ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯವರು ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರನ್ನು ಭೇಟಿ ಮಾಡಿರುವ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಎರಡು ದಿನಗಳ ಬಿಹಾರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ವಿಮಾನ ನಿಲ್ದಾಣದಲ್ಲಿ ವೈಭವ್ ಅವರನ್ನು ಭೇಟಿ ಮಾಡಿದ್ದಾರೆ.
'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, 'ಪಾಟ್ನಾ ವಿಮಾನ ನಿಲ್ದಾಣದಲ್ಲಿ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಹಾಗೂ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದೆ. ಅವರ ಕ್ರಿಕೆಟ್ ಸಾಧನೆ ಕುರಿತು ದೇಶವೇ ಮಾತನಾಡುತ್ತಿದೆ. ಅವರಿಗೆ ಒಳಿತಾಗಲಿ' ಎಂದು ಆರೈಸಿದ್ದಾರೆ.
ಕೇವಲ 14 ವರ್ಷದ ಎಡಗೈ ದಾಂಡಿಗ ವೈಭವ್ ಅವರು 2011ರಲ್ಲಿ ಜನಿಸಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಐಪಿಎಲ್ ಪಾದಾರ್ಪಣೆ ಮಾಡಿದ ದಾಖಲೆ ಇವರ ಹೆಸರಲ್ಲಿದೆ.
ಬಿಹಾರ ಮೂಲದ ವೈಭವ್, ಈ ಬಾರಿ ರಾಜಸ್ಥಾನ ರಾಯಲ್ಸ್ ಪರ 7 ಪಂದ್ಯಗಳಿಂದ 206.56 ಸ್ಟ್ರೈಕ್ ರೇಟ್‌ನಲ್ಲಿ 252ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಒಂದು ಅರ್ಧ ಶತಕ ಕೂಡ ಸೇರಿದೆ.
ವೈಭವ್ ಸೂರ್ಯವಂಶಿ ಅವರು ಪ್ರತಿನಿಧಿಸಿದ್ದ ರಾಜಸ್ಥಾನ ರಾಯಲ್ಸ್ ತಂಡವು ಲೀಗ್ ಹಂತದಲ್ಲಿ ಕೇವಲ 4 ಗೆಲುವಿನ ಮೂಲಕ ಅಂಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದುಕೊಂಡಿತು.
ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ವೈಭವ್ ಅವರು ಇಂಗ್ಲೆಂಡ್ ವಿರುದ್ಧದ ಅಂಡರ್-19 ಏಕದಿನ ಸರಣಿಗೆ ಭಾರತ ಕಿರಿಯರ ತಂಡಕ್ಕೂ ಆಯ್ಕೆಯಾಗಿದ್ದಾರೆ. ಸ್ಪೋಟಕ ಬ್ಯಾಟಿಂಗ್ ಮೂಲದ ಸದ್ದು ಮಾಡಿರುವ ವೈಭವ್, ಭವಿಷ್ಯದಲ್ಲಿ ಸ್ಟಾರ್ ಆಟಗಾರನಾಗುವ ಸಾಧ್ಯತೆಯಿದೆ ಎಂದು ಕ್ರಿಕೆಟ್ ಪಂಡಿತರು ವಿಶ್ಲೇಷಣೆ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.