ADVERTISEMENT

PAK vs AUS | ಪಾಕ್ ಸೋಲು ತಪ್ಪಿಸಿದ ರಿಜ್ವಾನ್, ಬಾಬರ್

ಪಿಟಿಐ
Published 16 ಮಾರ್ಚ್ 2022, 22:53 IST
Last Updated 16 ಮಾರ್ಚ್ 2022, 22:53 IST
ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್   –ಎಎಫ್‌ಪಿ ಚಿತ್ರ
ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್   –ಎಎಫ್‌ಪಿ ಚಿತ್ರ   

ಕರಾಚಿ: ದಿಟ್ಟ ಹೋರಾಟ ಮಾಡಿದ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಶತಕಗಳಿಂದಾಗಿ ಆತಿಥೇಯ ಪಾಕಿಸ್ತಾನವು ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲಿ ಸೋಲು ತಪ್ಪಿಸಿಕೊಂಡಿತು. ಪಂದ್ಯ ಡ್ರಾ ಆಯಿತು.

ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವು ಪಾಕ್‌ ಬಳಗಕ್ಕೆ 506 ರನ್‌ಗಳ ಗೆಲುವಿನ ಗುರಿಯೊಡ್ಡಿತ್ತು. ಅದಕ್ಕುತ್ತರವಾಗಿ ಆತಿಥೇಯ ತಂಡವು 171.4 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 443 ರನ್ ಗಳಿಸಿತು. ಪಂದ್ಯದ ನಾಲ್ಕನೇ ಇನಿಂಗ್ಸ್‌ ಹೆಚ್ಚು ಸ್ಕೋರ್ ಗಳಿಸಿದ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆಯಿತು.

ನಾಯಕ ಬಾಬರ್ ಆಜಂ (196; 425ಎ, 4X21, 6X1) ಮತ್ತು ರಿಜ್ವಾನ್ (ಔಟಾಗದೆ 104, 177ಎ, 4X11, 6X1) ತಾಳ್ಮೆಯ ಬ್ಯಾಟಿಂಗ್ ಮಾಡಿ ತಂಡದ ಸೋಲು ತಪ್ಪಿಸಿದರು. ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್ (75ಕ್ಕೆ2) ಮತ್ತು ಸ್ಪಿನ್ನರ್ ನೇಥನ್ ಲಯನ್ (112ಕ್ಕೆ4) ಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸಲಿಲ್ಲ.

ADVERTISEMENT

ಮಂಗಳವಾರ ದಿನದಾಟದ ಅಂತ್ಯಕ್ಕೆ ಪಾಕ್ ತಂಡವು 82 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 192 ರನ್ ಗಳಿಸಿತ್ತು. ಆರಂಭಿಕ ಬ್ಯಾಟರ್ ಅಬ್ಧುಲ್ ಶಫೀಕ್ (71 ರನ್) ಮತ್ತು ಬಾಬರ್ (102) ಕ್ರೀಸ್‌ನಲ್ಲಿ ಉಳಿದಿದ್ದರು.

ಕೊನೆಯ ದಿನದಾಟ ಮುಂದುವರಿಸಿದ ಇಬ್ಬರೂ ಎದುರಾಳಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 228 ರನ್‌ಗಳನ್ನು ಸೇರಿಸಿದರು. ಶತಕದ ಸನಿಹವಿದ್ದ ಶಫೀಕ್ ವಿಕೆಟ್ ಗಳಿಸಿದ ಪ್ಯಾಟ್ ಕಮಿನ್ಸ್ ಜೊತೆಯಾಟ ಮುರಿದರು. ಫವಾದ್ ಆಲಂ ವಿಕೆಟ್ ಕೂಡ ಕಮಿನ್ಸ್ ಪಾಲಾಯಿತು. ಈ ಹಂತದಲ್ಲಿ ಬಾಬರ್ ಜೊತೆಗೂಡಿದ ರಿಜ್ವಾನ್ ಇನಿಂಗ್ಸ್‌ಗೆ ಬಲ ತುಂಬಿದರು. ಐದನೇ ವಿಕೆಟ್ ಜೊತೆಯಾಟದಲ್ಲಿ 115 ರನ್‌ಗಳನ್ನು ಸೇರಿಸಿದರು.

ತಮ್ಮ ದ್ವಿಶತಕಕ್ಕೆ ಇನ್ನೂ ನಾಲ್ಕು ರನ್‌ ಗಳಿಸಬೇಕಿದ್ದ ಬಾಬರ್ ಅವರು ಎಡವಿದರು. ಲಯನ್ ಬೌಲಿಂಗ್‌ನಲ್ಲಿ ಲಾಬುಷೇನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ಈ ಹಂತದಲ್ಲಿ ಪಂದ್ಯದಲ್ಲಿ ಒಂದಿಷ್ಟು ರೋಚಕ ಕ್ಷಣಗಳು ದಾಖಲಾದವು. ಒಂದು ಬದಿ ರಿಜ್ವಾನ್ ಹೋರಾಟ ನಡೆಸಿದರು. ಇನ್ನೊಂದೆಡೆ ಸ್ಪಿನ್ನರ್ ಲಯನ್ ಬೌಲಿಂಗ್‌ನಲ್ಲಿ ಪಾಕ್ ತಂಡದ ಕೆಳಕ್ರಮಾಂಕದ ಬ್ಯಾಟರ್‌ಗಳು ಕುಸಿದರು. ಫಾಹೀಮ್ ಅಶ್ರಫ್, ಸಾಜಿದ್ ಖಾನ್ ವಿಕೆಟ್‌ಗಳು ಲಯನ್ ಪಾಲಾದವು.

ಆದರೂ ಛಲ ಬಿಡದ ರಿಜ್ವಾನ್ ದಿನದಾಟದ ಅಂತ್ಯದವರೆಗೂ ಬ್ಯಾಟಿಂಗ್ ಮಾಡಿದರು. ಇನ್ನೊಂದೆಡೆ ವಿಕೆಟ್‌ಗಳು ಉರುಳದಂತೆಯೂ ನೋಡಿಕೊಂಡರು. ನೌಮನ್ ಅಲಿ 18 ಎಸೆತ ಎದುರಿಸಿದರೂ ಒಂದೂ ರನ್ ಗಳಿಸಿದೇ ರಿಜ್ವಾನ್‌ಗೆ ಉತ್ತಮ ಜೊತೆ ನೀಡಿದರು.

ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್
ಆಸ್ಟ್ರೇಲಿಯಾ:
189 ಓವರ್‌ಗಳಲ್ಲಿ 9ಕ್ಕೆ556ಡಿಕ್ಲೇರ್ಡ್
ಪಾಕಿಸ್ತಾನ: 53 ಓವರ್‌ಗಳಲ್ಲಿ 148
ಎರಡನೇ ಇನಿಂಗ್ಸ್
ಆಸ್ಟ್ರೇಲಿಯಾ:
22.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 97 ಡಿಕ್ಲೇರ್ಡ್
ಪಾಕಿಸ್ತಾನ: 171.4 ಓವರ್‌ಗಳಲ್ಲಿ 7ಕ್ಕೆ443 (ಬಾಬರ್ ಆಜಂ 196, ಮೊಹಮ್ಮದ್ ರಿಜ್ವಾನ್ ಔಟಾಗದೆ 104, ಪ್ಯಾಟ್ ಕಮಿನ್ಸ್ 75ಕ್ಕೆ2, ನೇಥನ್ ಲಯನ್ 112ಕ್ಕೆ4)

ಫಲಿತಾಂಶ: ಪಂದ್ಯ ಡ್ರಾ. ಪಂದ್ಯಶ್ರೇಷ್ಠ: ಬಾಬರ್ ಅಜಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.