ್ಮವಿಶ್ವಾಸದಿಂದ ಎದುರಿಸಿದರು. ವಯಸ್ಸಿಗೂ ಮೀರಿದ ಪ್ರಬುದ್ಧತೆಯು ಅವರ ಬ್ಯಾಟಿಂಗ್‌ನಲ್ಲಿ ಎದ್ದು ಕಂಡಿತು.
ಶುಕ್ರವಾರ ದಿನದಾಟದ ಅಂತ್ಯಕ್ಕೆ 35 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ನಿಶಾಂತ್ ಮೂರನೇ ದಿನ ಆತಿಥೇಯ ಬೌಲರ್‌ಗಳ ಬೆವರಿಳಿಸಿದರು. 20 ವರ್ಷದ ನಿಸಾಂತ್ ಅರ್ಧ ಡಜನ್ ಸಿಕ್ಸರ್‌ಗಳನ್ನು ಸಿಡಿಸಿದರು. ಪುಲ್, ಡ್ರೈವ್ ಮತ್ತು ಸ್ವೀಪ್‌ಗಳ ಚೆಂದದ ಬ್ಯಾಟಿಂಗ್ ಅವರದ್ದಾಗಿತ್ತು. ಶನಿವಾರ ಮಧ್ಯಾಹ್ನದವರೆಗೂ ಕ್ರೀಡಾಂಗಣದಲ್ಲಿ ಅವರ ಬ್ಯಾಟಿಗೆ ಅಪ್ಫಳಿಸುತ್ತಿದ್ದ ಚೆಂಡಿನ ಸದ್ದು ಮತ್ತು ಹರಿಯಾಣ ಡಗ್‌ಔಟ್‌ನಿಂದ ಚಪ್ಪಾಳೆ, ಕೇಕೆಗಳ ಶಬ್ದಗಳು ಪ್ರತಿಧ್ವನಿಸುತ್ತಿದ್ದವು. ಅವರಿಗೆ ಜಯಂತ್ ಯಾದವ್ (32 ರನ್), ಅನ್ಷುಲ್ ಕಾಂಭೋಜ್ (25 ರನ್) ಮತ್ತು ಅನುಜ್ ಠಕ್ರಾಲ್ (25 ರನ್) ಅವರೂ ಉತ್ತಮ ಜೊತೆ ನೀಡಿದರು.
ಈ ನಡುವೆ ಪ್ರಸಿದ್ಧ ಕೃಷ್ಣ (105ಕ್ಕೆ3), ವಿ. ಕೌಶಿಕ್ (63ಕ್ಕೆ1) ಹಾಗೂ ಸ್ಪಿನ್ನರ್ ಹಾರ್ದಿಕ್ ರಾಜ್ (73ಕ್ಕೆ3) ವಿಕೆಟ್ ಗಳಿಸಿದರು. ಯಶೋವರ್ಧನ್ ಪರಂತಾಪ್ ಶುಕ್ರವಾರ ಎರಡು ವಿಕೆಟ್ ಗಳಿಸಿದ್ದರು. ನಾಯಕ ಮಯಂಕ್ ಅಗರವಾಲ್ ಕೂಡ 2 ಓವರ್ ಬೌಲಿಂಗ್ ಮಾಡಿದರು. ಅನುಜ್ ಠಕ್ರಾಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಹಾರ್ದಿಕ್ ಎಸೆತದಲ್ಲಿ ನಿಶಾಂತ್ ದೊಡ್ಡ ಹೊಡೆತಕ್ಕೆ ಯತ್ನಿಸಿದರು. ಸ್ಮರಣ್ ಪಡೆದ ಕ್ಯಾಚ್‌ಗೆ ನಿರ್ಗಮಿಸಿದರು. ಅದರೊಂದಿಗೆ ಇನಿಂಗ್ಸ್‌ಗೂ ತೆರೆಬಿತ್ತು. ಚಹಾ ವಿರಾಮಕ್ಕೆ 35 ನಿಮಿಷಗಳು ಬಾಕಿ ಇದ್ದವು. ಈ ಅವಧಿಯಲ್ಲಿ ಕರ್ನಾಟಕದ ಆರಂಭಿಕ ಬ್ಯಾಟರ್ ಕೆ.ವಿ. ಅನೀಶ್ (4; 19ಎ) ಔಟಾದರು. ಅಲ್ಲಿಯವರೆಗೂ ಶಾಂತವಾಗಿದ್ದ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಚಲನ ಮೂಡಿತು. ರಾಹುಲ್..ರಾಹುಲ್.. ಕೂಗುಗಳು ಪ್ರತಿಧ್ವನಿಸಿದವು.
ರಾಹುಲ್ ಬ್ಯಾಟಿಂಗ್ ಭಾರತ ತಂಡದ ಆಟಗಾರ ಕೆ.ಎಲ್. ರಾಹುಲ್ ಅವರು ಸುಮಾರು ಒಂದೂವರೆ ಗಂಟೆ ಕ್ರೀಸ್‌ನಲ್ಲಿದ್ದರು. ಬ್ಯಾಕ್‌ಫುಟ್ ಡ್ರೈವ್ ಆಫ್ ಡ್ರೈವ್‌ಗಳನ್ನು ಆಡಿದ ಅವರು 7 ಬೌಂಡರಿಗಳನ್ನು ಹೊಡೆದರು. ಸೊಗಸಾದ ಪಾದಚಲನೆಯ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಿದರು. ಅವರೊಂದಿಗೆ ಜೊತೆಯಾಟ ಕುದುರಿಸುವ ಹಾದಿಯಲ್ಲಿದ್ದ ಮಯಂಕ್ (6; 20ಎ) ಅವರಿಗೆ ಮಧ್ಯಮವೇಗಿ ಅಜಿತ್ ಚಾಹಲ್ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಆಘಾತ ನೀಡಿದರು. ರಾಹುಲ್ ಜೊತೆಗೂಡಿದ ದೇವದತ್ತ ಪಡಿಕ್ಕಲ್ 3ನೇ ವಿಕೆಟ್ ಪಾಲುದಾರಿಕೆಯಲ್ಲಿ 57 ರನ್ ಸೇರಿಸಿದರು. ಇನಿಂಗ್ಸ್‌ಗೆ ಚೇತರಿಕೆ ನೀಡಿದರು. ಅರ್ಧಶತಕದತ್ತ ಸಾಗಿದ್ದ ರಾಹುಲ್ ಅವರು ಅನುಜ್ ಠಕ್ರಾಲ್ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು. ಮಧ್ಯ ಮತ್ತು ಆಫ್‌ಸ್ಟಂಪ್‌ಗಳೆರಡೂ ನೆಲಕಚ್ಚುವುದರೊಂದಿಗೆ ರಾಹುಲ್ ಆಟ ಮುಗಿಯಿತು. ದೇವದತ್ತ ಜೊತೆ ಸೇರಿದ ಸ್ಮರಣ್ ವಿಕೆಟ್ ಪತನಕ್ಕೆ ಆಸ್ಪದ ನೀಡದೇ ದಿನದಾಟ ಮುಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.