ADVERTISEMENT

ಬಾಂಗ್ಲಾದೇಶ ಎದುರಿನ ಟ್ವೆಂಟಿ–20: ಪಾಕಿಸ್ತಾನಕ್ಕೆ 4 ವಿಕೆಟ್‌ಗಳ ಗೆಲುವು

ಹಸನ್ ಅಲಿ, ಖುಷ್‌ದಿಲ್ ಶಾ ಉಪಯುಕ್ತ ಆಟ

ಏಜೆನ್ಸೀಸ್
Published 19 ನವೆಂಬರ್ 2021, 13:14 IST
Last Updated 19 ನವೆಂಬರ್ 2021, 13:14 IST
ಷರೀಫ್ ಹಸನ್ ವಿಕೆಟ್ ವಿಕೆಟ್ ಗಳಿಸಿದ ಮೊಹಮ್ಮದ್ ವಾಸಿಂ ಸಂಭ್ರಮ –ಎಎಫ್‌ಪಿ ಚಿತ್ರ
ಷರೀಫ್ ಹಸನ್ ವಿಕೆಟ್ ವಿಕೆಟ್ ಗಳಿಸಿದ ಮೊಹಮ್ಮದ್ ವಾಸಿಂ ಸಂಭ್ರಮ –ಎಎಫ್‌ಪಿ ಚಿತ್ರ   

ಢಾಕಾ: ಆತಿಥೇಯ ಬಾಂಗ್ಲಾದೇಶ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ ಪಾಕಿಸ್ತಾನ ಟ್ವೆಂಟಿ–20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳಿಂದ ಜಯ ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಶೇರ್ ಇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 127 ರನ್ ಗಳಿಸಲಷ್ಟೇ ತಂಡಕ್ಕೆ ಸಾಧ್ಯವಾಯಿತು. ಗುರಿ ಬೆನ್ನತ್ತಿದ ಪಾಕಿಸ್ತಾನ ನಾಲ್ಕು ಎಸೆತ ಉಳಿದಿರುವಾಗಲೇ ಜಯ ಗಳಿಸಿತು.

ವೇಗದ ಬೌಲರ್ ಹಸನ್ ಅಲಿ ಮತ್ತು ಮೊಹಮ್ಮದ್ ವಾಸಿಂ ಅವರ ಅಮೋಘ ದಾಳಿಯಿಂದಾಗಿ ಬಾಂಗ್ಲಾದೇಶ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು. ಅಫೀಫ್ ಹೊಸೇನ್, ನೂರುಲ್ ಹಸನ್‌ ಮತ್ತು ಮಹದಿ ಹಸನ್ ಸ್ವಲ್ಪ ಪ್ರತಿರೋಧ ತೋರಿದರು.

ಪಾಕಿಸ್ತಾನದ ಆರಂಭ ಚೆನ್ನಾಗಿರಲಿಲ್ಲ. 24 ರನ್ ಗಳಿಸುವಷ್ಟರಲ್ಲಿ ತಂಡ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಹೈದರ್ ಅಲಿ ಮತ್ತು ಶೋಯೆಬ್ ಮಲಿಕ್ ಶೂನ್ಯಕ್ಕೆ ಔಟಾದರು. ಆದರೆ ಫಖ್ರ್ ಜಮಾನ್ ಮತ್ತು ಖುಷ್‌ದಿಲ್ ಶಾ ಅವರು ತಂಡದ ಇನಿಂಗ್ಸ್‌ಗೆ ಬಲ ತುಂಬಿದರು. 10 ಎಸೆತಗಳಲ್ಲಿ 21 ರನ್‌ಗಳೊಂದಿಗೆ ಅಜೇಯರಾಗಿ ಉಳಿದ ಶಾದಬ್ ಖಾನ್ ಸಿಕ್ಸರ್ ಮೂಲಕ ಗೆಲುವಿನ ರನ್ ಹೊಡೆದರು.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 20 ಓವರ್‌ಗಳಲ್ಲಿ 7ಕ್ಕೆ 127 (ಅಫೀಫ್ ಹೊಸೇನ್ 36, ನೂರುಲ್ ಹಸನ್ 28, ಮೆಹದಿ ಹಸನ್ 30; ಮೊಹಮ್ಮದ್‌ ನವಾಜ್‌ 27ಕ್ಕೆ1, ಹಸನ್‌ ಅಲಿ 22ಕ್ಕೆ3, ಮೊಹಮ್ಮದ್‌ ವಾಸಿಂ 24ಕ್ಕೆ2, ಶಾದಬ್ ಖಾನ್ 20ಕ್ಕೆ1); ಪಾಕಿಸ್ತಾನ:19.2 ಓವರ್‌ಗಳಲ್ಲಿ 6ಕ್ಕೆ 132 (ಮೊಹಮ್ಮದ್ ರಿಜ್ವಾನ್ 11, ಫಖ್ರ್‌ ಜಮಾನ್ 34, ಖುಷ್‌ದಿಲ್ ಶಾ 34, ಶಾದಬ್‌ ಖಾನ್ 21, ಮೊಹಮ್ಮದ್ ನವಾಜ್ 18; ಮೆಹದಿ ಹಸನ್ 17ಕ್ಕೆ1, ತಸ್ಕಿನ್ ಅಹಮ್ಮದ್‌ 31ಕ್ಕೆ2, ಮುಸ್ತಫಿಜುರ್ ರಹಮಾನ್ 26ಕ್ಕೆ1, ಶೊರಿಫುಲ್ ಇಸ್ಲಾಮ್ 31ಕ್ಕೆ1). ಫಲಿತಾಂಶ: ಪಾಕಿಸ್ತಾನಕ್ಕೆ 4 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.