ADVERTISEMENT

INDvsSA: ಭಾರತದ ವಿರುದ್ದ ಶತಕ ಸಿಡಿಸಿದ ಡಿ ಕಾಕ್; ಸಚಿನ್, ವಿರಾಟ್ ದಾಖಲೆ ಉಡೀಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2025, 11:01 IST
Last Updated 6 ಡಿಸೆಂಬರ್ 2025, 11:01 IST
   

ವಿಶಾಖಪಟ್ಟಣ: ಭಾರತ ತಂಡದ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿಕೆಟ್‌ ಕೀಪರ್‌ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರು ಭರ್ಜರಿ ಶತಕ ಬಾರಿಸಿದ್ದಾರೆ.

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ದ ಭಾರತ ತಂಡವು ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿತ್ತು.

ನಿವೃತ್ತಿ ವಾಪಸ್ ಪಡೆದ ನಂತರ ಮರಳಿ ಕ್ರಿಕೆಟ್‌ ಅಂಗಳಕ್ಕೆ ಇಳಿದಿರುವ ಡಿ ಕಾಕ್ ಅವರು ಹೊಸ ಬಾಲ್‌ನಲ್ಲಿ ನಿಧಾನಗತಿಯ ಆಟಕ್ಕೆ ಒತ್ತು ನೀಡಿದರೆ, ನಂತರ ಎಂದಿನಂತೆ ಸ್ಫೋಟಕ ಆಟದ ಮೂಲಕ ಭಾರತದ ಬೌಲರ್‌ಗಳ ಬೆವರಿಳಿಸಿದರು.

ADVERTISEMENT

ಕೇವಲ 80 ಎಸೆತದಲ್ಲೇ ಶತಕ ಸಿಡಿಸಿ ಸಂಭ್ರಮಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ 23ನೇ ಶತಕವಾಗಿದೆ.

89 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್‌ ಸಹಿತ 106 ರನ್‌ ಗಳಿಸಿ ಪ್ರಸಿದ್ಧ ಕೃಷ್ಣ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು.

ಭಾರತದ ವಿರುದ್ದ ಅತಿ ಹೆಚ್ಚು ಶತಕ: ಭಾರತದ ವಿರುದ್ದ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎನ್ನುವ ದಾಖಲೆಗೆ ಡಿ ಕಾಕ್ ಪಾತ್ರರಾದರು. ಟೀಂ ಇಂಡಿಯಾ ವಿರುದ್ದ ಅವರು 23 ಇನಿಂಗ್ಸ್‌ನಲ್ಲಿ 7 ಶತಕ ಸಿಡಿಸಿದ್ದಾರೆ.

ಭಾರತದ ವಿರುದ್ದ 85 ಇನಿಂಗ್ಸ್‌ನಲ್ಲಿ 7 ಶತಕ ಬಾರಿಸಿದ್ದ ಸನತ್‌ ಜಯಸೂರ್ಯ ಅವರ ದಾಖಲೆಯನ್ನು ಸರಿಗಟ್ಟಿದರು. ಡಿವಿಲಿಯರ್ಸ್, ರಿಕಿ ಪಾಟಿಂಗ್ ಹಾಗೂ ಕುಮಾರ ಸಂಗಾಕಾರ ಅವರು 6 ಶತಕಗಳನ್ನು ಹೊಡೆದಿದ್ದಾರೆ.

ಅರ್ಧ ಶತಕದಿಂದ ಶತಕ..: ಏಕದಿನ ಕ್ರಿಕೆಟ್‌ನಲ್ಲಿ ಅರ್ಧ ಶತಕವನ್ನು ಶತಕವನ್ನಾಗಿಸುವ ಪರಿವರ್ತನೆ ದರದಲ್ಲಿ ವಿರಾಟ್‌ ಕೊಹ್ಲಿಯವರನ್ನು ಡಿ ಕಾಕ್ ಹಿಂದಿಕ್ಕಿದ್ದಾರೆ. ವಿರಾಟ್‌ ಅವರು ಶೇ 41.40 ಬಾರಿ ಅರ್ಧ ಶತಕವನ್ನು ಶತಕವನ್ನಾಗಿದರೆ, ಡಿ ಕಾಕ್ ಶೇ 41.81 ಬಾರಿ ಶತಕವನ್ನಾಗಿ ಪರಿವರ್ತಿಸಿದ್ದಾರೆ.

ವಿದೇಶಿ ಅಂಗಳದಲ್ಲಿ ಹೆಚ್ಚು ಶತಕ: ಏಕದಿನ ಕ್ರಿಕೆಟ್‌ನಲ್ಲಿ ವಿದೇಶಿ ಅಂಗಳದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎನ್ನುವ ಖ್ಯಾತಿಗೆ ಕ್ವಿಂಟನ್ ಡಿ ಕಾಕ್ ಪಾತ್ರರಾದರು. ಡಿ ಕಾಕ್ ಅವರು ಭಾರತದಲ್ಲೇ 7 ಶತಕ ಸಿಡಿಸಿದ್ದಾರೆ.

ಈ ಮೂಲಕ ಸಚಿನ್‌ ತೆಂಡೂಲ್ಕರ್‌ (ಯುಎಇ), ಸಯಿದ್ ಅನ್ವರ್ (ಯುಎಇ), ಎಬಿ ಡಿವಿಲಿಯರ್ಸ್ (ಭಾರತ), ರೋಹಿತ್‌ ಶರ್ಮಾ (ಇಂಗ್ಲೆಂಡ್‌) ಅವರ ದಾಖಲೆಯನ್ನು ಸರಿಗಟ್ಟಿದರು. ಅವರೆಲ್ಲರೂ ಕೂಡ ವಿದೇಶಿ ನೆಲದಲ್ಲಿ 7 ಶತಕಗಳನ್ನು ಬಾರಿಸಿದ್ದರು.

ಅತಿ ಹೆಚ್ಚು ಶತಕ ಸಿಡಿಸಿದ ವಿಕೆಟ್ ಕೀಪರ್: ಏಕದಿನ ಕ್ರಿಕೆಟ್‌ನಲ್ಲಿ ಒಂದೇ ಎದುರಾಳಿಯ ಎದುರು ಅತಿ ಹೆಚ್ಚು ಶತಕ ಸಿಡಿಸಿದ ವಿಕೆಟ್‌ ಕೀಪರ್‌ ಎನ್ನುವ ದಾಖಲೆಗೆ ಡಿ ಕಾಕ್ ಪಾತ್ರರಾದರು. ಭಾರತದ ವಿರುದ್ದ ಅವರು 7 ಶತಕಗಳನ್ನು ಸಿಡಿಸಿದ್ದಾರೆ.

ಶ್ರೀಲಂಕಾ ವಿರುದ್ದ 6 ಶತಕ ಸಿಡಿಸಿದ್ದ ಆ್ಯಡಂ ಗಿಲ್‌ಕ್ರಿಸ್ಟ್‌ ಹಾಗೂ ಭಾರತದ ಮೇಲೆ 6 ಶತಕ ಬಾರಿಸಿದ್ದ ಕುಮಾರ ಸಂಗಾಕಾರ ಅವರ ದಾಖಲೆಯನ್ನು ಡಿ ಕಾಕ್ ಮುರಿದರು.

ಅತಿ ಹೆಚ್ಚು ಶತಕ ಸಿಡಿಸಿದ ವಿಕೆಟ್‌ ಕೀಪರ್: ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ವಿಕೆಟ್‌ ಕೀಪರ್ ಎನ್ನುವ ಖ್ಯಾತಿಗೆ ಡಿ ಕಾಕ್ ಪಾತ್ರರಾದರು. ಒಟ್ಟು 23 ಶತಕಗಳನ್ನು ಸಿಡಿಸಿದ್ದಾರೆ. ಅಷ್ಟೇ ಶತಕ ಬಾರಿಸಿದ್ದ ಕುಮಾರ ಸಂಗಾಕಾರ ಅವರ ದಾಖಲೆಯನ್ನು ಸರಿಗಟ್ಟಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.