ADVERTISEMENT

IND vs ENG Test|ನಾಲ್ಕನೇ ಟೆಸ್ಟ್‌ ಆರಂಭಕ್ಕೂ ಮುನ್ನ ಭಾರತಕ್ಕೆ ಗಾಯಾಳುಗಳ ಚಿಂತೆ

ಪಿಟಿಐ
Published 21 ಜುಲೈ 2025, 5:16 IST
Last Updated 21 ಜುಲೈ 2025, 5:16 IST
   

ಮ್ಯಾಂಚೆಸ್ಟರ್: ಭಾರತ ತಂಡದ ಪ್ರಮುಖ ಆಲ್‌ರೌಂಡರ್‌ ನಿತೀಶ್ ಕುಮಾರ್‌ ಅವರು ಭಾನುವಾರ ಅಭ್ಯಾಸ ವೇಳೆ ಮೊಣಕಾಲು ಗಾಯಕ್ಕೆ ತುತ್ತಾಗಿದ್ದು, ನಾಲ್ಕನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯುವುದು ಅನುಮಾನವಾಗಿದೆ.

ಇಂಗ್ಲೆಂಡ್ ವಿರುದ್ಧದ ಸರಣಿಯ ನಾಲ್ಕನೇ ಪಂದ್ಯ ಜುಲೈ 23 ರಿಂದ ಆರಂಭವಾಗಲಿದೆ.

ಮ್ಯಾಂಚೆಸ್ಟರ್‌ನಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಒಳಾಂಗಣ ಕ್ರೀಡಾಂಗಣದಲ್ಲಿ ಭಾರತೀಯ ಆಟಗಾರರು ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಬ್ಯಾಟಿಂಗ್‌ ಅಭ್ಯಾಸ ಮಾಡುತ್ತಿದ್ದ ನಿತೀಶ್‌ ರೆಡ್ಡಿ ಅವರು ಗಾಯಕ್ಕೆ ತುತ್ತಾಗಿದ್ದಾರೆ.

ADVERTISEMENT

ರೆಡ್ಡಿ ಅವರಿಗೆ ಗಂಭೀರ ಪ್ರಮಾಣದ ಗಾಯವಾಗಿದ್ದು, ನಾಲ್ಕನೇ ಪಂದ್ಯದಲ್ಲಿ ಕಾಣಿಸಿಕೊಳ್ಳುವುದು ಅನುಮಾನವಾಗಿದೆ. ಸರಣಿಯಿಂದಲೇ ಹೊರಬೀಳುವ ಸಾಧ್ಯತೆಯಿದೆ.

ನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತಕ್ಕೆ ಗಾಯಾಳುಗಳ ಚಿಂತೆ ಆರಂಭವಾಗಿದೆ. ತಂಡದ ಪ್ರಮುಖ ವೇಗದ ಬೌಲರ್‌ ಆಕಾಶ್‌ ದೀಪ್‌ ಅವರು ಬೆನ್ನುನೋವಿನ ಸಮಸ್ಯೆಗೆ ತುತ್ತಾಗಿದ್ದು, ನಾಲ್ಕನೇ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಗಾಯದ ಸಮಸ್ಯೆಯಿಂದ ಆರ್ಶದೀಪ್‌ ಸಿಂಗ್‌ ಕೂಡ ಸರಣಿಯ ಉಳಿದ ಪಂದ್ಯಗಳಿಗೆ ಅಲಭ್ಯವಾಗಿದ್ದಾರೆ.

ಈಗಾಗಲೇ ಉಳಿದ ಪಂದ್ಯಗಳಿಗಾಗಿ ವೇಗಿ ಅನ್ಶುಲ್‌ ಕಾಂಬೋಜ್‌ ಅವರು ತಂಡ ಸೇರಿಕೊಂಡಿದ್ದಾರೆ. ನಿತೀಶ್‌ ರೆಡ್ಡಿ ಬದಲಿಗೆ ಶಾರ್ದೂಲ್‌ ಠಾಕೂರ್‌ ಅವರು ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಭಾರತ 1–2ರ ಹಿನ್ನಡೆಯಲ್ಲಿದೆ. ಸರಣಿ ಗೆಲ್ಲುವ ಕನಸು ಜೀವಂತವಾಗಿರಬೇಕಾದರೆ ಮ್ಯಾಂಚೆಸ್ಟರ್ ಟೆಸ್ಟ್ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.