ADVERTISEMENT

ಫಿಟ್ನೆಸ್ ಕಾಪಾಡಿಕೊಳ್ಳಲು ದೇಶಿ ಟೂರ್ನಿಯಲ್ಲಿ ವಿರಾಟ್, ರೋಹಿತ್ ಆಡಲಿ: ಜಗದಾಳೆ

ಪಿಟಿಐ
Published 22 ಅಕ್ಟೋಬರ್ 2025, 13:18 IST
Last Updated 22 ಅಕ್ಟೋಬರ್ 2025, 13:18 IST
   

ಇಂದೋರ್: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಪಂದ್ಯದ ವೇಳೆ ಫಿಟ್ನೆಸ್ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ದೇಶಿ ಟೂರ್ನಿಯಲ್ಲಿ ಆಡಬೇಕು ಎಂದು ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ಆಯ್ಕೆದಾರ ಸಂಜಯ್ ಜಗದಾಳೆ ಅವರು ಬುಧವಾರ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಹಾಗೂ ರೋಹಿತ್ ಅವರು ಕೇವಲ ಒಂದೇ ಮಾದರಿಯ ಕ್ರಿಕೆಟ್‌ನಲ್ಲಿ ಆಡುತ್ತಿರುವುದರಿಂದ, ಅವರು ಫಿಟ್ನೆಸ್ ಕಾಯ್ದುಕೊಳ್ಳಲು ದೇಶಿ ಟೂರ್ನಿಯಲ್ಲಿ ಆಡಬೇಕಿದೆ ಎಂದಿದ್ದಾರೆ.

2027ರ ವಿಶ್ವಕಪ್‌ನಲ್ಲಿ ಕೊಹ್ಲಿ ಮತ್ತು ಶರ್ಮಾ ಅವರು ತಂಡದಲ್ಲಿ ಸ್ಥಾನ ಪಡೆಯಲು ಅವರ ಫಾರ್ಮ್ ಮತ್ತು ಫಿಟ್ನೆಸ್ ಮುಖ್ಯ ಕಾರಣವಾಗಲಿದೆ. ಅವರಿಬ್ಬರೂ ಕೇವಲ ಒಂದೇ ಮಾದರಿಯ ಕ್ರಿಕೆಟ್‌ನಲ್ಲಿ ಮುಂದುವರಿಯಲು ತೆಗೆದುಕೊಂಡ ನಿರ್ಧಾರವು ಅವರಿಗೆ ಕಠಿಣವಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಮೊದಲಿನ ಆಟ ಅವರಲ್ಲಿ ಇರುವುದಿಲ್ಲ. ಇದಕ್ಕೆ ಧೋನಿ, ಮ್ಯಾಥ್ಯೂ ಹೇಡನ್, ಲಾರಾ ಅವರಂತಹ ಆಟಗಾರರೇ ಹೊರತಾಗಿಲ್ಲ ಎಂದಿದ್ದಾರೆ.

ಆರು ತಿಂಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರು. ರೋಹಿತ್ 8 ರನ್ ಗಳಿಸಿದ್ದರೆ, ವಿರಾಟ್ ಶೂನ್ಯಕ್ಕೆ ಔಟಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.