ಧರ್ಮಶಾಲಾ ಕ್ರಿಕೆಟ್ ಮೈದಾನ
(ಚಿತ್ರ ಕೃಪೆ: X/@IPL)
ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ಕ್ಷಿಪಣಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಹಿಮಾಚಲ ಪ್ರದೇಶದ ಧರ್ಮಶಾಲಾ ಸೇರಿದಂತೆ ದೇಶದ ಪಶ್ಚಿಮ ಹಾಗೂ ಉತ್ತರ ಭಾಗದ ಹಲವು ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ.
ಸಶಸ್ತ್ರ ಪಡೆಯ ಈ ಕಾರ್ಯಾಚರಣೆಯು ವಿಶ್ವದ ಶ್ರೀಮಂತ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮೇಲೂ ಪರಿಣಾಮ ಬೀರಿದೆ.
ಇದರಿಂದಾಗಿ ಮೇ 11ರಂದು ಧರ್ಮಶಾಲಾದಲ್ಲಿ ನಿಗದಿಯಾಗಿದ್ದ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿದೆ.
ಗುಜರಾತ್ ಕ್ರಿಕೆಟ್ ಸಂಸ್ಥೆಯ (ಜಿಸಿಎ) ಕಾರ್ಯದರ್ಶಿ ಅನಿಲ್ ಪಟೇಲ್ ಈ ಕುರಿತು ಮಾಹಿತಿ ನೀಡಿದ್ದಾರೆ. ಪಂಜಾಬ್ ಹಾಗೂ ಮುಂಬೈ ನಡುವಣ ಪಂದ್ಯವು ಸಂಜೆ 3.30ಕ್ಕೆ ನಡೆಯಲಿದೆ.
ಇದೇ ಮೈದಾನದಲ್ಲಿ ಇಂದು (ಗುರುವಾರ) ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯ ನಿಗದಿಯಾಗಿದ್ದು, ಈಗಾಗಲೇ ಎರಡೂ ತಂಡಗಳು ಬಂದಿಳಿದಿವೆ.
ಮೇ 10ರವರೆಗೆ ಧರ್ಮಶಾಲಾ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಮುಂಬೈ ತಂಡದ ಪಯಣಕ್ಕೆ ತೊಂದರೆ ಉಂಟಾಗಿತ್ತು.
ಮೇ 11ರಂದೇ ದೆಹಲಿಯಲ್ಲಿ ರಾತ್ರಿ ನಡೆಯಲಿರುವ ಮಗದೊಂದು ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುಜರಾತ್ ಟೈಟನ್ಸ್ ಸವಾಲನ್ನು ಎದುರಿಸಲಿದೆ. ಧರ್ಮಶಾಲಾ ಹಾಗೂ ಚಂಡೀಗಢ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಅನಿಶ್ಚಿತತೆ ಮುಂದುವರಿದಿದೆ.
ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣವು ಪಂಜಾಬ್ ಕಿಂಗ್ಸ್‌ನ ಎರಡನೇ ತವರು ಕ್ರೀಡಾಂಗಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.