ADVERTISEMENT

28ಕ್ಕೆ ಇಂಗ್ಲೆಂಡ್‌ಗೆ ತೆರಳಲಿರುವ ಪಾಕ್‌ ತಂಡ

ಏಜೆನ್ಸೀಸ್
Published 20 ಜೂನ್ 2020, 11:58 IST
Last Updated 20 ಜೂನ್ 2020, 11:58 IST
ಪಾಕಿಸ್ತಾನ ಕ್ರಿಕೆಟ್‌ ತಂಡ–ಸಾಂದರ್ಭಿಕ ಚಿತ್ರ
ಪಾಕಿಸ್ತಾನ ಕ್ರಿಕೆಟ್‌ ತಂಡ–ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌‌: ಪಾಕಿಸ್ತಾನ ಕ್ರಿಕೆಟ್‌ ತಂಡವು ಇದೇ ತಿಂಗಳ 28ರಂದು ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದೆ.

ಈ ಪ್ರವಾಸದ ವೇಳೆ ಪಾಕ್‌, ಆಂಗ್ಲರ ನಾಡಿನ ತಂಡದ ವಿರುದ್ಧ ತಲಾ ಮೂರು ಟೆಸ್ಟ್‌ ಹಾಗೂ ಟ್ವೆಂಟಿ–20 ಪಂದ್ಯಗಳ ಕ್ರಿಕೆಟ್‌ ಸರಣಿಗಳನ್ನು ಆಡಲಿದೆ.

‘ಇಂಗ್ಲೆಂಡ್‌ ತಲುಪಿದ ಬಳಿಕ ಎಲ್ಲಾ ಆಟಗಾರರು ಡರ್ಬಿಶೈರ್‌ನಲ್ಲಿ 14 ದಿನಗಳ ಸ್ವಯಂ ಪ್ರತ್ಯೇಕವಾಸದಲ್ಲಿರಲಿದ್ದಾರೆ’ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು (ಪಿಸಿಬಿ) ಶನಿವಾರ ತಿಳಿಸಿದೆ.

ADVERTISEMENT

‘ಒಟ್ಟು 29 ಮಂದಿಯ ತಂಡವು ಇಂಗ್ಲೆಂಡ್‌ಗೆ ಹೋಗಲಿದೆ. ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಬದಲಿ ಆಟಗಾರನನ್ನು ಕಣಕ್ಕಿಳಿಸಲು ಇದರಿಂದ ಅನುಕೂಲವಾಗಲಿದೆ. ಮಾರ್ಚ್‌17ರ ನಂತರ ನಮ್ಮ ತಂಡದವರು ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ಹೀಗಾಗಿ ಇಂಗ್ಲೆಂಡ್‌ಗೆ ಹೋದ ಮೇಲೆ ನಮ್ಮಲ್ಲೇ ಎರಡು ತಂಡಗಳನ್ನಾಗಿ ಮಾಡಿಕೊಂಡು ಅಭ್ಯಾಸ ಪಂದ್ಯಗಳನ್ನು ಆಡಲಿದ್ದಾರೆ’ ಎಂದು ಪಿಸಿಬಿ ಮಾಹಿತಿ ನೀಡಿದೆ.

‘ಲಾಕ್‌ಡೌನ್‌ ಜಾರಿಯಾದ ದಿನದಿಂದ ಹಿರಿಯ ಆಲ್‌ರೌಂಡರ್‌ ಶೋಯಬ್‌ ಮಲಿಕ್‌ ಅವರು ತಮ್ಮ ತವರೂರು ಸಿಯಾಲ್‌‌ಕೋಟ್‌ನಲ್ಲೇ ಇದ್ದಾರೆ. ಅವರ ಪತ್ನಿ ಸಾನಿಯಾ ಮಿರ್ಜಾ ಹಾಗೂ ಒಂದು ವರ್ಷದ ಮಗ ಇಜಾನ್‌ ಅವರು ಭಾರತದಲ್ಲಿದ್ದಾರೆ. ಅವರೊಂದಿಗೆ ಸಮಯ ಕಳೆಯಲು ಶೋಯಬ್‌ ಬಯಸಿದ್ದಾರೆ. ಅವರು ಟ್ವೆಂಟಿ–20 ತಂಡದಲ್ಲಿ ಸ್ಥಾನ‍‍ಪಡೆದಿರುವ ಕಾರಣ ಜುಲೈ 24ರಂದು ಇಂಗ್ಲೆಂಡ್‌ಗೆ ಹೋಗಲಿದ್ದಾರೆ. ಈ ಸಂಬಂಧ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯ(ಇಸಿಬಿ) ಜೊತೆ ಮಾತುಕತೆ ನಡೆಸಿದ್ದೇವೆ. ಅವರೂ ಒಪ್ಪಿಕೊಂಡಿದ್ದಾರೆ’ ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಾಸೀಂ ಖಾನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.