ಗಸ್ ಅಟ್ಕಿನ್ಸನ್
(ಚಿತ್ರ ಕೃಪೆ: X/@englandcricket)
ವೆಲ್ಲಿಂಗ್ಟನ್: ಇಂಗ್ಲೆಂಡ್‌ನ ಬಲಗೈ ವೇಗದ ಬೌಲರ್ ಗಸ್ ಅಟ್ಕಿನ್ಸನ್, ಟೆಸ್ಟ್ ಕ್ರಿಕೆಟ್‌ನಲ್ಲಿ 'ಹ್ಯಾಟ್ರಿಕ್' ವಿಕೆಟ್ ಸಾಧನೆ ಮಾಡಿದ್ದಾರೆ.
ಆತಿಥೇಯ ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಸತತ ಮೂರು ಎಸೆತಗಳಲ್ಲಿ ವಿಕೆಟ್ ಗಳಿಸುವ ಮೂಲಕ ಸ್ಮರಣೀಯ ಸಾಧನೆ ಮಾಡಿದ್ದಾರೆ.
ಗಸ್ ಅಟ್ಕಿನ್ಸನ್, ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಗಳಿಸಿದ ಇಂಗ್ಲೆಂಡ್‌ನ 14ನೇ ಬೌಲರ್ ಎನಿಸಿದ್ದಾರೆ. ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಎರಡು ಸಲ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ.
ನೆಥನ್ ಸ್ಮಿತ್, ಮ್ಯಾಟ್ ಹೆನ್ರಿ ಹಾಗೂ ಟಿಮ್ ಸೌಥಿ ಅವರನ್ನು ಸತತ ಮೂರು ಎಸೆತಗಳಲ್ಲಿ ಔಟ್ ಮಾಡುವ ಮೂಲಕ ಅಟ್ಕಿನ್ಸನ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.
ನ್ಯೂಜಿಲೆಂಡ್ 125ಕ್ಕೆ ಆಲೌಟ್...
ಇಂಗ್ಲೆಂಡ್‌ನ 280 ರನ್‌ಗಳಿಗೆ ಉತ್ತರವಾಗಿ ನ್ಯೂಜಿಲೆಂಡ್ ಕೇವಲ 125 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಅಟ್ಕಿನ್ಸನ್ 31 ರನ್ ತೆತ್ತು ನಾಲ್ಕು ವಿಕೆಟ್ ಗಳಿಸಿದರು. ಬ್ರೈಡನ್ ಕಾರ್ಸೆ ಸಹ ನಾಲ್ಕು ವಿಕೆಟ್ ಪಡೆದರು.
ಕೇನ್ ವಿಲಿಯಮ್ಸನ್ ಗರಿಷ್ಠ 37 ರನ್ ಗಳಿಸಿದರು. ಈ ಮೂಲಕ ಆಂಗ್ಲರ ಪಡೆ ಮೊದಲ ಇನಿಂಗ್ಸ್‌ನಲ್ಲಿ 155 ರನ್‌ಗಳ ಮುನ್ನಡೆ ಗಳಿಸಿತು.
ಬಳಿಕ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ಎರಡನೇ ದಿನದ ಅಂತ್ಯಕ್ಕೆ 76 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 378 ರನ್ ಗಳಿಸಿದೆ. ಜೆಕಬ್ ಬೆಥೆಲ್ (96), ಬೆನ್ ಡಕೆಟ್ (92) ಉಪಯುಕ್ತ ಕೊಡುಗೆ ನೀಡಿದರು.
ಮೊದಲ ಇನಿಂಗ್ಸ್‌ನಲ್ಲಿ ಶತಕ (123) ಗಳಿಸಿದ್ದ ಹ್ಯಾರಿ ಬ್ರೂಕ್ ದ್ವಿತೀಯ ಇನಿಂಗ್ಸ್‌ನಲ್ಲೂ ಅರ್ಧಶತಕ (55) ಗಳಿಸಿದರು. 73 ರನ್ ಗಳಿಸಿರುವ ಜೋ ರೂಟ್ ಹಾಗೂ ನಾಯಕ ಬೆನ್ ಸ್ಟೋಕ್ (35*) ಕ್ರೀಸಿನಲ್ಲಿದ್ದಾರೆ. ಒಟ್ಟು 533 ರನ್‌ಗಳ ಮುನ್ನಡೆ ಗಳಿಸಿದೆ.
ಒಟ್ಟಾರೆಯಾಗಿ ನ್ಯೂಜಿಲೆಂಡ್ ನೆಲದಲ್ಲಿ ಇಂಗ್ಲೆಂಡ್ ಸ್ಮರಣೀಯ ಟೆಸ್ಟ್ ಸರಣಿ ಗೆಲುವಿನತ್ತ ಮುನ್ನಡೆದಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎಂಟು ವಿಕೆಟ್ ಅಂತರದ ಜಯ ಗಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.