ADVERTISEMENT

ಕೋವಿಡ್ ರೋಗಿಗಳ ನೆರವಿಗೆ ಧಾವಿಸಿದ ಪಾಂಡ್ಯಾ ಸಹೋದರರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮೇ 2021, 10:02 IST
Last Updated 24 ಮೇ 2021, 10:02 IST
ಕೃಣಾಲ್ ಮತ್ತು ಹಾರ್ದಿಕ್ ಪಾಂಡ್ಯಾ ಸಹೋದರರು
ಕೃಣಾಲ್ ಮತ್ತು ಹಾರ್ದಿಕ್ ಪಾಂಡ್ಯಾ ಸಹೋದರರು   

ವಡೋದರ: ಟೀಮ್ ಇಂಡಿಯಾ ಆಟಗಾರರಾದ ಹಾರ್ದಿಕ್ ಮತ್ತು ಕೃಣಾಲ್ ಪಾಂಡ್ಯಾ ಸಹೋದರರು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವವರ ನೆರವಿಗೆ ಧಾವಿಸಿದ್ದಾರೆ.

ಬಿಕ್ಕಟ್ಟು ಸೃಷ್ಟಿಯಾಗಿರುವ ಕೋವಿಡ್ ಆರೈಕೆ ಕೇಂದ್ರಗಳಿಗೆ ಆಮ್ಲಜನಕ ಸಾಂದ್ರಕ(ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌)ಗಳನ್ನು ರವಾನಿಸುವ ಕೆಲಸ ಆರಂಭಿಸಿದ್ದಾರೆ. ಈ ಬಗ್ಗೆ ಕೃಣಾಲ್ ಪಾಂಡ್ಯಾ, ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ನಮ್ಮ ಹೃದಯದ ಪ್ರಾರ್ಥನೆಯೊಂದಿಗೆ ಈ ಹೊಸ ಬ್ಯಾಚ್ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ರೋಗಿಗಳ ತ್ವರಿತ ಚೇತರಿಕೆಗಾಗಿ ಕೋವಿಡ್ ಕೇಂದ್ರಗಳಿಗೆ ರವಾನಿಸುತ್ತಿದ್ದೇವೆ’ ಎಂದು ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಕೃಣಾಲ್ ಪಾಂಡ್ಯಾ, ಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ.

ADVERTISEMENT

ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧವನ್ನು ಒಟ್ಟಾಗಿ ಕೆಲಸ ಮಾಡುವ ಮೂಲಕ ಗೆಲ್ಲಬಹುದು ಎಂದು ಹಾರ್ದಿಕ್ ಪಾಂಡ್ಯಾ ಟ್ವೀಟ್ ಮಾಡಿದ್ದಾರೆ.

‘ನಾವು ಒಂದು ಕಠಿಣ ಯುದ್ಧದ ನಡುದಾರಿಯಲ್ಲಿದ್ದೇವೆ. ಒಟ್ಟಾಗಿ ಕೆಲಸ ಮಾಡುವ ಮೂಲಕ ಈ ಯುದ್ಧವನ್ನು ಗೆಲ್ಲಬಹುದು’ ಎಂದು ಅವರು ಹೇಳಿದ್ದಾರೆ.

ತೀವ್ರವಾಗಿ ಹರಡುತ್ತಿರುವ ಸಾಂಕ್ರಾಮಿಕ ರೋಗದ ವಿರುದ್ಧದ ದೇಶದ ಹೋರಾಟದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸಹೋದರ ಕೃಣಾಲ್ ಸೇರಿ ತಮ್ಮ ಇಡೀ ಕುಟುಂಬವು 200 ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ದಾನ ಮಾಡುವುದಾಗಿ ಈ ತಿಂಗಳ ಆರಂಭದಲ್ಲಿ ಆಲ್‌ರೌಂಡರ್ ಹಾರ್ದಿಕ್ ಘೋಷಿಸಿದ್ದರು.

ಪ್ರಸ್ತುತ, ಭಾರತವು ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿ ತತ್ತರಿಸುತ್ತಿದೆ. ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿ ಪ್ರಕಾರ, 24 ಗಂಟೆಗಳಲ್ಲಿ ದೇಶದಲ್ಲಿ 2,22,315 ಹೊಸ ಪ್ರಕರಣಗಳು, 4,454 ಸಾವು ಸಂಭವಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.