ADVERTISEMENT

‘ಸದ್ಯ ಪಾಕಿಸ್ತಾನ ಪರ ಆಡುತ್ತಿರುವ ಯಾರೊಬ್ಬರೂ ಭಾರತ ತಂಡದಲ್ಲಿ ಅವಕಾಶ ಗಳಿಸಲಾರರು’

ಕೇವಲ 12 ವರ್ಷ ಯಾಕೆ? ನೀವು ಇನ್ನೂ 20 ವರ್ಷ ಆಡಬಲ್ಲಿರಿ ಅದಕ್ಕೆ ನಾನು ಗ್ಯಾರಂಟಿ: ಶಹಜಾದ್‌ಗೆ ಮಿಯಾಂದಾದ್ ಟಾಂಗ್

ಏಜೆನ್ಸೀಸ್
Published 19 ಮಾರ್ಚ್ 2020, 7:29 IST
Last Updated 19 ಮಾರ್ಚ್ 2020, 7:29 IST
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್‌
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್‌   
""

ನವದೆಹಲಿ:ಪ್ರಸ್ತುತ ಪಾಕಿಸ್ತಾನ ಪರ ಆಡುತ್ತಿರುವ ಯಾವೊಬ್ಬ ಕ್ರಿಕೆಟಿಗನಿಗೂ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌ನಂತಹ ವಿಶ್ವ ದರ್ಜೆಯ ತಂಡದಲ್ಲಿ ಸ್ಥಾನ ಗಳಿಸುವ ಸಾಮರ್ಥ್ಯ ಇಲ್ಲ ಎಂದು ಆ ದೇಶದ ಮಾಜಿ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್‌ ಹೇಳಿದ್ದಾರೆ.ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಉತ್ತಮ ಪ್ರದರ್ಶನ ನೀಡಲಾರದ ಆಟಗಾರರಿಗೆ ಅವಕಾಶ ಕಲ್ಪಿಸುತ್ತಿದೆ ಎಂದೂಕಿಡಿಕಾರಿದ್ದಾರೆ.

ತಮ್ಮ ಯುಟ್ಯೂಬ್‌ ಚಾನಲ್‌ನಲ್ಲಿ ಮಾತನಾಡಿರುವ ಅವರು,‘ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ನಂತಹ ತಂಡಗಳಲ್ಲಿ ಆಡುವ ಯಾವೊಬ್ಬ ಆಟಗಾರನ ಬದಲಾಗಿ ಆ ತಂಡಗಳಲ್ಲಿ ಸ್ಥಾನ ಗಳಿಸಬಲ್ಲ ಸಾಮರ್ಥ್ಯ ಯಾರಲ್ಲಾದರೂ ಇದೆಯೇ? ಎಂದು ಪಾಕ್‌ ಆಟಗಾರರನ್ನು ಕೇಳಲು ಬಯಸುತ್ತೇನೆ’ ಎಂದಿದ್ದಾರೆ.

‘ನಮ್ಮ ತಂಡದ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ಈ ತಂಡಗಳಲ್ಲಿ ಸ್ಥಾನ ಗಳಿಸಲಾರ. ಈ ಜಗತ್ತು ಪ್ರತಿದಿನವೂ ಬದಲಾಗುತ್ತಿದೆ. ಅದರಂತೆ ವೇತನ ನಿರ್ಧಾರವಾಗುತ್ತದೆ. ನೀವು ಈ ದಿನ ರನ್‌ ಗಳಿಸಿದರೆ, ಹಣ ಪಡೆಯುತ್ತೀರಿ. ನಾಳೆಯೂ ರನ್‌ ಗಳಿಸಿದರೆ ಮತ್ತೆ ನಿಮಗೆ ಹಣ ನೀಡುತ್ತೇವೆ. ನೀವು ವೃತ್ತಿಪರರು. ಕೆಲಸ ಮಾಡದಿದ್ದರೆ ಅಥವಾ ರನ್‌ ಗಳಿಸದಿದ್ದರೆ, ನಿಮಗೆ ಹಣ ನೀಡುವುದು ಹೇಗೆ? ತಂಡವನ್ನು ಯಾರು ಲಘುವಾಗಿ ಪರಿಗಣಿಸಿದ್ದಾರೆ ಅಥವಾ ತಂಡಕ್ಕಾಗಿ ಯಾರು ಗಂಭೀರವಾಗಿ ಆಡುತ್ತಾರೆ ಎಂಬುದನ್ನುಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಕಂಡುಕೊಳ್ಳಬೇಕಾದ ಅಗತ್ಯವಿದೆ’ ಎಂದು ಕಿವಿಮಾತು ಹೇಳಿದ್ದಾರೆ.

ADVERTISEMENT

ಪಾಕ್‌ನ 26 ವರ್ಷದ ಆಟಗಾರ ಅಹ್ಮದ್‌ ಶಹಜಾದ್‌, ತಾವು ಇನ್ನೂ ಹನ್ನೆರಡು ವರ್ಷ ಪಾಕಿಸ್ತಾನ ತಂಡದ ಪರ ಆಡುವ ಸಾಮರ್ಥ್ಯ ಹೊಂದಿರುವುದಾಗಿ ಇತ್ತೀಚೆಗೆಹೇಳಿಕೊಂಡಿದ್ದರು. ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಿಯಾಂದಾದ್‌, ‘ಕೇವಲ 12 ವರ್ಷ ಯಾಕೆ? ನೀವು 20 ವರ್ಷ ಆಡಬಲ್ಲಿರಿ ಎಂಬುದಕ್ಕೆ ನಾನು ಭರವಸೆ ನೀಡಬಲ್ಲೆ. ಆದರೆ, ನೀವು ಉತ್ತಮ ಪ್ರದರ್ಶನ ನೀಡಬೇಕಿದೆ. ನೀವು ಪ್ರತಿದಿನವೂ ಚೆನ್ನಾಗಿ ಆಡಿದರೆ, ಯಾರೊಬ್ಬರೂ ನಿಮ್ಮನ್ನು ತಂಡದಿಂದ ಕೈಬಿಡುವುದಿಲ್ಲ. ಚೆನ್ನಾಗಿ ಆಡದಿದ್ದಾಗ ಮತ್ತು ಒತ್ತಡವನ್ನು ನಿಭಾಯಿಸಲು ಸಾಧ್ಯವಿಲ್ಲದಿದ್ದಾಗ ಮಾತ್ರವೇ ಆಟಗಾರರನ್ನು ಹೊರಗಿಡುವುದು’ ಎಂದು ಟಾಂಗ್‌ ನೀಡಿದ್ದಾರೆ.

‘ಇಂತಹ ಬೇಜವ್ದಾರಿಯ ಹೇಳಿಕೆಗಳನ್ನು ಆಟಗಾರರು ನೀಡಬಾರದು’ ಎಂದೂ ತಿರುಗೇಟು ಕೊಟ್ಟಿದ್ದಾರೆ.

ಜಾವೇದ್‌ ಮಿಯಾಂದಾದ್‌ ಅವರು 1992ರ ವಿಶ್ವಕಪ್‌ ಟೂರ್ನಿಯ ಭಾರತ ವಿರುದ್ಧದ ಪಂದ್ಯದಲ್ಲಿ
ಕನ್ನಡಿಗ ವೆಂಕಟೇಶ್‌ ಪ್ರಸಾದ್‌ ಎಸೆದ ಚೆಂಡನ್ನು ಬೌಂಡರಿಗಟ್ಟಿ ಸಂಭ್ರಮಿಸಿದ್ದು ಹೀಗೆ. (ಸಂಗ್ರಹ ಚಿತ್ರ)

ಆಟಗಾರರ ಹಿಂದಿನ ಪಂದ್ಯಗಳ ಪ್ರದರ್ಶನದ ಆಧಾರದಲ್ಲಿಪಾಕಿಸ್ತಾನ ತಂಡದಲ್ಲಿ ಸ್ಥಾನ ನೀಡಲಾಗುತ್ತದೆ ಎಂದೂ ದೂರಿದ್ದಾರೆ.‘ಆಸ್ಟ್ರೇಲಿಯಾ, ಇಂಗ್ಲೆಂಡ್‌ ತಂಡಗಳು ಸರಣಿಯಿಂದ ಸರಣಿಗೆ ಪ್ರದರ್ಶನ ಉತ್ತಮ ಪಡಿಸಿಕೊಳ್ಳುವ ಆಟಗಾರರಿಗಷ್ಟೇ ಆಡುವ ಬಳಗದಲ್ಲಿ ಅವಕಾಶ ನೀಡುತ್ತವೆ. ಹಿಂದಿನ ಸರಣಿಯಲ್ಲಿ 500 ರನ್ ಗಳಿಸಿದ್ದರೂ ಅದನ್ನು ಪರಿಗಣಿಸುವುದಿಲ್ಲ. 10 ಇನಿಂಗ್ಸ್‌ಗಳ ಹಿಂದೆ ಶತಕ ಗಳಿಸಿದ ಆಟಗಾರನಿಗೆ ಅವಕಾಶ ನೀಡುವ ಏಕೈಕ ತಂಡ ಪಾಕಿಸ್ತಾನ. ಆಟಗಾರರು ವೈಫಲ್ಯ ಹೊಂದುತ್ತಿದ್ದರೂ ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಅದರಿಂದಾಗಿಯೇ ತಂಡದಲ್ಲಿ ಸಾಕಷ್ಟು ಸಮಸ್ಯೆಗಳು ತಲೆದೋರಿವೆ’ ಎಂದಿದ್ದಾರೆ.

ಮುಂದುವರಿದು, ‘ಭಾರತವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಆ ತಂಡದಲ್ಲಿ 70, 80, 100, 200 ರನ್‌ ಗಳಿಸುವ ಆಟಗಾರರು ಇದ್ದಾರೆ. ಪ್ರದರ್ಶನವೆಂದರೆ ಅದು. ಆ ರೀತಿಯ ವಿಶ್ವದರ್ಜೆಯ ಆಟವನ್ನು ಆಡಲು ನಮ್ಮಲ್ಲಿನ ಯಾರೊಬ್ಬರಿಗೂ ಸಾಧ್ಯವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕ್‌ ಪರ 124 ಟೆಸ್ಟ್‌ ಹಾಗೂ233 ಏಕದಿನ ಪಂದ್ಯಗಳನ್ನು ಆಡಿರುವ ಮಿಯಾಂದಾದ್‌, ಕ್ರಮವಾಗಿ8,832 ಮತ್ತು7,381 ರನ್‌ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.