ADVERTISEMENT

ಒಳ್ಳೆಯ ಕ್ರಿಕೆಟ್ ಪಿಚ್‌ ಯಾವುದು: ಅಶ್ವಿನ್ ಪ್ರಶ್ನೆ

ಮೊಟೇರಾ ಅಂಗಣದ ಕುರಿತ ಟೀಕೆಗೆ ಆಪ್‌ಸ್ಪಿನ್ನರ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 17:43 IST
Last Updated 27 ಫೆಬ್ರುವರಿ 2021, 17:43 IST
ಆರ್. ಅಶ್ವಿನ್
ಆರ್. ಅಶ್ವಿನ್   

ಅಹಮದಾಬಾದ್: ’ಒಳ್ಳೆಯ ಕ್ರಿಕೆಟ್ ಪಿಚ್ ಅಂದರೆ ಯಾವುದು? ಅದು ಹೇಗಿರುತ್ತೆ?‘–

ಭಾರತ ಕ್ರಿಕೆಟ್ ತಂಡದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಪತ್ರಕರ್ತರಿಗೆ ಕೇಳಿದ ಮರುಪ್ರಶ್ನೆ ಇದು.

ಹೋದ ಗುರುವಾರ ಮೊಟೇರಾ ಅಂಗಳದಲ್ಲಿ ಇಂಗ್ಲೆಂಡ್ ಎದುರಿನ ಹಗಲು ರಾತ್ರಿ ಪಂದ್ಯವು ಎರಡೇ ದಿನದಲ್ಲಿ ಮುಗಿದಿತ್ತು. ಅದರಿಂದಾಗಿ ಇಂಗ್ಲೆಂಡ್‌ನ ಕೆಲವು ಮಾಧ್ಯಮಗಳು ಮತ್ತು ಮಾಜಿ ಕ್ರಿಕೆಟಿಗರು ಪಿಚ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಟೆಸ್ಟ್ ಕ್ರಿಕೆಟ್‌ಗೆ ಸೂಕ್ತವಲ್ಲದ ಪಿಚ್ ಎಂದು ಟೀಕಿಸಿದರು.

ADVERTISEMENT

ಈ ಟೀಕೆಗಳ ಕುರಿತು ಅಶ್ವಿನ್ ಶುಕ್ರವಾರ ಸರಣಿ ಟ್ವೀಟ್ ಮಾಡಿದ್ದರು.

ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಈ ವಿಷಯದ ಕುರಿತು,’ಮೂರನೇ ಪಂದ್ಯ ನಡೆದ ಮೊಟೇರಾದ ಪಿಚ್ ಟೆಸ್ಟ್‌ ಕ್ರಿಕೆಟ್‌ಗೆ ಯೋಗ್ಯವೇ‘ ಎಂದು ಬ್ರಿಟಿಷ್‌ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದರು.

’ಅದೇ ಪ್ರಶ್ನೆಯನ್ನು ನಾನು ನಿಮಗೆ ಮರಳಿಕೇಳುತ್ತೇನೆ. ಉತ್ತಮ ಕ್ರಿಕೆಟ್ ಅಂಗಣವೆಂದರೆ ಯಾವುದು?‘ ಎಂದರು.

ಅದಕ್ಕೆ ಪತ್ರಿಕ್ರಿಯಿಸಿದ ಮಾಧ್ಯಮ ಪ್ರತಿನಿಧಿಯು, ’ಬ್ಯಾಟ್ ಮತ್ತು ಚೆಂಡಿನ ನಡುವೆ ಉತ್ತಮ ಪೈಪೋಟಿ ಏರ್ಪಡುವಂತಹ ಪಿಚ್ ಆಗಿದೆಯೇ ಇದು‘ ಎಂದರು.

’ಒಳ್ಳೆಯ ಪಿಚ್ ಹೇಗಿರಬೇಕು ಎಂಬುದರ ಕುರಿತು ಯಾರು ವ್ಯಾಖ್ಯಾನ ಬರೆದಿದ್ದಾರೆ? ಟೆಸ್ಟ್ ಪಂದ್ಯದ ಮೊದಲ ದಿನ ವೇಗದ ಬೌಲರ್‌ಗಳಿಗೆ ನೆರವು, ನಂತರ ಬ್ಯಾಟಿಂಗ್‌ಗೆ ಅನುಕೂಲ ಮತ್ತು ಕೊನೆಯ ಎರಡು ದಿನ ಸ್ಪಿನ್‌ ಬೌಲಿಂಗ್‌ ಸ್ನೇಹಿ ಆಗಿ ಇರಬೇಕೆಂಬ ನಿಯಮವಿದೆಯೇ? ಇಂತಹ ಇಲ್ಲದ ನಿಯಮಗಳ ಮನೋಭಾವದಿಂದ ಹೊರಬರಬೇಕಿದೆ. ಇದರ ಬಗ್ಗೆ ಹೆಚ್ಚು ಮಾತನಾಡುವುದು ಸರಿಯಲ್ಲ. ನಿಮಗೆ ಬೇಕಾದಂತಹ ಬಣ್ಣವನ್ನು ಬಳಿದು ಚಿತ್ರ ರಚಿಸಿ‘ ಎಂದು ಅಶ್ವಿನ್ ವ್ಯಂಗ್ಯವಾಗಿ ಹೇಳಿದರು.

’ಇದು ಯೋಗ್ಯ ಪಿಚ್‌ ಹೌದೋ ಅಲ್ಲವೋ ಎಂದು ನೀವು ಪ್ರಶ್ನಿಸುತ್ತಿದ್ದೀರಿ. ಆದರೆ, ಇಂಗ್ಲೆಂಡ್ ತಂಡದ ಯಾವುದೇ ಅಟಗಾರರು ಈ ಬಗ್ಗೆ ಚಕಾರವೆತ್ತಿಲ್ಲ. ಅವರು ತಮ್ಮ ಆಟದ ಮಟ್ಟವನ್ನು ವರ್ಧಿಸಿಕೊಳ್ಳುವತ್ತ ಪ್ರಯತ್ನಿಸುತ್ತಿದ್ದಾರೆ. ಅವರು ಉತ್ತಮ ಸ್ಪರ್ಧೆ ಒಡ್ಡುವ ಪ್ರಯತ್ನದಲ್ಲಿದ್ದಾರೆ‘ ಎಂದರು.

’ಮುಂದಿನ ಪಂದ್ಯದಲ್ಲಿಯೂ ಇಂತಹದೇ ಪಿಚ್‌ ಇರುವ ನಿರೀಕ್ಷೆ ನಿಮ್ಮದಾಗಿದೆಯೇ‘ ಎಂಬ ಪ್ರಶ್ನೆಗೆ ಉತ್ತರಿಸಿದ ಅಶ್ವಿನ್, ’ನೀವೇನು ನಿರೀಕ್ಷಿಸುತ್ತಿದ್ದೀರೊ ಗೊತ್ತಿಲ್ಲ. ಆದರೆ ಮುಂದಿನ ಪಂದ್ಯದಲ್ಲಿ ಉತ್ತಮವಾದ ಕ್ರಿಕೆಟ್ ಆಟ ನಡೆಯುವ ನಿರೀಕ್ಷೆ ನನಗಿದೆ‘ ಎಂದರು.

’ನಮ್ಮ ತಂಡವು ಮೂರು ಪಿಂಕ್‌ ಬಾಲ್ ಟೆಸ್ಟ್‌ಗಳನ್ನು ಆಡಿದೆ. ಅವೆಲ್ಲವೂ ಮೂರು ದಿನಗಳೊಳಗೆ ಮುಕ್ತಾಯವಾಗಿವೆ. ಆದರೆ ಪಿಂಕ್‌ಬಾಲ್ ಟೆಸ್ಟ್ ಆಡಿದ ಅನುಭವ ಇಲ್ಲದವರೇ ಪಿಚ್‌ಗಳ ಕುರಿತು ಹೆಚ್ಚು ಮಾತನಾಡುತ್ತಿದ್ದಾರೆ. ಅವರಿಗೆ ಆಟದೊಳಗಿನ ವಿಷಯ ಅರ್ಥವಾಗುವುದಿಲ್ಲ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.