ADVERTISEMENT

ಪಡಿಕ್ಕಲ್ ಸ್ಫೋಟಕ ಶತಕ: ಟಿ20ಯಂತೆ ಬ್ಯಾಟಿಂಗ್ ಮಾಡಿ ಪಂಜಾಬ್ ಮಣಿಸಿದ ಕನ್ನಡಿಗರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2026, 13:41 IST
Last Updated 1 ಫೆಬ್ರುವರಿ 2026, 13:41 IST
<div class="paragraphs"><p>ದೇವದತ್ತ ಪಡಿಕ್ಕಲ್ ಬ್ಯಾಟಿಂಗ್‌&nbsp; –ಪಿಟಿಐ ಚಿತ್ರ</p></div>

ದೇವದತ್ತ ಪಡಿಕ್ಕಲ್ ಬ್ಯಾಟಿಂಗ್‌  –ಪಿಟಿಐ ಚಿತ್ರ

   

ಮೊಹಾಲಿ: ಇಲ್ಲಿ ಮುಕ್ತಾಯಗೊಂಡ ರಣಜಿ ಟ್ರೋಫಿಯ 7ನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ಹಾಗೂ ಪಂಜಾಬ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದ ಕೊನೆಯ ದಿನದಾಟದಲ್ಲಿ ರೋಚಕತೆಯಿಂದ ಕೂಡಿದ ಪಂದ್ಯವನ್ನು ಕರ್ನಾಟಕ ತಂಡ ಗೆದ್ದು ಬೀಗಿದೆ.

ಪಂದ್ಯದ ಕೊನೆಯ ದಿನವಾದ ಇಂದು (ಭಾನುವಾರ) ಪಂಜಾಬ್​ ತಂಡ 256 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ನ 7ರನ್‌ಗಳ ಮುನ್ನಡೆಯೊಂದಿಗೆ 250 ರನ್​ಗಳ ಗುರಿ ಪಡೆದ ಕರ್ನಾಟಕ ತಂಡ ಟಿ20 ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿ, ಕೇವಲ 27.5 ಓವರ್​ಗಳಲ್ಲಿ ಗುರಿ ತಲುಪಿ ಗೆಲುವಿನ ನಗೆ ಬೀರಿತು.

ADVERTISEMENT

ಪಂದ್ಯ ಡ್ರಾ ಮಾಡಿಕೊಳ್ಳಲೇಬೇಕೆಂದು ಪಂಜಾಬ್​ ಕ್ರಿಕೆಟಿಗರು ಹಲವು ಬಾರಿ ಪಂದ್ಯಕ್ಕೆ ಅಡಚಣೆ ಉಂಟು ಮಾಡಲು ಯತ್ನಿಸಿದರು. ಅವರ ವ್ಯರ್ಥ ಪ್ರಯತ್ನದ ಹೊರತಾಗಿಯೂ ನಾಯಕ ದೇವದತ್ತ ಪಡಿಕ್ಕಲ್ (120 ರನ್, 85ಎ, 6X5, 4X6) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ರೋಚಕ ಜಯ ದಾಖಲಿಸಿತು.

ಕ್ವಾರ್ಟರ್ ಫೈನಲ್‌ಗೆ ಲಗ್ಗೆ

ಈ ಅಮೋಘ ಜಯದೊಂದಿಗೆ ಕರ್ನಾಟಕ ತಂಡವು ಒಟ್ಟು 27 ಅಂಕಗಳೊಂದಿಗೆ ಎಲೈಟ್ ಗ್ರೂಪ್ ‘ಬಿ’ ಯಲ್ಲಿ ಅಗ್ರಸ್ಥಾನ ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಮುಂದಿನ ವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಬಲಿಷ್ಠ ಮುಂಬೈ ಅನ್ನು ಎದುರಿಸಲಿದೆ.

ಶ್ರೇಯಸ್ ಗೋಪಾಲ್ ಆಲ್​ರೌಂಡರ್ ಆಟ

ಈ ಬಾರಿ ರಣಜಿ ಟ್ರೋಫಿಯಲ್ಲಿ ಅಮೋಘ ಲಯದಲ್ಲಿರುವ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಈ ಪಂದ್ಯದಲ್ಲೂ ಮಿಂಚಿನ ಪ್ರದರ್ಶನ ತೋರಿದರು. ಮೊದಲ ಇನಿಂಗ್ಸ್‌ನಲ್ಲಿ ತಂಡ ಸಂಕಷ್ಟದಲ್ಲಿದ್ದಾಗ 77 ರನ್ ಬಾರಿಸಿ ಮುನ್ನಡೆ ತಂದುಕೊಡಲು ನೆರವಾಗಿದ್ದ ಅವರು, ಎರಡನೇ ಇನಿಂಗ್ಸ್‌ನಲ್ಲೂ 3 ವಿಕೆಟ್ ಪಡೆಯುವ ಮೂಲಕ ಪಂಜಾಬ್ ತಂಡವನ್ನು 256 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಚೇಸಿಂಗ್ ವೇಳೆ ನಾಯಕ ಪಡಿಕ್ಕಲ್ ಜೊತೆಗೂಡಿ 5ನೇ ವಿಕೆಟ್ ಜೊತೆಯಾಟದಲ್ಲಿ 43 ಎಸೆತಗಳಲ್ಲಿ 67 ರನ್​ ಸೇರಿಸಿದರು. ಗೋಪಾಲ್ ಕೇವಲ 22 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 33 ರನ್​ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಸಂಕ್ಷಿಪ್ತ ಸ್ಕೋರ್: ಪಂಜಾಬ್ ಮೊದಲ ಇನಿಂಗ್ಸ್ 309: (ಅಭಿಜೀರ್ ಗಾರ್ಗ್ 81 ರನ್, ಎಮನ್‌ಜೋತ್ ಸಿಂಗ್ ಚಹಲ್ 83 ರನ್. ಕರ್ನಾಟಕ ಪರ ವಿದ್ಯಾಧರ್ ಪಾಟೀಲ್ 4, ಶ್ರೇಯಸ್ ಗೋಪಾಲ್ 3 ವಿಕೆಟ್)

ಕರ್ನಾಟಕ ಮೊದಲ ಇನಿಂಗ್ಸ್ 316: (ಶ್ರೇಯಸ್ ಗೋಪಾಲ್ 77 ರನ್, ಕೆ.ಎಲ್. ರಾಹುಲ್ 59 ರನ್. ಪಂಜಾಬ್ ಪರ ಹರ್ಪ್ರೀತ್ ಬ್ರಾರ್ 4 ಹಾಗೂ ಸುಖ್‌ದೀಪ್ ಬಾಜ್ವಾ 3 ವಿಕೆಟ್)

ಪಂಜಾಬ್ ಎರಡನೇ ಇನಿಂಗ್ಸ್ 256: (ಉದಯ್ ಸಹರನ್ 93 ರನ್, ಅನ್‌ಮೋಲ್‌ಪ್ರೀತ್ ಸಿಂಗ್ 44 ರನ್. ಕರ್ನಾಟಕ ಪರ ಪ್ರಸಿದ್ಧ ಕೃಷ್ಣ 3 ಹಾಗೂ ಶ್ರೇಯಸ್ ಗೋಪಾಲ್ 3 ವಿಕೆಟ್)

ಕರ್ನಾಟಕ ಎರಡನೇ ಇನಿಂಗ್ಸ್ 252/5 ಗೆಲುವು: (ದೇವದತ್ತ ಪಡಿಕ್ಕಲ್ 120* ಹಾಗೂ ಮಯಾಂಕ್ ಅಗರ್ವಾಲ್ 53 ರನ್. ಪಂಜಾಬ್ ಪರ ಅನ್‌ಮೋಲ್‌ಪ್ರೀತ್ ಸಿಂಗ್ 3 ವಿಕೆಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.