ADVERTISEMENT

ರೈನಾ ಮೇಲಿನ ಕ್ರಮಾಂಕದಲ್ಲಿ ಆಡಿದ್ದರೆ ಹೆಚ್ಚು ರನ್‌ ಗಳಿಸುತ್ತಿದ್ದರು: ದ್ರಾವಿಡ್

ಪಿಟಿಐ
Published 18 ಆಗಸ್ಟ್ 2020, 13:12 IST
Last Updated 18 ಆಗಸ್ಟ್ 2020, 13:12 IST
ಸುರೇಶ್ ರೈನಾ
ಸುರೇಶ್ ರೈನಾ   

ನವದೆಹಲಿ: ಸುರೇಶ್ ರೈನಾ ಅವರು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಿದ್ದರೆ ಇನ್ನೂ ಹೆಚ್ಚಿನ ರನ್‌ಗಳನ್ನು ಗಳಿಸಿರುತ್ತಿದ್ದರು ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

ಆಗಸ್ಟ್ 15ರಂದು ಎಡಗೈ ಬ್ಯಾಟ್ಸ್‌ಮನ್ ರೈನಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಮಹೇಂದ್ರಸಿಂಗ್ ಧೋನಿಯ ನಿವೃತ್ತಿ ಘೋಷಣೆಯ ಸ್ವಲ್ಪ ಹೊತ್ತಿನ ನಂತರ ರೈನಾ ಕೂಡ ತಮ್ಮ ನಿರ್ಧಾರ ಪ್ರಕಟಿಸಿದ್ದರು.

ಮಂಗಳವಾರ ಈ ಕುರಿತು ಬಿಸಿಸಿಐ ಟ್ವಿಟರ್‌ನಲ್ಲಿ ಹಾಕಿರುವ ವಿಡಿಯೊದಲ್ಲಿ ದ್ರಾವಿಡ್, ’ಶ್ವೇತವರ್ಣದ ಚೆಂಡಿನ ಕ್ರಿಕೆಟ್‌ನಲ್ಲಿ ಭಾರತವು ಬಹಳಷ್ಟು ಯಶಸ್ಸು ಗಳಿಸಿದೆ. ಅದರಲ್ಲಿ ಕಾರಣಕರ್ತರಾದವರಲ್ಲಿ ರೈನಾ ಕೂಡ ಒಬ್ಬರು. ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಅವರು ಅಮೋಘವಾದ ಕಾಣಿಕೆ ನೀಡಿದ್ದಾರೆ. ವಿಶ್ವಕಪ್ ವಿಜೇತ ಮತ್ತು ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂಗಳದಲ್ಲಿ ಅವರ ಚುರುಕುತನ ಮತ್ತು ಜಯಿಸುವ ಛಲದ ಆಟಗಳು ಅನುಕರಣೀಯವಾಗಿದ್ದವು. ಫೀಲ್ಡಿಂಗ್‌ನಲ್ಲಿ ಅವರ ದಿಟ್ಟತನ ನಿಜಕ್ಕೂ ಶ್ಲಾಘನೀಯ‘ ಎಂದು ದ್ರಾವಿಡ್ ಹೇಳಿದ್ದಾರೆ.

ADVERTISEMENT

18 ಟೆಸ್ಟ್, 226 ಏಕದಿನ ಮತ್ತು 78 ಟಿ20 ಪಂದ್ಯಗಳನ್ನು ಅವರು ಆಡಿದ್ದಾರೆ. ಎಲ್ಲ ಸೇರಿ ಒಟ್ಟು ಎಂಟು ಸಾವಿರ ರನ್‌ಗಳು ಅವರ ಖಾತೆಯಲ್ಲಿವೆ. 13 ವರ್ಷಗಳ ಕಾಲ ಭಾರತ ತಂಡದಲ್ಲಿ ಆಡಿರುವುದ ಅವರ ಹೆಗ್ಗಳಿಕೆ.

33 ವರ್ಷದ ರೈನಾ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಆಡುತ್ತಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ 193 ಪಂದ್ಯಗಳನ್ನು ಆಡಿರುವ ಅವರು 5368 ರನ್‌ಗಳನ್ನು ಗಳಿಸಿದ್ದಾರೆ.

’ಸುರೇಶ್‌ ತಮ್ಮ ವೃತ್ತಿಜೀವನದ ಬಹುತೇಕ ಪಂದ್ಯಗಳಲ್ಲಿ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಫೀಲ್ಡಿಂಗ್‌ ನಲ್ಲೂ ಅಷ್ಟೇ. ಅತ್ಯಂತ ಸೂಕ್ಷ್ಮವಾದ ಜಾಗಗಳಲ್ಲಿ ಚುರುಕಾಗಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಸ್ಪಿನ್ ಬೌಲಿಂಗ್ ಮೂಲಕ ತಂಡಕ್ಕೆ ಅಗತ್ಯವಾದಾಗಲೆಲ್ಲ ನೆರವಿಗೆ ಧಾವಿಸಿದ್ದಾರೆ. ತಂಡಸ್ಪೂರ್ತಿಯ ವ್ಯಕ್ತಿ ಅವರು. ಅಷ್ಟೇ ಕೌಶಲಪೂರ್ಣ ಆಟಗಾರ‘ ಎಂದು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.