ಕ್ರಿಕೆಟ್‌ನಲ್ಲಿ ಕಣ್ಣಿಗೆ ಮುದಕೊಡುವ ಕೆಲವು ದೃಶ್ಯಗಳಿವೆ. ಸಚಿನ್ ತೆಂಡೂಲ್ಕರ್‌ನ ಬ್ಯಾಕ್‌ಫುಟ್ ಪಂಚ್, ಸಿಕ್ಸರ್ ಹೊಡೆಯುವಲ್ಲಿ ರೋಹಿತ್ ಶರ್ಮನ ಜೋಭದ್ರ ನಾಜೂಕುತನ, ಘಟಾನುಘಟಿ ಬೌಲರ್‌ಗಳಿಗೆ ಅರವಿಂದ ಡಿಸಿಲ್ವ ಮಾಡುತ್ತಿದ್ದ ಆನ್ ಡ್ರೈವ್, ಬ್ರಯಾನ್ ಲಾರಾ ಚಿರತೆಯಂಥ ಪಾದಚಲನೆ, ವೀರೇಂದ್ರ ಸೆಹ್ವಾಗ್ ಪಾಯಿಂಟ್ ತಲೆಮೇಲೆ ಹೊಡೆಯುತ್ತಿದ್ದ ರೀತಿ, ಎ ಬಿ ಡಿವಿಲಿಯರ್ಸ್ ‘ಅಕ್ರಾಸ್’ ಬಂದು ನಗುನಗುತ್ತಲೇ ಎಲ್ಲೆಲ್ಲಿಗೋ ಚೆಂಡನ್ನು ಹೊಡೆಯುವ ಬಗೆ, ವಿವಿಯನ್ ರಿಚರ್ಡ್ಸ್ ಚೂಯಿಂಗ್ ಗಮ್ ಅನ್ನು ಅಗೆಯುತ್ತಲೇ ಬೌಲರ್‌ನನ್ನೂ ತಿನ್ನುವಂತೆ ನೋಡುತ್ತಿದ್ದುದು, ವಿರಾಟ್ ಕೊಹ್ಲಿಯ ಸ್ವ್ಕೇರ್ ಕಟ್... ಹೀಗೆ ಬರೆಯುತ್ತಾ ಹೋದಷ್ಟೂ ಸಿಗುತ್ತವೆ. ಇಂತಹ ವಿಷಯ ಮಾತನಾಡುವಾಗಲೂ ಬೌಲರ್‌ಗಳು ಹಿಂದಿನ ಸಾಲಿನ ಹುಡುಗರೇ ಆಗಿಬಿಡುತ್ತಾರೆ. 1993ರ ಜೂನ್ 4ನೇ ತಾರೀಕು. ಇಂಗ್ಲೆಂಡ್‌ನ ಓಲ್ಡ್ ಟ್ರಾಫೊರ್ಡ್‌ನ ಪಿಚ್. ಟೆಸ್ಟ್ ಕ್ರಿಕೆಟ್‌ನ ಎರಡನೇ ದಿನದಾಟ. ‘ನೀನು ಚೆಂಡನ್ನು ಹೇಗೆ ಬೇಕಾದರೂ ತಿರುಗಿಸು, ನಾನು ಆಡಿ ತೋರುವೆ’ ಎನ್ನುವಂತೆ ಕೆಕ್ಕರಿಸಿಕೊಂಡು ನೋಡುತ್ತಿದ್ದ ದೈತ್ಯ ಮೈಕ್ ಗ್ಯಾಟಿಂಗ್. ಇಂಗ್ಲೆಂಡ್‌ನ ಈ ಬ್ಯಾಟ್ಸ್‌ಮನ್ ಬ್ಯಾಟಿಂಗ್‌ಗೆ ಗಾರ್ಡ್ ತೆಗೆದುಕೊಂಡು ಹಳಬರಾಗಿದ್ದರು. ಆಸ್ಟ್ರೇಲಿಯಾದ ಶೇನ್ ವಾರ್ನ್ ರಿಸ್ಟ್ ಸ್ಪಿನ್ ಮಾಡಿದರು. ಲೆಗ್‌ಸ್ಟಂಪ್‌ನಿಂದ ಆಚೆ ಅದು ಪಿಚ್ ಆದದ್ದರಿಂದ ಗ್ಯಾಟಿಂಗ್ ಸಾಂಪ್ರದಾಯಿಕ ರಕ್ಷಣಾತ್ಮಕ ಶೈಲಿಯಲ್ಲಿ ಎಡಗಾಲನ್ನು ಚೆಂಡು ಬಿದ್ದ ಜಾಗದತ್ತ ಇಟ್ಟು, ಬ್ಯಾಟನ್ನು ಪ್ಯಾಡ್‌ಗೆ ಹತ್ತಿರ ತಂದರು. ಚೆಂಡು ತುಸು ತಿರುಗಿದರೂ ಬ್ಯಾಟ್‌ಗೆ ಬಡಿದು ಅಲ್ಲಿಯೇ ಉರುಳಬೇಕು. ಪ್ಯಾಡ್‌ಗೆ ಬಡಿದರೆ ಎಲ್‌ಬಿಡಬ್ಲ್ಯು ಔಟಾಗಬಾರದು ಎಂಬ ಸಹಜ ತಂತ್ರವಿದು. ಆದರೆ, ಚೆಂಡು ಅವರ ಊಹೆಗೂ ಮೀರಿ ತಿರುವು ಪಡೆದು ಪುಟಿದದ್ದೇ ಆಫ್‌ಸ್ಟಂಪ್‌ನ ಬೇಲ್ ಹಾರಿಸಿತು. ಅರೆಕ್ಷಣ ಗ್ಯಾಟಿಂಗ್ ಅವಾಕ್ಕಾದರು. ನೆಲವನ್ನೊಮ್ಮೆ, ಸ್ಟಂಪ್ ಕಡೆಗೊಮ್ಮೆ ಬೆರಗಿನಿಂದ ನೋಡಿದ ಅವರಲ್ಲಿ ಮಾತೇ ಇರಲಿಲ್ಲ. ಒಬ್ಬ ಬೌಲರ್ ಹಾಗೆ ಸ್ಪಿನ್ ಮಾಡಬಲ್ಲ ಎನ್ನುವುದರ ಹೊಸ ಪ್ರಾತ್ಯಕ್ಷಿಕೆ ಅದು. ಈ ಕಾರಣಕ್ಕೇ ಅದನ್ನು ‘ಬಾಲ್ ಆಫ್ ದಿ ಸೆಂಚುರಿ’ (ಶತಮಾನದ ಬಾಲ್), ‘’ಗ್ಯಾಟಿಂಗ್ ಬಾಲ್’ ಎಂದೆಲ್ಲ ಕರೆಯುತ್ತಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ನಡೆಯುತ್ತಿರುವ ಈ ಕಾಲದಲ್ಲಿ ಯಾಕಪ್ಪ ವಾರ್ನ್ ನೆನಕೆ ಎಂಬ ಪ್ರಶ್ನೆ ಹುಟ್ಟಬಹುದು. ಅದಕ್ಕೆ ಕಾರಣ ಲೆಗ್‌ಸ್ಪಿನ್ ಬೌಲರ್‌ಗಳು ಚುಟುಕು ಕ್ರಿಕೆಟ್‌ಗೆ ಹೇಳಿ ಮಾಡಿಸಿದವರು ಎಂಬ ಪ್ರಜ್ಞೆ ಅನೇಕ ತಂಡಗಳಲ್ಲಿ ಇರುವುದು. ಶೇನ್ ವಾರ್ನ್‌ನ ಡ್ರಿಫ್ಟಿಂಗ್ ಡೆಲಿವರಿ, ಅನಿಲ್ ಕುಂಬ್ಳೆ ಫ್ಲಿಪ್ಪರ್‌ಗಳು–ಗೂಗ್ಲಿಗಳನ್ನು ಕಂಡಿರುವ ನಮಗೆ ಈಗ ರಶೀದ್ ಖಾನ್ ಎಂಬ ಅಫ್ಗಾನಿಸ್ಥಾನದ ಬೌಲರ್‌ನ ಅಸ್ತ್ರಗಳನ್ನು ನೋಡುವ ಅವಕಾಶ. ಯಜುವೇಂದ್ರ, ಅಮಿತ್ ಮಿಶ್ರಾ ತರಹದ ಅನುಭವಿ ಲೆಗ್ಗಿಗಳು ಇದ್ದರೂ ರಶೀದ್ ಅವರೆಲ್ಲರಿಗಿಂತ ಬೇರೆಯವನೇ ಆಗಿ ಕಾಣುತ್ತಿದ್ದಾನೆ.
2018ರಲ್ಲಿ ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಡುವ ಅವಕಾಶ ಅಫ್ಗಾನಿಸ್ಥಾನಕ್ಕೆ ಸಿಕ್ಕಾಗ, ಆಗಿನ್ನೂ ಇಪ್ಪತ್ತು ವಯಸ್ಸಿನ ರಶೀದ್ ಮೇಲೆ ನಿರೀಕ್ಷೆಗಳಿದ್ದವು. ಆದರೆ, ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ಸಾಕಷ್ಟು ಪಳಗಿದ್ದ ಭಾರತದ ಬ್ಯಾಟ್ಸ್‌ಮನ್‌ಗಳು ನೀರಿಳಿಸಿದರು. 2 ವಿಕೆಟ್ ಪಡೆಯಲು ಮೊದಲ ಇನಿಂಗ್ಸ್‌ನಲ್ಲಿ ರಶೀದ್ 154 ರನ್‌ಗಳನ್ನು ನೀಡಿದ. ಇದು ದೇಶದ ಚೊಚ್ಚಲ ಟೆಸ್ಟ್ ಪಂದ್ಯವೊಂದರ ಇನಿಂಗ್ಸ್‌ನಲ್ಲಿ ಬೌಲರ್ ನೀಡಿದ ಗರಿಷ್ಠ ರನ್ ಆಗಿತ್ತು. ಕೆಟ್ಟ ಕಾರಣಕ್ಕೆ ದಾಖಲೆಗೆ ಪಕ್ಕಾಗುವ ನತದೃಷ್ಟ ರಶೀದ್ ಆದರೂ, ಅದು ಕಲಿಕೆಯ ದಾರಿಯಾಗಿತ್ತಷ್ಟೆ.
ಪೂರ್ವ ಅಫ್ಗನ್ನಿನ ಜಲಾಲಾಬಾದ್‌ನಲ್ಲಿ ಹುಟ್ಟಿದ ರಶೀದ್ ಮನೆಯ ಹತ್ತು ಮಕ್ಕಳಲ್ಲಿ ಒಬ್ಬ. ಯುದ್ಧದ ಕಾರಣ ಹಲವು ವರ್ಷ ಅವನ ಕುಟುಂಬ ಪಾಕಿಸ್ತಾನಕ್ಕೆ ವಲಸೆ ಹೋಗಿತ್ತು. ಪರಿಸ್ಥಿತಿ ಶಾಂತಗೊಂಡ ಮೇಲೆ ಮತ್ತೆ ಅಫ್ಗನ್‌ಗೆ ಮರಳಿದ್ದು. ಅಲ್ಲಿಯೇ ಶಾಲೆಗೆ ಹೋಗತೊಡಗಿದ ರಶೀದ್ ಬಾಲ್ಯದಿಂದಲೂ ಪಾಕಿಸ್ತಾನದ ಲೆಗ್ ಸ್ಪಿನ್ನರ್ ಶಾಹಿದ್ ಆಫ್ರಿದಿಯನ್ನು ಆರಾಧಿಸುತ್ತಿದ್ದ. ಹಾಗೆ ನೋಡಿದರೆ ಲೆಗ್ ಸ್ಪಿನ್ನರ್‌ಗಳಲ್ಲಿ ಬಿ.ಎಸ್. ಚಂದ್ರಶೇಖರ್, ಅಬ್ದುಲ್ ಖಾದಿರ್ ಆದಮೇಲೆ ಬೇರೆ ಯಾರೂ ಛಾಪು ಮೂಡಿಸಿಯೇ ಇರಲಿಲ್ಲ. ಶೇನ್ ವಾರ್ನ್ ಅದಕ್ಕೊಂದು ದೊಡ್ಡ ಮಟ್ಟದ ಅಭಿಮಾನಿ ವೃಂದವನ್ನು ಸೃಷ್ಟಿಸಿಕೊಂಡರು. ಅನಿಲ್ ಕುಂಬ್ಳೆ ಕೂಡ ವಾರ್ನ್ ಸಮಕ್ಕೂ ಕಣ್ಣುಕೋರೈಸಿದರು. ಏಕಕಾಲದಲ್ಲಿ ಎರಡು ವಿಶ್ವದರ್ಜೆಯ ಲೆಗ್‌ಸ್ಪಿನ್ ಮಾದರಿಗಳನ್ನು ನಾವು ಕಂಡುಂಡೆವು. ಆಸ್ಟ್ರೇಲಿಯಾದ ಬ್ರಾಡ್ ಹಾಗ್ ಹಾಗೂ ನಮ್ಮದೇ ದೇಶದ ಕುಲದೀಪ್ ಯಾದವ್ ಎಡಗೈ ಲೆಗ್ ಸ್ಪಿನ್ನರ್‌ಗಳಾಗಿ ಒಂದಿಷ್ಟು ಛಾಪು ಮೂಡಿಸಿದರು. ಅಫ್ರಿದಿ ಬೌಲರ್ ಆಗಿ ಹೆಚ್ಚೇನೂ ಜನಪ್ರಿಯ ಅಲ್ಲದಿದ್ದರೂ ವಿಕೆಟ್ ಅನ್ನು ಗುರಿಯಾಗಿಸಿಯೇ ಅವರು ಹಾಕುತ್ತಿದ್ದ ಎಸೆತಗಳನ್ನು ಕಂಡು ರಶೀದ್ ಅದನ್ನೇ ಅನುಕರಿಸಿದ. ಟೆನಿಸ್ ಬಾಲ್‌ನಲ್ಲಿ ಲೆಗ್ ಸ್ಪಿನ್ ಮಾಡುವುದು ಬಲು ಕಷ್ಟ. ಮೊಣಕೈ ಬಳಸಿಯೇ ಚೆಂಡನ್ನು ತಿರುಗುವಂತೆ ಮಾಡುವುದು ಒಂದು ಕಲೆ. ರಶೀದ್ ಅದನ್ನು ಮಾಡುತ್ತಲೇ ಬೆಳೆದ. ಅದರಿಂದಾಗಿಯೇ ಈಗ ವಿಶ್ವದರ್ಜೆಯ ಲೆಗ್ ಸ್ಪಿನ್ನರ್ ಆಗಿ ಮಿಂಚುತ್ತಿರುವುದು.
ನಾಲ್ಕು ಟೆಸ್ಟ್ ಪಂದ್ಯಗಳನ್ನಷ್ಟೇ ಇದುವರೆಗೆ ಆಡಲು ಸಾಧ್ಯವಾಗಿರುವ ರಶೀದ್‌ಗೆ ಇನ್ನೂ ಇಪ್ಪತ್ತೆರಡು ವರ್ಷ. ಅದಾಗಲೇ ಅಫ್ಗನ್ ತಂಡದ ನಾಯಕತ್ವದ ನೊಗವನ್ನೂ ಹೊತ್ತು, ಇಳಿಸಿ ಆಗಿದೆ. ಭಾರತದ ಎದುರು ಆಡಿದ ಮೇಲೆ ಕಲಿತ ಪಾಠಗಳೇ ಅವನಿಗೆ ಮೂರು ಸಲ ಐದು ವಿಕೆಟ್ ಗೊಂಚಲನ್ನು ದಕ್ಕಿಸಿಕೊಟ್ಟಿವೆ. ಇದುವರೆಗೆ 23 ಟೆಸ್ಟ್ ವಿಕೆಟ್‌ಗಳು ಖಾತೆಯಲ್ಲಿವೆ. 71 ಏಕದಿನದ ಪಂದ್ಯಗಳಲ್ಲಿ 133 ವಿಕೆಟ್‌ಗಳು, 49 ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 89 ವಿಕೆಟ್‌ಗಳನ್ನು ಪಡೆದಿರುವುದು ಈ ಬೌಲರ್ ಯಾಕೆ ಅಪಾಯಕಾರಿ ಎನ್ನುವುದಕ್ಕೆ ಹಿಡಿದ ಕನ್ನಡಿ. 2018ರ ಫೆಬ್ರುವರಿಯಲ್ಲಿ ಐಸಿಸಿ ಬೌಲರ್‌ಗಳ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಈತನ ಹೆಸರಿತ್ತು.
2017ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ಸನ್‌ರೈಸರ್ಸ್ ಹೈದರಾಬಾದ್ ಈ ಆಟಗಾರನನ್ನು ದೊಡ್ಡ ಮೊತ್ತಕ್ಕೆ ಹರಾಜಿನಲ್ಲಿ ಆಯ್ಕೆ ಮಾಡಿಕೊಂಡ ನಡೆ ಕೆಲವರ ಹುಬ್ಬೇರಿಸಿತ್ತು. ಆ ಆವೃತ್ತಿಯಲ್ಲಿ 17 ವಿಕೆಟ್ ಪಡೆದು, ತನ್ನ ಆಯ್ಕೆಯನ್ನು ರಶೀದ್ ಸಮರ್ಥಿಸಿಕೊಂಡಿದ್ದ. 2018ರಲ್ಲಿ ತಂಡ ಫೈನಲ್‌ವರೆಗೆ ಸಾಗುವಲ್ಲಿ ಆತನ ಕಾಣ್ಕೆ ದೊಡ್ಡದು. 21 ವಿಕೆಟ್‌ಗಳನ್ನು ಪಡೆದದ್ದೇ ಅಲ್ಲದೆ, ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಸಾಧನೆ ಹೊಮ್ಮಿದ ವರ್ಷ ಅದು. ಕಳೆದ ವರ್ಷವೂ ಐಪಿಎಲ್‌ನಲ್ಲಿ ರಶೀದ್ 17 ವಿಕೆಟ್‌ಗಳನ್ನು ಪಡೆದು, ಲೆಗ್ ಸ್ಪಿನ್ ಚಳಕವಿನ್ನೂ ಇದೆ ಎಂದು ಸಾಬೀತುಪಡಿಸಿದ್ದ. ಈ ಸಲ ದುಬೈಗೆ ಟೂರ್ನಿ ಸ್ಥಳಾಂತರಗೊಂಡಾಗ ಈ ಆಟಗಾರ ಪರದಾಡಬಹುದೇ ಎಂಬ ಪ್ರಶ್ನೆ ಇತ್ತು. ಯಾಕೆಂದರೆ, ದುಬೈನ ಪಿಚ್‌ಗಳಲ್ಲಿ ಈ ಸಲ ಸ್ಪಿನ್ನರ್‌ಗಳು ಹೆಚ್ಚು ಮೋಡಿ ಮಾಡಲು ಆಗುತ್ತಿಲ್ಲ. ಅದರಲ್ಲೂ ಎದುರಾಳಿ ತಂಡಕ್ಕೆ ಪಂದ್ಯದ ಎರಡನೇ ಅವಧಿಯಲ್ಲಿ ಬೌಲ್ ಮಾಡಬೇಕಾಗಿ ಬಂದರಂತೂ ಮಂಜು ಮೆತ್ತಿದ ಚೆಂಡನ್ನು ಗ್ರಿಪ್ ಮಾಡುವುದೇ ದೊಡ್ಡ ತಲೆನೋವು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಜುವೇಂದ್ರ ಚಹಲ್ ಬಿಟ್ಟರೆ ಸ್ಪಿನ್ನರ್‌ಗಳಲ್ಲಿ ಈ ಸಲ ಯಾರೂ ಹೆಚ್ಚು ವಿಕೆಟ್‌ಗಳನ್ನು ಪಡೆಯಲು ಆಗುತ್ತಿಲ್ಲ.
ಐಪಿಎಲ್‌ನಲ್ಲಿ ಇದುವರೆಗೆ 1212 ಎಸೆತಗಳನ್ನು ಬೌಲ್ ಮಾಡಿರುವ ರಶೀದ್ 60 ವಿಕೆಟ್‌ಗಳನ್ನು ಪಡೆದಿದ್ದಾನೆ. ಈ ಸಲ ಮೊದಲು ಆಡಿದ ಐದು ಪಂದ್ಯಗಳಲ್ಲಿ ಆತನ ಎಕಾನಮಿ ರೇಟ್ 5.2. ಚೆನ್ನೈ ಸೂಪರ್‌ಕಿಂಗ್ಸ್ ತಂಡದ ವಿರುದ್ಧ ಗಾಂಧಿಜಯಂತಿ ದಿನ ನಡೆದ ಪಂದ್ಯದಲ್ಲಿ 16 ಡಾಟ್‌ಬಾಲ್‌ಗಳನ್ನು ಬೌಲ್ ಮಾಡಿದ್ದ. ಡೆಲ್ಲಿ ಕ್ಯಾಪಿಟಲ್ಸ್ ಎದುರು ಬರೀ 14 ರನ್‌ಗಳನ್ನು ಕೊಟ್ಟು 3 ವಿಕೆಟ್ ಪಡೆದದ್ದು ರೋಚಕ. ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳೂ ರಶೀದ್ ಎದುರು ತಲೆತಗ್ಗಿಸಿ ಆಡುತ್ತಾರೆಂದರೆ, ಬೌಲಿಂಗ್ ಮೊನಚು ಹೇಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.
ಐಪಿಎಲ್‌ನಲ್ಲಿ ಆಡುವ ಮೊದಲು ಬಾರ್ಬಡೋಸ್ ಟ್ರೈಡೆಂಟ್ ತಂಡದ ಪರವಾಗಿ ಕೆರೀಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್–2020)ನಲ್ಲಿ ರಶೀದ್ ಆಡಿದ್ದ. ಸೇಂಟ್ ಲೂಸಿಯಾ ಝೌಕ್ಸ್ ತಂಡದ ಮೊಹಮ್ಮದ್ ನಬಿ ವಿಕೆಟ್ಟನ್ನು ಪಂದ್ಯವೊಂದರಲ್ಲಿ ಪಡೆದಾಗ ಹೊಸ ಮೈಲುಗಲ್ಲನ್ನು ಅವನು ದಾಟಿದ್ದ. 21 ವರ್ಷ 335 ದಿನಗಳಷ್ಟು ವಯಸ್ಸಿನಲ್ಲಿ ಚುಟುಕು ಕ್ರಿಕೆಟ್‌ನಲ್ಲಿ 300ನೇ ವಿಕೆಟ್ ಪಡೆದ ಸಾಧನೆ ಅದು. 213 ಟ್ವೆಂಟಿ20 ಪಂದ್ಯಗಳಲ್ಲಿ ಅಷ್ಟೊಂದು ವಿಕೆಟ್‌ಗಳನ್ನು ಪಡೆದ ಕಿರಿಯ ವಯಸ್ಸಿನ ಬೌಲರ್ ಎಂಬ ಅಗ್ಗಳಿಕೆ ಅದು. ಅಷ್ಟು ವೇಗವಾಗಿ ಬೇರೆ ಯಾರೂ ಈ ಮಾದರಿಯ ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದಿರಲಿಲ್ಲ. ಆ ಟೂರ್ನಿಯಲ್ಲಿ 6.85 ಎಕಾನಮಿ ರೇಟ್ ಕಾಯ್ದುಕೊಂಡು 11 ವಿಕೆಟ್‌ಗಳನ್ನು 10 ಪಂದ್ಯಗಳಲ್ಲಿ ಪಡೆದು ಬಂದಿರುವ ರಶೀದ್‌ಗೆ ದಣಿವಿಲ್ಲ.
‘ನಾನು ವಿಕೆಟ್ ಪಡೆಯಬೇಕು ಎಂದುಕೊಂಡು ಬೌಲಿಂಗ್ ಮಾಡುವುದಿಲ್ಲ. ರನ್ ಕೊಡಬಾರದು ಎಂದುಕೊಂಡೇ ಚೆಂಡು ಹಾಕುತ್ತೇನೆ. ಹೀಗೆ ಮಾಡಿದಾಗ ಉಳಿದ ಬೌಲರ್‌ಗಳಿಗೆ ವಿಕೆಟ್ ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪಂದ್ಯ ಗೆಲ್ಲಲು ಇಂತಹ ಮಾರ್ಗವನ್ನು ನನ್ನದಾಗಿಸಿಕೊಂಡಿದ್ದೇನೆ’ ಎನ್ನುವ ಮಾತೇ ರಶೀದ್ ತಂತ್ರಗಾರಿಕೆಗೆ ಸಾಕ್ಷಿ. ಟೆಸ್ಟ್ ಪಂದ್ಯಗಳಲ್ಲಿ ಬಿ.ಎಸ್. ಚಂದ್ರಶೇಖರ್, ಶೇನ್ ವಾರ್ನ್, ಅನಿಲ್ ಕುಂಬ್ಳೆ ಲೆಗ್ ಸ್ಪಿನ್ನರ್‌ಗಳ ಮೋಡಿ ನೋಡಿರುವ ಕ್ರೀಡಾ ಸಹೃದಯರಿಗೆ ರಶೀದ್ ಚುಟುಕು ಕ್ರಿಕೆಟ್‌ನಲ್ಲೂ ಅದೇ ಅಧ್ಯಾಯವನ್ನು ಕಾಣಿಸುತ್ತಿರುವುದು ಕಾಡುವ ಸಂಗತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.