ದೆಹಲಿ ವಿರುದ್ಧ ಗೆದ್ದ ಕುಶಿಯಲ್ಲಿ ಜಮ್ಮ–ಕಾಶ್ಮೀರ ತಂಡದ ಆಟಗಾರರು
ಚಿತ್ರ ಕೃಪೆ: @Cric_records45
ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿಯ ಗ್ರೂಪ್-ಡಿ ಪಂದ್ಯದಲ್ಲಿ ಬಲಿಷ್ಠ ದೆಹಲಿ ವಿರುದ್ಧ ಜಮ್ಮು ಮತ್ತು ಕಾಶ್ಮೀರ ತಂಡ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ 65 ವರ್ಷಗಳ ರಣಜಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ತಂಡ ದೆಹಲಿಯನ್ನು ಸೋಲಿಸಿ ದಾಖಲೆ ಮಾಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 211 ರನ್ಗಳಿಗೆ ಸರ್ವಪತನ ಕಂಡಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಜಮ್ಮು ಮತ್ತು ಕಾಶ್ಮೀರ ತನ್ನ ಮೊದಲ ಇನಿಂಗ್ಸ್‌ನಲ್ಲಿ 310 ರನ್ಗಳಿಸಿತ್ತು.
99 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ದೆಹಲಿ ತಂ 277 ರನ್ಗಳಿಗೆ ಸರ್ವಪತನ ಕಂಡಿತು. ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಗೆಲುವಿಗೆ 179 ರನ್‌ಗಳ ಗುರಿ ಪಡೆದ ಜಮ್ಮು –ಕಾಶ್ಮೀರ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದೆ.
ಜಮ್ಮು ಮತ್ತು ಕಾಶ್ಮೀರ ತಂಡದ ಪರ ಆರಂಭಿಕ ಬ್ಯಾಟರ್ ಖಮ್ರಾನ್ ಇಕ್ಬಾಲ್ ಅದ್ಭುತ ಶತಕ (133 ಅಜೇಯ, 147 ಎ, 4X20, 6X2) ನೆರವಿನಿಂದ ಜಮ್ಮು ಕಾಶ್ಮೀರ ತಂಡ ದೆಹಲಿ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಜಯಗಳಿಸಿದೆ.
ಸದ್ಯ, ಗ್ರೂಪ್ ಡಿ ವಿಭಾಗದಲ್ಲಿ ನಾಲ್ಕು ಪಂದ್ಯಗಳನ್ನು ಆಡಿರುವ ದೆಹಲಿ ತಂಡ 7 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಆ ಮೂಲಕ ದೆಹಲಿ ತಂಡದ ನಾಕೌಟ್ ಪ್ರವೇಶದ ಹಾದಿ ಕಠಿಣವಾಗಿದೆ.
ಉಭಯ ತಂಡಗಳು ರಣಜಿಯಲ್ಲಿ 1960 ರಿಂದ ಇಲ್ಲಿಯವರೆಗೆ 43 ಬಾರಿ ಮುಖಾಮುಖಿಯಾಗಿದ್ದು ಇದರಲ್ಲಿ 37 ಪಂದ್ಯಗಳಲ್ಲಿ ದೆಹಲಿ ಗೆದ್ದಿದೆ.
ದೆಹಲಿ ಮೊದಲ ಇನಿಂಗ್ಸ್ 211, ಎರಡನೇ ಇನಿಂಗ್ಸ್ 277
ಜಮ್ಮು – ಕಾಶ್ಮೀರ ಮೊದಲ ಇನಿಂಗ್ಸ್ 310 ಮತ್ತು 179/3 (ಖಮ್ರಾನ್ ಇಕ್ಬಾಲ್ ಔಟಾಗದೆ 133)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.