ADVERTISEMENT

ಐಪಿಎಲ್‌: ಆಟಗಾರರ ಕೈತಪ್ಪಲಿದೆಯೇ ಹಣ? ಸಂಕಷ್ಟದಲ್ಲಿರುವ ಫ್ರಾಂಚೈಸ್‌ಗಳು

ಈ ಬಾರಿಯ ಲೀಗ್‌ನ ಭವಿಷ್ಯ ಡೋಲಾಯಮಾನ

ಪಿಟಿಐ
Published 31 ಮಾರ್ಚ್ 2020, 19:30 IST
Last Updated 31 ಮಾರ್ಚ್ 2020, 19:30 IST
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರರು –ಪ್ರಜಾವಾಣಿ ಸಂಗ್ರಹ ಚಿತ್ರ
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರರು –ಪ್ರಜಾವಾಣಿ ಸಂಗ್ರಹ ಚಿತ್ರ   

ನವದೆಹಲಿ: ಇಂಡಿಯನ್‌ ಪ್ರೀಮಿಯರ್ ಲೀಗ್‌ (ಐಪಿಎಲ್‌) 13ನೇ ಆವೃತ್ತಿಯ ಭವಿಷ್ಯ ಡೋಲಾಯಮಾನವಾಗಿದೆ. ಒಂದೊಮ್ಮೆ ಐಪಿಎಲ್‌ ಕ್ರಿಕೆಟ್‌ ಟೂರ್ನಿ ನಡೆಯದೇ ಇದ್ದರೆ ಆಟಗಾರರಿಗೆ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಹರಾಜಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯ ಪಡೆದಿದ್ದ ಆಟಗಾರರಿಗೆ, ಫ್ರಾಂಚೈಸ್‌ಗಳಿಂದ ಆ ಹಣ ಸಿಗುವುದು ಅನುಮಾನ ಎನಿಸಿದೆ.

ಈಗಾಗಲೇ ವೇತನ ಕಡಿತದಿಂದ ತತ್ತರಿಸಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಆಟಗಾರರು ಇದರಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ADVERTISEMENT

ಮಾರ್ಚ್‌ 29ಕ್ಕೆ ನಡೆಯಬೇಕಿದ್ದ ಐಪಿಎಲ್‌ ಅನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಕೊರೊನಾ ಭೀತಿಯಿಂದಾಗಿ ಏಪ್ರಿಲ್‌ 15ಕ್ಕೆ ಮುಂದೂಡಿದೆ.

‘ಐಪಿಎಲ್‌ ನಡೆಯದಿದ್ದರೆ ದೇಶದ ಆರ್ಥಿಕತೆ ಮೇಲೆ ದೊಡ್ಡ ಹೊಡೆತ ಬೀಳುವುದು ನಿಶ್ಚಿತ. ಇದರಿಂದ ಲೀಗ್‌ನಲ್ಲಿ ಆಡುವ ಆಟಗಾರರು ಅದರಲ್ಲೂ ಮುಖ್ಯವಾಗಿ ದೇಶಿ ಆಟಗಾರರಿಗೆ ಹೆಚ್ಚಿನ ನಷ್ಟವಾಗಲಿದೆ’ ಎಂದು ಭಾರತದ ಕ್ರಿಕೆಟಿಗರ ಸಂಸ್ಥೆಯ (ಐಸಿಎ) ಅಧ್ಯಕ್ಷ ಅಶೋಕ್‌ ಮಲ್ಹೋತ್ರಾ ಅಭಿಪ್ರಾಯಪಟ್ಟಿದ್ದಾರೆ.

‘ಐಪಿಎಲ್‌ ರದ್ದಾದರೆ ಬಿಸಿಸಿಐಗೆ ಅಂದಾಜು ₹3,000 ಕೋಟಿ ನಷ್ಟವಾಗುತ್ತದೆ. ವೇತನ ಕೈತಪ್ಪಿದರೆ ‌‌‌‌‌ಮಹೇಂದ್ರ ಸಿಂಗ್‌ ಧೋನಿ, ವಿರಾಟ್‌ ಕೊಹ್ಲಿ ಅವರಂತಹ ಆಟಗಾರರಿಗೆ ಆಗುವ ನಷ್ಟ ಸಣ್ಣ ಪ್ರಮಾಣದ್ದು. ದೇಶಿ ಟೂರ್ನಿಗಳಲ್ಲಿ ಮಿಂಚಿದ್ದ ಕೆಲ ಆಟಗಾರರು ಇದೇ ಮೊದಲ ಬಾರಿ ಲೀಗ್‌ನಲ್ಲಿ ಆಡಲು ಅವಕಾಶ‍‍ಪಡೆದಿದ್ದಾರೆ. ₹20, 40, 60 ಲಕ್ಷ ಅವರ ಪಾಲಿಗೆ ಬಹುದೊಡ್ಡ ಮೊತ್ತ. ಇಷ್ಟು ಹಣ ಸಿಕ್ಕರೆ ಅವರ ಬಾಳು ಬಂಗಾರವಾಗಿ ಬಿಡುತ್ತದೆ. ಈ ಹಣ ಕೈತಪ್ಪಿದರೆ ಸಂಕಷ್ಟದಲ್ಲೇ ಜೀವನ ಸಾಗಿಸಬೇಕಾಗುತ್ತದೆ’ ಎಂದೂ ಅವರು ಹೇಳಿದ್ದಾರೆ.

‘ಫ್ರಾಂಚೈಸ್‌ಗಳು, ಲೀಗ್‌ ಆರಂಭಕ್ಕೆ ಒಂದು ವಾರ ಮುಂಚೆ ಆಟಗಾರರಿಗೆ ಶೇಕಡ 15ರಷ್ಟು ವೇತನ ನೀಡಬೇಕು. ಲೀಗ್‌ನ ವೇಳೆ ಶೇಕಡ 65 ಹಾಗೂ ಉಳಿದ ಶೇಕಡ 20ರಷ್ಟು ಮೊತ್ತವನ್ನು ಲೀಗ್‌ ಮುಗಿದ ಕೆಲ ದಿನಗಳ ಒಳಗೆ ಕೊಡಬೇಕೆಂಬ ನಿಯಮವಿದೆ. ಕೊರೊನಾದಿಂದಾಗಿ ಈ ಬಾರಿ ಪರಿಸ್ಥಿತಿ ಬಿಗಡಾಯಿಸಿದೆ. ಹೀಗಾಗಿ ಯಾರೂ ಆಟಗಾರರಿಗೆ ಹಣ ಕೊಟ್ಟಿಲ್ಲ’ ಎಂದು ಫ್ರಾಂಚೈಸ್‌ವೊಂದರ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

‘ಒಂದೊಂದು ಫ್ರಾಂಚೈಸ್‌, ಆಟಗಾರರ ವೇತನಕ್ಕಾಗಿ ₹75 ರಿಂದ 85 ಕೋಟಿ ಮೀಸಲಿಡುತ್ತವೆ. ಈ ಮೊತ್ತವು ವಿಮಾ ವ್ಯಾಪ್ತಿಗೆ ಒಳಪಡುವುದಿಲ್ಲ. ಐಪಿಎಲ್‌ ನಡೆಯುವುದೇ ಅನುಮಾನವಾಗಿರುವಾಗ ಇಷ್ಟು ಮೊತ್ತವನ್ನು ಹೇಗೆ ಕೊಡಲು ಸಾಧ್ಯ’ ಎಂದು ಮತ್ತೊಂದು ಫ್ರಾಂಚೈಸ್‌ನ ಅಧಿಕಾರಿ ಪ್ರಶ್ನಿಸಿದ್ದಾರೆ.

‘ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌, ಲಾ ಲಿಗಾ, ಬುಂಡೆಸ್‌ ಲಿಗಾ ಹೀಗೆ ಪ್ರಮುಖ ಫುಟ್‌ಬಾಲ್‌ ಲೀಗ್‌ನ ಫ್ರಾಂಚೈಸ್‌ಗಳು ಆಟಗಾರರ ವೇತನ ಕಡಿತ ಮಾಡಿವೆ. ಕೊರೊನಾ ಬಿಕ್ಕಟ್ಟು ಯಾವಾಗ ಶಮನವಾಗುತ್ತದೆ ಎಂಬುದು ಗೊತ್ತಿಲ್ಲ. ಹೀಗಿರುವಾಗ ಐ‍ಪಿಎಲ್‌ ಫ್ರಾಂಚೈಸ್‌ಗಳು ಕೋಟ್ಯಂತರ ರೂಪಾಯಿಯನ್ನು ಎಲ್ಲಿಂದ ತರಬೇಕು’ ಎಂದೂ ಅವರು ಕೇಳಿದ್ದಾರೆ.

‘ವೇತನ ಕಡಿತಕ್ಕೆ ಸಂಬಂಧಿಸಿದಂತೆ ಯಾವ ಚರ್ಚೆಯೂ ಆಗಿಲ್ಲ. ಬಿಸಿಸಿಐ ಪಾಲಿಗೆ ಐಪಿಎಲ್‌, ಚಿನ್ನದ ಮೊಟ್ಟೆ ಇಡುವ ಕೋಳಿ ಎಂಬುದು ನಿಜ.ಲಾಭ ನಷ್ಟದ ಬಗ್ಗೆ ಲೆಕ್ಕ ಹಾಕುತ್ತಾ ಕೂರುವ ಸಮಯ ಇದಲ್ಲ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಖಜಾಂಚಿ ಅರುಣ್‌ ಧುಮಾಲ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.