ADVERTISEMENT

ಅನಿಲ್ ಕುಂಬ್ಳೆ 10 ವಿಕೆಟ್ ವಿಶ್ವ ದಾಖಲೆಗೆ 22ರ ಸಂಭ್ರಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2021, 5:14 IST
Last Updated 7 ಫೆಬ್ರುವರಿ 2021, 5:14 IST
ಅನಿಲ್ ಕುಂಬ್ಳೆ 10 ವಿಕೆಟ್ ಪಡೆದ ಅವಿಸ್ಮರಣೀಯ ಕ್ಷಣ
ಅನಿಲ್ ಕುಂಬ್ಳೆ 10 ವಿಕೆಟ್ ಪಡೆದ ಅವಿಸ್ಮರಣೀಯ ಕ್ಷಣ   

ಬೆಂಗಳೂರು: 22 ವರ್ಷಗಳ ಹಿಂದೆ ಅಂದಿನ ಇದೇ ದಿನದಲ್ಲಿ (ಫೆ. 7, 1999) ಜಂಬೋ ಖ್ಯಾತಿಯ ಭಾರತದ ಮಾಜಿ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ, ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ವೊಂದರಲ್ಲಿ ಎಲ್ಲ 10 ವಿಕೆಟ್‌ಗಳನ್ನು ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಅನಿಲ್ ಕುಂಬ್ಳೆ ಅವಿಸ್ಮರಣೀಯ ಸಾಧನೆ ಮಾಡಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇಂಗ್ಲೆಂಡ್‌ನ ಮಾಜಿ ಬೌಲರ್ ಜಿಮ್ ಲೇಕರ್ ಬಳಿಕ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್ ಎಂಬ ದಾಖಲೆಗೆ ಭಾಜನವಾದರು.

ಅನಿಲ್ ಕುಂಬ್ಳೆ ಬೌಲಿಂಗ್ ಸಾಧನೆ ಇಂತಿತ್ತು: 26.3-9-74-10

ADVERTISEMENT

1990ನೇ ಇಸವಿಯಲ್ಲಿ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಪದಾರ್ಪಣೆ ಮಾಡಿರುವ ಕರ್ನಾಟಕದ ಹೆಮ್ಮೆಯ ಅನಿಲ್ ಕುಂಬ್ಳೆ 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲೇ ಟಾಪ್ 3 ಬೌಲರ್‌ಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಶ್ರೀಲಂಕಾದ ಮಾಜಿ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಹಾಗೂ ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಬಳಿಕ ಅನಿಲ್ ಕುಂಬ್ಳೆ ಗುರುತಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲೂ ಶತಕ ಸಾಧನೆ ಮಾಡಿರುವ ಅನಿಲ್ ಕುಂಬ್ಳೆ, ಭಾರತದ ಪಾಲಿಗೆ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಕೊನೆಯ ಇನ್ನಿಂಗ್ಸ್‌ನಲ್ಲಿ 420 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಪಾಕಿಸ್ತಾನ ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 101 ರನ್ ಗಳಿಸಿತ್ತು. ಈ ಹಂತದಲ್ಲಿ ದಾಳಿಗಿಳಿದ ಅನಿಲ್ ಕುಂಬ್ಳೆ ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳ ಓಟಕ್ಕೆ ಕಡಿವಾಣ ಹಾಕಿದರು. ಒಂದರ ಬಳಿಕ ಒಂದರಂತೆ ಪಾಕ್ ಆಟಗಾರರು ಪೆವಿಲಿಯನ್‌ ಪೆರೇಡ್ ನಡೆಸಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿರುವ ಅನಿಲ್ ಕುಂಬ್ಳೆ ಪಂದ್ಯದಲ್ಲಿ ಒಟ್ಟು 14 ವಿಕೆಟ್ ಸಾಧನೆ ಮಾಡಿದ್ದರು. ಈ ಮೂಲಕ ಇಡೀ ದೇಶವೇ ಹೆಮ್ಮೆಪಟ್ಟುಕೊಳ್ಳುವಂತೆ ಮಾಡಿದರು.

ಈ ಅವಿಸ್ಮರಣೀಯ ಕ್ಷಣವನ್ನು ನೆನಪಿಸಿರುವ ಬಿಸಿಸಿಐ, ರೋಚಕ ವಿಡಿಯೊವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.