ADVERTISEMENT

ಕ್ವೀನ್ಸ್ ಲೀಗ್ ಕ್ರಿಕೆಟ್‌ ಟೂರ್ನಿ: ‘ಕೋಲಾರ ಕ್ವೀನ್ಸ್‌’ ಮುಡಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 19:49 IST
Last Updated 21 ಜುಲೈ 2024, 19:49 IST
   

ಬೆಂಗಳೂರು: ಸಾಂಘಿಕ ಆಟ ಪ್ರದರ್ಶಿಸಿದ ಕೋಲಾರ ಕ್ವೀನ್ಸ್‌ ತಂಡವು ಭಾನುವಾರ ‘ಕ್ವೀನ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಬೆಂಗಳೂರು ಕ್ವೀನ್ಸ್‌ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಕ್ರಿಯೇಟಿವ್ ಫ್ರೆಂಡ್ಸ್‌ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಕೋಲಾರ ತಂಡವು 5 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 88 ರನ್‌ ಗಳಿಸಿದರು. ಈ ಮೊತ್ತಕ್ಕೆ ಉತ್ತರವಾಗಿ ಬೆಂಗಳೂರು ತಂಡವು ಐದು ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 53 ರನ್‌ಗಳಿಸಿ ಹೋರಾಟವನ್ನು ಮುಗಿಸಿತು.

ಕೋಲಾರ ಕ್ವೀನ್ಸ್‌ ತಂಡವು ಆಕರ್ಷಕ ಟ್ರೋಫಿಯೊಂದಿಗೆ ₹ 6 ಲಕ್ಷ ಬಹುಮಾನವನ್ನು ತನ್ನದಾಗಿಸಿಕೊಂಡಿತು. ರನ್ನರ್‌ ಅಪ್‌ ಬೆಂಗಳೂರು ಕ್ವೀನ್ಸ್‌ ತಂಡವು 3 ಲಕ್ಷ ಬಹುಮಾನ ಪಡೆಯಿತು.

ADVERTISEMENT

ಟೂರ್ನಿಯಲ್ಲಿ ಕಿರುತೆರೆ ಹಾಗೂ ಹಿರಿತೆರೆ ಕಲಾವಿದೆಯರ ಜೊತೆಯಲ್ಲಿ ನಿರೂಪಕಿಯರು, ರೂಪದರ್ಶಿಯರು ಭಾಗವಹಿಸಿದ್ದರು. ಟೂರ್ನಿಯಲ್ಲಿ ಒಟ್ಟು ಹತ್ತು ತಂಡಗಳು ಸೆಣಸಾಡಿದವು.

ಕೋಲಾರ ಕ್ವೀನ್ಸ್‌ ತಂಡದ ಹೇಮಾ ಟೂರ್ನಿಯ ಶ್ರೇಷ್ಠ ಆಟಗಾರ್ತಿ, ಬೆಂಗಳೂರು ಕ್ವೀನ್ಸ್‌ ತಂಡದ ಅನುಪಮಾ ಗೌಡ ಹೆಚ್ಚು ವಿಕೆಟ್‌ ಪಡೆದ ಬೌಲರ್ ಹಾಗೂ ಬೆಳಗಾವಿ ಕ್ವೀನ್ಸ್‌ ತಂಡದ ಕವಿತಾ ಗೌಡ ಅವರು ಉತ್ತಮ ಬ್ಯಾಟರ್‌ ಪ್ರಶಸ್ತಿ ಪಡೆದರು.

‘ಈ ಟೂರ್ನಿಯನ್ನು ಮತ್ತಷ್ಟು ದೊಡ್ಡಮಟ್ಟದಲ್ಲಿ ಮಾಡಲು ಬೇರೆ ಬೇರೆ ರಾಜ್ಯಗಳ ತಂಡಗಳನ್ನೂ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಐಪಿಎಲ್ ಮಟ್ಟಕ್ಕೆ ಬೆಳೆಸುವುದು ನಮ್ಮ ಗುರಿ’ ಎಂದು ಸಂಘಟಕರಾದ ಮಹೇಶ್ ಗೌಡ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಪ್ರಮೋದ್ ಶೆಟ್ಟಿ, ರೂಪಿಕಾ, ಭವ್ಯಾ ಗೌಡ, ಪ್ರೇಮ್ ಮಾಲೂರ್, ಸ್ವಸ್ತಿಕ್ ಆರ್ಯಾ, ಚೇತನ್ ಪಾರೀಕ್, ಸಂತೋಷ್ ಬಿಲ್ಲವ, ಸಚಿನ್ ಸಚದೇವ್ ಹಾಜರಿದ್ದರು.

‘ಪ್ರಜಾವಾಣಿ‘ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕಾ ಬಳಗವು ಈ ಟೂರ್ನಿಯ ಮಾಧ್ಯಮ ಪಾಲುದಾರರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.