ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಬೌಲರ್ ಅರ್ಷದೀಪ್ ಸಿಂಗ್
–ಪಿಟಿಐ ಚಿತ್ರ
ಅಹಮದಾಬಾದ್: ಮುಂಬೈಕರ್ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ಮತ್ತು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಭಾನುವಾರ ಇಲ್ಲಿ ನಡೆಯಲಿರುವ ಎರಡನೇ ಕ್ವಾಲಿಫಯರ್‌ನಲ್ಲಿ ಮುಖಾಮುಖಿಯಾಗಲಿವೆ.
ಈ ಪಂದ್ಯದಲ್ಲಿ ಗೆದ್ದವರು ಫೈನಲ್ ಪ್ರವೇಶಿಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುವರು. ಆದ್ದರಿಂದ ಮುಂಬೈ ಮತ್ತು ಪಂಜಾಬ್ ಹಣಾಹಣಿಯನ್ನು ‘ಸೆಮಿಫೈನಲ್’ ಎಂದೇ ಹೇಳಲಾಗುತ್ತಿದೆ. ಲೀಗ್ ಹಂತದಲ್ಲಿ ಉಭಯ ತಂಡಗಳು ಮುಖಾಮಖಿಯಾಗಿದ್ದು, ಪಂಜಾಬ್ ತಂಡವು ಜಯಿಸಿತ್ತು.
ಎಲಿಮಿನೇಟರ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿ ಬಂದಿರುವ ಮುಂಬೈ ತಂಡವನ್ನು ಮಣಿಸಲು ಪಂಜಾಬ್ ಸರ್ವರೀತಿಯಿಂದಲೂ ಸಜ್ಜಾಗಬೇಕಿದೆ. ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದರು. ಅದರಿಂದಾಗಿ ಅಲ್ಪಮೊತ್ತ ದಾಖಲಾಗಿತ್ತು. ಅದನ್ನು ರಕ್ಷಿಸಿಕೊಳ್ಳುವ ತಂಡದ ಪ್ರಯತ್ನಕ್ಕೆ ಬಲ ತುಂಬಲು ಎಡಗೈ ವೇಗಿ ಮಾರ್ಕೊ ಯಾನ್ಸೆನ್ ಮತ್ತು ಸ್ಪಿನ್ ಚತುರ ಯಜುವೇಂದ್ರ ಚಾಹಲ್ ಇರಲಿಲ್ಲ. ಯಾನ್ಸೆನ್ ತಮ್ಮ ತವರು ದೇಶಕ್ಕೆ ಮರಳಿದ್ದಾರೆ. ಚಾಹಲ್ ಅವರು ಗಾಯದ ಸಮಸ್ಯೆಯಿಂದ ಬಳಲಿದ್ದರು. ಈ ಪಂದ್ಯಕ್ಕೆ ಅವರು ಮರಳುವ ಬಗ್ಗೆ ಖಚಿತವಿಲ್ಲ.
ಎಲಿಮಿನೇಟರ್ ಪಂದ್ಯದ ಗೆಲುವಿನ ರೂವಾರಿ ರೋಹಿತ್ ಶರ್ಮಾ ಅಮೋಘ ಲಯದಲ್ಲಿದ್ದಾರೆ. ಈ ಪಂದ್ಯದ ಮೂಲಕ ಈ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಇಂಗ್ಲೆಂಡ್‌ನ ಜಾನಿ ಬೆಸ್ಟೊ ಕೂಡ ಅಬ್ಬರಿಸಿದ್ದರು. ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ನಮನ್ ಧೀರ್ ಹಾಗೂ ಹಾರ್ದಿಕ್ ಪಾಂಡ್ಯ ಉತ್ತಮ ಲಯದಲ್ಲಿದ್ದಾರೆ. ಅವರನ್ನು ಕಟ್ಟಿಹಾಕಲು ಪಂಜಾಬ್ ತಂಡವು ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ ಮತ್ತು ಹರಪ್ರೀತ್ ಬ್ರಾರ್ ಅವರನ್ನೇ ಅವಲಂಬಿಸಬೇಕಿದೆ.
ಆದರೆ ಮುಂಬೈ ಬೌಲಿಂಗ್ ಪಡೆ ಬಲಾಢ್ಯವಾಗಿದೆ. ಜಸ್‌ಪ್ರೀತ್ ಬೂಮ್ರಾ ಅವರ ಯಾರ್ಕರ್ ಮೊನಚು ಮತ್ತು ಟ್ರೆಂಟ್ ಬೌಲ್ಟ್ ಎಸೆತಗಳ ನಿಖರತೆಯು ಎದುರಾಳಿ ಬ್ಯಾಟರ್‌ಗಳನ್ನು ಕಾಡುವುದು ಖಚಿತ. ಅಶ್ವಿನಿ ಕುಮಾರ್, ಸ್ಪಿನ್ನರ್ ಕರ್ಣ್ ಶರ್ಮಾ ಅವರು ಕೂಡ ಉತ್ತಮವಾಗಿ ಆಡುತ್ತಿದ್ದಾರೆ.
ಪಂಜಾಬ್ ತಂಡವು ಬ್ಯಾಟಿಂಗ್‌ನಲ್ಲಿ ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್, ಪ್ರಭಸಿಮ್ರನ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಮುಷೀರ್ ಖಾನ್ ಅವರ ಮೇಲೆ ಭರವಸೆ ನೆಟ್ಟಿದೆ.
ಪಂಜಾಬ್ ಕಿಂಗ್ಸ್ ತಂಡಕ್ಕೆ ಕಳೆದ 18 ವರ್ಷಗಳಲ್ಲಿ ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ. 11 ವರ್ಷಗಳ ನಂತರ ಪ್ಲೇ ಆಫ್ ಪ್ರವೇಶಿದೆ. ಮುಂಬೈ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಡುವ ಛಲದಲ್ಲಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.