ADVERTISEMENT

ಏಷ್ಯಾ ಕಪ್‌ | ಪಾಕ್‌ ವಿರುದ್ಧದ ಪಂದ್ಯದಲ್ಲಿ ಒತ್ತಡಕ್ಕೆ ಒಳಗಾಗಲಿಲ್ಲ: ಹಾರ್ದಿಕ್‌

ಪಾಕ್‌ ಎದುರು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಆಲ್‌ರೌಂಡರ್‌

ಪಿಟಿಐ
Published 29 ಆಗಸ್ಟ್ 2022, 19:31 IST
Last Updated 29 ಆಗಸ್ಟ್ 2022, 19:31 IST
ಹಾರ್ದಿಕ್‌ ಪಾಂಡ್ಯ
ಹಾರ್ದಿಕ್‌ ಪಾಂಡ್ಯ   

ದುಬೈ: ಏಷ್ಯಾ ಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರಿನ ಪಂದ್ಯದ ಕೊನೆಯ ಓವರ್‌ನಲ್ಲಿ ಬ್ಯಾಟ್‌ ಮಾಡುವಾಗ ಯಾವುದೇ ಒತ್ತಡಕ್ಕೆ ಒಳಗಾಗಿರಲಿಲ್ಲ ಎಂದು ಭಾರತ ತಂಡದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಹೇಳಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ ಭಾರತ, ಐದು ವಿಕೆಟ್‌ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿತ್ತು. 25 ರನ್‌ಗಳಿಗೆ ಮೂರು ವಿಕೆಟ್‌ ಪಡೆದದ್ದಲ್ಲದೆ, 17 ಎಸೆತಗಳಲ್ಲಿ ಅಜೇಯ 33 ರನ್‌ ಗಳಿಸಿದ್ದ ಪಾಂಡ್ಯ ಅವರು ಆಲ್‌ರೌಂಡ್‌ ಆಟದ ಮೂಲಕ ಭಾರತ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

‘ಕೊನೆಯ ಓವರ್‌ನಲ್ಲಿ ಏಳು ರನ್‌ ಗಳಿಸುವ ಗುರಿ ನನಗೆ ದೊಡ್ಡ ಸವಾಲಾಗಿರಲಿಲ್ಲ. 15 ರನ್‌ಗಳು ಬೇಕಿದ್ದರೂ ಗಳಿಸುವ ವಿಶ್ವಾಸವಿತ್ತು. 20ನೇ ಓವರ್‌ ಬೌಲ್‌ ಮಾಡಲು ಬರುವ ಎದುರಾಳಿ ತಂಡದ ಬೌಲರ್‌ ನನಗಿಂತಲೂ ಹೆಚ್ಚಿನ ಒತ್ತಡದಲ್ಲಿರುತ್ತಾನೆ ಎಂಬುದು ತಿಳಿದಿತ್ತು’ ಎಂದಿದ್ದಾರೆ.

ADVERTISEMENT

‘ಒತ್ತಡ ನಿಭಾಯಿಸಿದರೆ ಮಾತ್ರ ನಿಮ್ಮ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕಿಳಿಸಬಹುದು. ಕೊನೆಯ ಓವರ್‌ ಬೌಲ್‌ ಮಾಡಿದ ಮೊಹಮ್ಮದ್‌ ನವಾಜ್‌ ಅತಿಯಾದ ಒತ್ತಡದಲ್ಲಿದ್ದರು. ಆದ್ದರಿಂದ ಅವರಿಂದ ತಪ್ಪನ್ನು ನಿರೀಕ್ಷಿಸುತ್ತಿದ್ದೆ’ ಎಂದು ನುಡಿದಿದ್ದಾರೆ.

ದುಬೈನಲ್ಲಿ ನಡೆದ ಪಂದ್ಯದ ಕೊನೆಯ ಓವರ್‌ನ ನಾಲ್ಕನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಪಾಂಡ್ಯ ಅವರು ಭಾರತಕ್ಕೆ ಗೆಲುವು ತಂದಿತ್ತಿದ್ದರು.

‘ಪಾಕ್‌ ವಿರುದ್ಧದ ಗೆಲುವು ಸಂತಸ ನೀಡಿದೆ. ಈ ಜಯ ನಮಗೆ ಮಹತ್ವದ್ದಾಗಿ ತ್ತು. ಒಂದು ತಂಡವಾಗಿ ನಮಗೆ ಸಾಕಷ್ಟು ಸವಾಲು ಎದುರಾಗಿತ್ತು. ರವೀಂದ್ರ ಜಡೇಜ ಅವರ ಆಟ ನನಗೆ ಖುಷಿ ನೀಡಿದೆ’ ಸಂತಸ ವ್ಯಕ್ತಪಡಿಸಿದ್ದಾರೆ.

29 ಎಸೆತಗಳಲ್ಲಿ 35 ರನ್‌ ಗಳಿಸಿದ್ದ ಜಡೇಜ ಅವರು ಪಾಂಡ್ಯ ಜತೆ ಐದನೇ ವಿಕೆಟ್‌ಗೆ 52 ರನ್‌ ಸೇರಿಸಿದ್ದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದಿದ್ದ ಅವರು ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.

‘ಬ್ಯಾಟಿಂಗ್‌ನಲ್ಲಿ ಬಡ್ತಿ ನೀಡಿದ್ದರಿಂದ ಹೆಚ್ಚಿನ ಜವಾಬ್ದಾರಿಯಿತ್ತು. ಸ್ಪಿನ್ನರ್‌ಗಳ ಎದುರು ದೊಡ್ಡ ಹೊಡೆತ ಗಳಿಸುವುದು ನನ್ನ ಯೋಜನೆಯಾಗಿತ್ತು. ಅನಿವಾರ್ಯ ಸಂದರ್ಭದಲ್ಲಿ ನಮ್ಮಿಂದ ಉತ್ತಮ ಜತೆಯಾಟ ಮೂಡಿಬಂತು’ ಎಂದು ಜಡೇಜ ಪ್ರತಿಕ್ರಿಯಿಸಿದ್ದಾರೆ.

ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ಬುಧವಾರ ಹಾಂಕ್‌ಕಾಂಗ್‌ ತಂಡದ ಸವಾಲನ್ನು ಎದುರಿಸಲಿದೆ.

ರವೂಫ್‌ಗೆ ಕೊಹ್ಲಿ ಉಡುಗೊರೆ
ದುಬೈ:
ವಿರಾಟ್‌ ಕೊಹ್ಲಿ ಅವರು ಪಾಕಿಸ್ತಾನ ತಂಡದ ವೇಗದ ಬೌಲರ್‌ ಹ್ಯಾರಿಸ್‌ ರವೂಫ್‌ ಅವರಿಗೆ ತಾವು ಸಹಿ ಹಾಕಿರುವ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದಕ್ಕೆ ಸಂಬಂಧಿಸಿದ ವಿಡಿಯೊವನ್ನು ಬಿಸಿಸಿಐ ತನ್ನ ಟ್ವಿಟರ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದೆ. ಕೊಹ್ಲಿ ಅವರಿಂದ ಜೆರ್ಸಿ ಪಡೆದ ಬಳಿಕ ಇಬ್ಬರು ಆಟಗಾರರು ಪರಸ್ಪರ ಹಸ್ತಲಾಘವ ಮಾಡುವ ದೃಶ್ಯ ವಿಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.