ಲಾಹೋರ್ (ಪಿಟಿಐ): ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಸೀಮಿತ ಓವರ್‌ಗಳ ಮಾದರಿಯ ಕ್ರಿಕೆಟ್‌ನಲ್ಲಿ ಸಮರ್ಥ ಆಟಗಾರರನ್ನು ಹೊಂದಿವೆ. ಆದರೆ ಐಸಿಸಿ ಟ್ರೋಫಿಗಳನ್ನು ಜಯಿಸುವಲ್ಲಿ ಹಲವು ವರ್ಷಗಳಿಂದ ಈ ತಂಡಗಳಿಗೆ ಅದೃಷ್ಟ ಜೊತೆಗೂಡುತ್ತಿಲ್ಲ.
ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಕ್ರಮವಾಗಿ 1998 ಮತ್ತು 2000ರಲ್ಲಿ ಚಾಂಪಿಯನ್ಸ್ ಟ್ರೋಫಿ (ಆಗಿನ್ನೂ ಇದು ನಾಕೌಟ್ ಟ್ರೋಫಿ ಎಂದೇ ಹೆಸರಾಗಿತ್ತು) ಜಯಿಸಿದ್ದವು. ಮರುನಾಮಕರಣದ ನಂತರ ಉಭಯ ತಂಡಗಳು ಚಾಂಪಿಯನ್ ಆಗಿಲ್ಲ. ಈ ತಂಡಗಳು ಬುಧವಾರ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ನ್ಯೂಜಿಲೆಂಡ್ ತಂಡವು 2015 ಮತ್ತು 2019ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ರನ್ನರ್ಸ್ ಅಪ್ ಆಗಿತ್ತು. 2021ರ ಟಿ20 ವಿಶ್ವಕಪ್‌ನಲ್ಲಿಯೂ ಫೈನಲ್‌ನಲ್ಲಿ ಎಡವಿತ್ತು. ಅದರಿಂದಾಗಿ ಈ ಸಲ ದಕ್ಷಿಣ ಆಫ್ರಿಕಾ ಎದುರು ಗೆದ್ದು ಫೈನಲ್ ಪ್ರವೇಶಿಸುವ ಛಲದಲ್ಲಿದೆ. ಮಿಚೆಲ್ ಸ್ಯಾಂಟನರ್ ನಾಯಕತ್ವದ ಕಿವೀಸ್ ಪಡೆಯು ಎ ಗುಂಪಿನಲ್ಲಿ ದ್ವಿತೀಯ ಸ್ಥಾನ ಪಡೆದು ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದೆ. ದಕ್ಷಿಣ ಆಫ್ರಿಕಾ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು.
ಉಭಯ ತಂಡಗಳೂ ಸಮ ಸಾಮರ್ಥ್ಯ ಹೊಂದಿರುವಂತೆ ಮೇಲ್ನೋಟಕ್ಕೆ ಕಾಣುತ್ತವೆ. ಆದರೆ, ದಕ್ಷಿಣ ಆಫ್ರಿಕಾ ತಂಡದ ಬೌಲಿಂಗ್ ಕಿವೀಸ್‌ಗಿಂತಲೂ ಹೆಚ್ಚು ಸಮರ್ಥವಾಗಿದೆ. ಅಲ್ಲದೇ ವೈವಿಧ್ಯವೂ ಇದೆ. ಇಲ್ಲಿ ಪಿಚ್‌ಗಳು ನಿಧಾನಗತಿಯ ಎಸೆತಗಳಿಗೆ ನೆರವಾಗುತ್ತಿವೆ. ಆದರೆ ಹೆಚ್ಚು ತಿರುವು ಪಡೆಯುತ್ತಿಲ್ಲ. ಕಳೆದ ತಿಂಗಳು ಇಲ್ಲಿ 3 ಪಂದ್ಯಗಳ ಸರಣಿಯಲ್ಲಿ ಆಡಿದ್ದ ಕಿವೀಸ್ ಬಳಗದ ಆತ್ಮವಿಶ್ವಾಸ ಹೆಚ್ಚಿದೆ. ಆದ್ದರಿಂದ ಎದುರಾಳಿ ತಂಡಕ್ಕೆ ಕಠಿಣ ಸವಾಲೊಡ್ಡುವ ಸಾಧ್ಯತೆ ಇದೆ.
ಅನುಭವಿ ಬ್ಯಾಟರ್ ಟಾಮ್ ಲೇಥಮ್, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ವಿಲ್ ಯಂಗ್, ಡ್ಯಾರಿಲ್ ಮಿಚೆಲ್ ಅವರು ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಆಲ್‌ರೌಂಡರ್ ಮತ್ತು ಮಿಂಚಿನ ಫೀಲ್ಡರ್ ಗ್ಲೆನ್ ಫಿಲಿಪ್ಸ್, ಬ್ರೇಸ್‌ವೆಲ್ ಅವರೂ ತಂಡಕ್ಕೆ ವಿಜಯ ತಂದುಕೊಡಬಲ್ಲ ಸಮರ್ಥರು. ಮ್ಯಾಟ್ ಹೆನ್ರಿ, ವಿಲ್ ಒ ರೂರ್ಕಿ, ಜೇಕಬ್ ಡಫಿ ಹಾಗೂ ಕೈಲ್ ಜೆಮಿಸನ್ ಅವರು ಬೌಲಿಂಗ್ ವಿಭಾಗದ ಪ್ರಮುಖರಾಗಿದ್ದಾರೆ. ಭಾನುವಾರ ದುಬೈನಲ್ಲಿ ಭಾರತದ ಎದುರಿನ ಪಂದ್ಯದಲ್ಲಿ ಆಡಿದ ಮರುದಿನ ಬೆಳಿಗ್ಗೆ ಲಾಹೋರ್‌ಗೆ ಮರಳಿದೆ.
ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡಕ್ಕೆ ಚೋಕರ್ಸ್ ಹಣೆಪಟ್ಟಿ ಕಳಚಿಕೊಳ್ಳಲು ಮತ್ತೊಂದು ಸುಸಂದರ್ಭಈಗ ಬಂದಿದೆ. ಶತಕ ಹೊಡೆದಿರುವ ರಿಯಾನ್ ರಿಕೆಲ್ಟನ್, ರಸಿ ವ್ಯಾನ್ ಡೆರ್ ಡಸೆ ಮತ್ತು ಏಡನ್ ಮರ್ಕರಂ ಅವರು ತಂಡಕ್ಕೆ ದೊಡ್ಡ ಮೊತ್ತ ಗಳಿಸಿಕೊಡಬಲ್ಲ ಆಟಗಾರರು. ವಿಯಾನ್ ಮಲ್ದರ್, ಕಗಿಸೊ ರಬಾಡ, ಲುಂಗಿ ಬಿಡಿ, ಮಾರ್ಕೊ ಯಾನ್ಸೆನ್, ಸ್ಪಿನ್ನರ್ ಕೇಶವ್ ಮಹಾರಾಜ ಮತ್ತು ತಬ್ರೇಜ್ ಶಮ್ಸಿ ಅವರು ಕಿವೀಸ್ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸಿದ್ಧರಾಗಿದ್ದಾರೆ.
ಕಳೆದೊಂದು ವರ್ಷದ 13 ಏಕದಿನ ಪಂದ್ಯಗಳನ್ನು ಆಡಿರುವ ದಕ್ಷಿಣ ಆಫ್ರಿಕಾ ತಂಡವು 8ರಲ್ಲಿ ಸೋತಿದೆ. ಮಹತ್ವದ ಘಟ್ಟದಲ್ಲಿ ಎಡವಿದೆ. ಅದೆಲ್ಲವನ್ನೂ ಮೀರಿ ಕಿವೀಸ್ ಸವಾಲಿಗೆ ಎದೆಯೊಡ್ಡಲು ಸಜ್ಜಾಗಿದೆ.
ಪಂದ್ಯ ಆರಂಭ: ಮಧ್ಯಾಹ್ನ 2.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಬಲಾಬಲ
ಪಂದ್ಯ;73
ಕಿವೀಸ್ ಜಯ;26
ದ.ಆಫ್ರಿಕಾ ಜಯ;42
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.