ADVERTISEMENT

ಕಿಂಗ್ಸ್‌ಗೆ ಸೂಪರ್ ಕಿಂಗ್ಸ್‌ ಸವಾಲು; ಚೆನ್ನೈಗೆ ಜಯದ ಖಾತೆ ತೆರೆಯುವ ಕನಸು

ಮಹೇಂದ್ರಸಿಂಗ್ ಧೋನಿ – ಕೆ.ಎಲ್. ರಾಹುಲ್ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 12:01 IST
Last Updated 16 ಏಪ್ರಿಲ್ 2021, 12:01 IST
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ   

ಮುಂಬೈ: ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಎರಡನೇ ಜಯದ ಕನಸಿನೊಂದಿಗೆ ಶುಕ್ರವಾರ ಕಣಕ್ಕಿಳಿಯಲಿದೆ. ಮಹೇಂದ್ರಸಿಂಗ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಬಳಗದ ಸವಾಲು ಎದುರಿಸಲಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ತನ್ನ ಮೊದಲ ಪಂದ್ಯದಲ್ಲಿ ರಾಹುಲ್ ಬಳಗವು ರಾಜಸ್ಥಾನ ರಾಯಲ್ಸ್‌ ಎದುರು ರೋಚಕ ಜಯ ಸಾಧಿಸಿತ್ತು. ರಾಹುಲ್ ಆ ಪಂದ್ಯದಲ್ಲಿ ಒಂಬತ್ತು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡಿದ್ದರು. ದೀಪಕ್ ಹೂಡಾ ಮತ್ತು ಕ್ರೀಸ್ ಗೇಲ್ ಅವರ ಉತ್ತಮ ಬ್ಯಾಟಿಂಗ್ ಬಲದಿಂದ ತಂಡವು 221 ರನ್‌ಗಳ ದೊಡ್ಡ ಮೊತ್ತ ದಾಖಲಿಸಿತ್ತು.

ಕಿಂಗ್ಸ್ ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳಲ್ಲಿ ಉತ್ತಮ ಆಟಗಾರರನ್ನು ಹೊಂದಿದೆ. ಆದರೆ, ಫೀಲ್ಡಿಂಗ್ ಗುಣಮಟ್ಟ ಕಳಪೆಯಾಗಿದೆ. ಮೊದಲ ಪಂದ್ಯದಲ್ಲಿ ಕೈಚೆಲ್ಲಿದ ಕ್ಯಾಚುಗಳಿಂದಾಗಿಯೇ ಪಂಜಾಬ್ ತಂಡವು ಜಯಿಸಲು ಕಠಿಣ ಹಾದಿ ಸವೆಸಬೇಕಾಯಿತು. ಮಯಂಕ್ ಅಗರವಾಲ್, ನಿಕೊಲಸ್ ಪೂರನ್ ತಮ್ಮ ಎಂದಿನ ಲಯಕ್ಕೆ ಮರಳಿದರೆ ಬ್ಯಾಟಿಂಗ್ ಇನ್ನಷ್ಟು ಬಲಗೊಳ್ಳುತ್ತದೆ. ಮೊಹಮ್ಮದ್ ಶಮಿ, ಜೇ ರಿಚರ್ಡ್ಸನ್ ಮತ್ತು ಆರ್ಷದೀಪ್ ಸಿಂಗ್ ಅವರು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇವರೂ ಸೇರಿದಂತೆ ಎಲ್ಲ ಬೌಲರ್‌ಗಳೂ ದುಬಾರಿಯಾಗಿದ್ದರು.

ADVERTISEMENT

ಆದರೆ ಚೆನ್ನೈ ತಂಡವು ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಸೋತಿತ್ತು. ಆ ಪಂದ್ಯದಲ್ಲಿಅನುಭವಿ ಆಲ್‌ರೌಂಡರ್ ಸುರೇಶ್ ರೈನಾ, ಅಂಬಟಿ ರಾಯುಡು ಮತ್ತು ಕೊನೆಯ ಹಂತದಲ್ಲಿ ಸ್ಯಾಮ್ ಕರನ್, ರವೀಂದ್ರ ಜಡೇಜ ರನ್‌ಗಳ ಕಾಣಿಕೆ ನೀಡಿದ್ದರಿಂದ ಹೋರಾಟದ ಮೊತ್ತ ಗಳಿಸಿತ್ತು. ಆದರೆ ಧೋನಿ ಸೊನ್ನೆಗೆ ಔಟಾಗಿದ್ದರು. ಫಫ್ ಡುಪ್ಲೆಸಿ ಕೂಡ ವೈಫಲ್ಯ ಅನುಭವಿಸಿದ್ದರು. ಕನ್ನಡಿಗ ರಾಬಿನ್ ಉತ್ತಪ್ಪ ಮತ್ತು ಕೃಷ್ಣಪ್ಪ ಗೌತಮ್ ಅವರಿಗೆ ಆ ಪಂದ್ಯದಲ್ಲಿ ಅವಕಾಶ ನೀಡಿರಲಿಲ್ಲ. ಪಂಜಾಬ್ ಎದುರು ರಾಬಿನ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಬೌಲಿಂಗ್‌ ಕೂಡ ಪರಿಣಾಮಕಾರಿಯಾಗಿರಲಿಲ್ಲ. ಪಂಜಾಬ್ ಬ್ಯಾಟಿಂಗ್ ಬಲವನ್ನು ಕಟ್ಟಿಹಾಕಲು ಧೋನಿ ಯಾವ ರೀತಿಯಲ್ಲಿ ರಣತಂತ್ರ ಮಾಡುವರು ಎಂಬ ಕುತೂಹಲವೂ ಗರಿಗೆದರಿದೆ.

ಹೋದ ವರ್ಷದ ಟೂರ್ನಿಯಲ್ಲಿ ಚೆನ್ನೈ ತಂಡವು ಪ್ಲೇ ಆಫ್‌ ಹಂತಕ್ಕೇರುವಲ್ಲಿ ವಿಫಲವಾಗಿತ್ತು. ಈ ಸಲ ಜಯದ ಶುಭಾರಂಭ ಪಡೆಯುವಲ್ಲಿ ಸಫಲವಾಗಿಲ್ಲ. ಎರಡನೇ ಪಂದ್ಯದಲ್ಲಿ ಪುಟದೇಳುವ ವಿಶ್ವಾಸದಲ್ಲಿದೆ.

ತಂಡಗಳು:

ಪಂಜಾಬ್ ಕಿಂಗ್ಸ್: ಕೆ.ಎಲ್. ರಾಹುಲ್ (ನಾಯಕ), ಮಯಂಕ್ ಅಗರವಾಲ್, ನಿಕೊಲಸ್ ಪೂರನ್, ಕ್ರಿಸ್ ಗೇಲ್. ಕ್ರಿಸ್ ಜೋರ್ಡಾನ್, ದರ್ಶನ್ ನಾಲ್ಕಂಡೆ, ದೀಪಕ್ ಹೂಡಾ, ಹರಪ್ರೀತ್ ಬ್ರಾರ್, ಇಶಾನ್ ಪೊರೆಲ್, ಮನದೀಪ್ ಸಿಂಗ್, ಮೊಹಮ್ಮದ್ ಶಮಿ, ಮುರುಗನ್ ಅಶ್ವಿನ್, ರವಿ ಬಿಷ್ಣೊಯಿ, ಪ್ರಭಸಿಮ್ರನ್ ಸಿಂಗ್, ಸರ್ಫರಾಜ್ ಖಾನ್, ಡೇವಿಡ್ ಮಲಾನ್, ಜೇ ರಿಚರ್ಡ್ಸನ್, ಶಾರೂಕ್ ಖಾನ್, ರಿಲೀ ಮೆರೆದಿತ್, ಮೊಯಿಸೆಸ್ ಹೆನ್ರಿಕ್ಸ್, ಜಲಜ್ ಸಕ್ಸೆನಾ, ಉತ್ಕರ್ಷ ಸಿಂಗ್, ಫ್ಯಾಬಿಯಾನ್ ಅಲೆನ್, ಸೌರಭ್ ಕುಮಾರ್.

ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರಸಿಂಗ್ ಧೋನಿ (ನಾಯಕ), ಸುರೇಶ್ ರೈನಾ, ಅಂಬಟಿ ರಾಯುಡು, ಡ್ವೇನ್ ಬ್ರಾವೊ, ದೀಪಕ್ ಚಾಹರ್, ಫಫ್ ಡುಪ್ಲೆಸಿ, ಇ್ರಮಾನ್ ತಾಹೀರ್, ನಾರಾಯಣ್ ಜಗದೀಶನ್, ಕರ್ಣ ಶರ್ಮಾ, ಲುಂಗಿ ಗಿಡಿ, ಮಿಚೆಲ್ ಸ್ಯಾಂಟನರ್, ಆರ್. ಸಾಯಿಕಿಶೋರ್, ರವೀಂದ್ರ ಜಡೇಜ, ರಾಬಿನ್ ಉತ್ತಪ್ಪ, ಋತುರಾಜ್ ಗಾಯಕವಾಡ, ಸ್ಯಾಮ್ ಕರನ್, ಶಾರ್ದೂಲ್ ಠಾಕೂರ್, ಕೃಷ್ಣಪ್ಪ ಗೌತಮ್, ಚೇತೇಶ್ವರ್ ಪೂಜಾರ, ಹರಿಶಂಕರ್ ರೆಡ್ಡಿ, ಸಿ ಹರಿನಿಶಾಂತ್, ಭಗತ್ ವರ್ಮಾ, ಜೇಸನ್ ಬೆಹ್ರನ್‌ಡಾರ್ಫ್.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.