ನವದೆಹಲಿ: ಲಾಸ್ ಏಂಜಲಿಸ್‌ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರು ಸೇರ್ಪಡೆಗೊಳ್ಳಲಿದ್ದು ಆರು ತಂಡಗಳು ಭಾಗವಹಿಸಲಿವೆ ಎಂದು ಆಯೋಜಕರು ಬುಧವಾರ ಖಚಿತಪಡಿಸಿದ್ದಾರೆ.
128 ವರ್ಷಗಳ ನಂತರ ಕ್ರಿಕೆಟ್ ಆಟವು ಒಲಿಂಪಿಕ್ಸ್‌ಗೆ ಮರಳುತ್ತಿದೆ. 1900ರ ಪ್ಯಾರಿಸ್ ಕ್ರೀಡೆಗಳಲ್ಲಿ ಕೊನೆಯ ಬಾರಿ ಕ್ರಿಕೆಟ್ ಆಡಲಾಗಿತ್ತು. ಆ ಒಲಿಂಪಿಕ್ಸ್‌ನಲ್ಲಿ ಎರಡು ದಿನಗಳ ಒಂದು ಪಂದ್ಯವನ್ನು ಬ್ರಿಟನ್ ಮತ್ತು ಫ್ರಾನ್ಸ್ ತಂಡಗಳ ನಡುವೆ ಆಡಿಸಲಾಗಿತ್ತು. ಇದನ್ನು ಅನಧಿಕೃತ ಟೆಸ್ಟ್ ಎಂದು ಪರಿಗಣಿಸಲಾಗಿದೆ.
2028ರ ಕ್ರೀಡೆಗಳಲ್ಲಿ ಕ್ರಿಕೆಟ್ ಆಟವನ್ನು ಟಿ20 ಮಾದರಿಯಲ್ಲಿ ಆಡಲಾಗುತ್ತಿದೆ. ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ. ಪ್ರತಿ ತಂಡವು 15 ಆಟಗಾರರ ಪಟ್ಟಿಯನ್ನು ಕಳುಹಿಸಲು ಅವಕಾಶವಿದೆ.
ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನಲ್ಲಿ 12 ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರಗಳಿವೆ. ಅವುಗಳೆಂದರೆ ಅಫ್ಗಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ. 94 ರಾಷ್ಟ್ರಗಳು ಸಹ ಸದಸ್ಯತ್ವ ಹೊಂದಿವೆ.
ಒಲಿಂಪಿಕ್ಸ್ ಕ್ರಿಕೆಟ್ ಟೂರ್ನಿಗೆ ಅರ್ಹತಾ ಮಾನದಂಡವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಆದರೆ ಅಮೆರಿಕವು ಆತಿಥ್ಯ ವಹಿಸಿರುವ ಕಾರಣ ನೇರ ಪ್ರವೇಶ ಪಡೆಯುವ ಸಾಧ್ಯತೆಯಿದೆ. ಇದರಿಂದಾಗಿ ಐದು ರಾಷ್ಟ್ರಗಳಿಗೆ ಮಾತ್ರ ಅರ್ಹತಾ ಪ್ರಕ್ರಿಯೆ ಮೂಲಕ ಒಲಿಂಪಿಕ್ಸ್‌ಗೆ ಪ್ರವೇಶ ಗಿಟ್ಟಿಸಲು ಅವಕಾಶವಿದೆ.
ಐಒಸಿಯು ಕ್ರಿಕೆಟ್ ಸೇರಿ ಐದು ಹೊಸ ಕ್ರೀಡೆಗಳನ್ನು 2028ರ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಳಿಸಲು 2023ರಲ್ಲಿ ನಿರ್ಧರಿಸಿತ್ತು. ಬೇಸ್‌ಬಾಲ್/ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ (ಸಿಕ್ಸಸ್) ಮತ್ತು ಸ್ಕ್ವಾಷ್ ಉಳಿದ ನಾಲ್ಕು ಆಟಗಳು.
ಇದೇ ಮೊದಲ ಬಾರಿ, 2028ರ ಒಲಿಂಪಿಕ್ಸ್‌ನಲ್ಲಿ ಎಲ್ಲ ಗುಂಪು ಕ್ರೀಡೆಗಳಲ್ಲಿ ಪುರುಷರ ತಂಡಗಳಷ್ಟೇ ಸಂಖ್ಯೆಯಲ್ಲಿ ಮಹಿಳಾ ತಂಡಗಳು ಇರಲಿವೆ.
ಬಾಕ್ಸಿಂಗ್‌ನಲ್ಲಿ ಮಹಿಳಾ ವಿಭಾಗದಲ್ಲೂ, ಪುರುಷರ ವಿಭಾಗದಲ್ಲಿ ಇರುವಂತೆ ಏಳು ತೂಕ ವಿಭಾಗಗಳು ಇರಲಿದ್ದು ಲಿಂಗಸಮಾನತೆ ಸಾಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.