
ರೋಹಿತ್ ಶರ್ಮಾ ದಾಖಲೆ
ಪಿಟಿಐ ಚಿತ್ರ
ನವದೆಹಲಿ: ಏಕದಿನ ಬ್ಯಾಟರ್ಗಳ ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. ಇದರಲ್ಲಿ ಭಾರತ ತಂಡದ ಮಾಜಿ ನಾಯಕ ಹಾಗೂ ಏಕದಿನದಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಆಗಿರುವ ರೋಹಿತ್ ಶರ್ಮಾ ಅವರು ಮತ್ತೊಮ್ಮೆ ಅಗ್ರಸ್ಥಾನ ಅಲಂಕರಿಸಿದ್ದಾರೆ.
ಕಳೆದ ವಾರ ಬಿಡುಗಡೆಯಾಗಿದ್ದ ರ‍್ಯಾಂಕಿಂಗ್ ಪಟ್ಟಿಯಲ್ಲಿ ನ್ಯೂಜಿಲೆಂಡ್ ಬ್ಯಾಟರ್ ಡೆರಿಲ್ ಮಿಚೆಲ್ ಅಗ್ರಸ್ಥಾನ ಅಲಂಕರಿಸಿದ್ದರು. ಆದರೆ, ಅವರು ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಸರಣಿಯಿಂದ ಹೊರಗುಳಿದಿದ್ದರಿಂದ ಅವರ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದಾರೆ.
781 ಅಂಕ ಹೊಂದಿರುವ ರೋಹಿತ್ ಶರ್ಮಾ ಅವರು ಐಸಿಸಿ ಏಕದಿನ ಬ್ಯಾಟರ್ಗಳ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ನವೆಂಬರ್ 30ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಅವರು ಆಡಲಿದ್ದು, ತಮ್ಮ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಬಹುದು.
ದ್ವಿತೀಯ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡದ ಡೆರಿಲ್ ಮಿಚೆಲ್ 15 ಅಂಕಗಳ ಕುಸಿತ ಕಂಡಿದ್ದು, ಅವರು ಇದೀಗ 766 ಅಂಕ ಹೊಂದಿದ್ದಾರೆ. ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರ 10 ರೊಳಗೆ ನಾಲ್ವರು ಭಾರತೀಯ ಬ್ಯಾಟರ್‌ಗಳು ಕಾಣಿಸಿಕೊಂಡಿದ್ದಾರೆ.
ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿ
ಅಗ್ರಸ್ಥಾನದಲ್ಲಿರುವ ರೋಹಿತ್ ಶರ್ಮಾರನ್ನು ಹೊರತುಪಡಿಸಿ, 4ನೇ ಸ್ಥಾನದಲ್ಲಿ ನಾಯಕ ಶುಭಮನ್ ಗಿಲ್, ಐದನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಹಾಗೂ 9ನೇ ಸ್ಥಾನದಲ್ಲಿ ಉಪನಾಯಕ ಶ್ರೇಯಸ್ ಅಯ್ಯರ್ ಇದ್ದಾರೆ.
ಬೌಲರ್‌ಗಳ ವಿಭಾಗದಲ್ಲಿ ಅಫ್ಗಾನಿಸ್ತಾನ ತಂಡದ ರಶೀದ್ ಖಾನ್ 710 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಜೋಫ್ರಾ ಆರ್ಚರ್ ಇದ್ದು, ಅವರು 670 ಅಂಕ ಹೊಂದಿದ್ದಾರೆ. ಇನ್ನೂ 7ನೇ ಸ್ಥಾನದಲ್ಲಿ ಕುಲದೀಪ ಯಾದವ್ ಇದ್ದು, ಅಗ್ರ 10ರೊಳಗೆ ಸ್ಥಾನ ಪಡೆದ ಏಕೈಕ ಭಾರತೀಯ ಬೌಲರ್ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.