ADVERTISEMENT

ರಣಜಿ ಕ್ವಾರ್ಟರ್‌ಫೈನಲ್:ಕರ್ನಾಟಕ ತಂಡಕ್ಕೆ ಮೊದಲ ಇನಿಂಗ್ಸ್ ಮುನ್ನಡೆ;ಮುಂಬೈ ಹೋರಾಟ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 14:06 IST
Last Updated 7 ಫೆಬ್ರುವರಿ 2026, 14:06 IST
ಮಯಂಕ್ ಅಗರವಾಲ್ 
ಮಯಂಕ್ ಅಗರವಾಲ್    

ಮುಂಬೈ: ಮಯಂಕ್ ಅಗರವಾಲ್ ಕೇವಲ ಎಂಟು ರನ್‌ಗಳ ಅಂತರದಿಂದ ಶತಕ ಕೈತಪ್ಪಿಸಿಕೊಂಡರು. ಆದರೆ ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟದ ಪಂದ್ಯದಲ್ಲಿ 53 ರನ್‌ ಮುನ್ನಡೆ ಸಾಧಿಸಿತು. ಆದರೆ ಆತಿಥೇಯ ಮುಂಬೈ ಎರಡನೇ ಇನಿಂಗ್ಸ್‌ನಲ್ಲಿ ದಿಟ್ಟ ಮರುಹೋರಾಟ ಮಾಡಿತು. 

ಆಕಾಶ್ ಆನಂದ್ (ಬ್ಯಾಟಿಂಗ್ 53; 130ಎ) ಮತ್ತು ಮುಷೀರ್ ಖಾನ್ (ಬ್ಯಾಟಿಂಗ್ 49; 105ಎ) ಅವರ ತಾಳ್ಮೆಭರಿತ ಬ್ಯಾಟಿಂಗ್‌ನಿಂದಾಗಿ ಎರಡನೇ ದಿನದಾಟದ ಮುಕ್ತಾಯಕ್ಕೆ  52 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 189 ರನ್‌ ಗಳಿಸಿದೆ. ಅದರೊಂದಿಗೆ ಒಟ್ಟು 136 ರನ್‌ಗಳ ಮುನ್ನಡೆ ಸಾಧಿಸಿದೆ. 300ಕ್ಕಿಂತ ಹೆಚ್ಚು ರನ್‌ಗಳ ಗುರಿ ನೀಡಿದರೆ ಕರ್ನಾಟಕ ತಂಡಕ್ಕೆ ಈ ಪಿಚ್‌ನಲ್ಲಿ ಕಠಿಣ ಸವಾಲಾಗಬಹುದು.

ಶುಕ್ರವಾರ ಮೊದಲ ಇನಿಂಗ್ಸ್‌ನಲ್ಲಿ ಮುಂಬೈ ತಂಡವು 120 ರನ್‌ಗಳಿಗೆ ತತ್ತರಿಸಿತ್ತು. ಅದಕ್ಕುತ್ತರವಾಗಿ ಕರ್ನಾಟಕವು 47.1 ಓವರ್‌ಗಳಲ್ಲಿ 173 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಶನಿವಾರ ಎರಡನೇ ಇನಿಂಗ್ಸ್ ಆರಂಭಿಸಿದ ಮುಂಬೈ ಗೆಲುವು ಸಾಧಿಸುವ ಛಲದೊಂದಿಗೆ ಆಡಿತು. 

ADVERTISEMENT

ಅದಕ್ಕೆ ತಕ್ಕಂತೆ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ (36; 43ಎ) ಮತ್ತು ಅಖಿಲ್ ಹೆರ್ವಾಡ್ಕರ್ (33; 35ಎ) ಅವರು ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 77 ರನ್ ಸೇರಿಸಿದರು. ಆದರೆ 13ನೇ ಓವರ್‌ನಲ್ಲಿ ಡೀಪ್‌ ಪೊಸಿಷನ್‌ನಿಂದ ಫೀಲ್ಡರ್ ವಿದ್ವತ್ ಕಾವೇರಪ್ಪ ಮಾಡಿದ ನೇರ ಥ್ರೋಗೆ ಅಖಿಲ್ ಹೆರ್ವಾಡ್ಕರ್ ರನ್‌ಔಟ್ ಆದರು. 

ನಂತರದ ಓವರ್‌ ಬೌಲಿಂಗ್ ಮಾಡಿದ ಶ್ರೇಯಸ್ ಗೋಪಾಲ್ ಅವರ ಎಸೆತವನ್ನು ಆಡುವ ಯತ್ನದಲ್ಲಿ ಜೈಸ್ವಾಲ್ ಅವರು ವಿಕೆಟ್‌ಕೀಪರ್ ಕೃತಿಕ್ ಕೃಷ್ಣಗೆ ಕ್ಯಾಚ್ ಆದರು. 

ಈ ಹೊತ್ತಿನಲ್ಲಿ ಜೊತೆಗೂಡಿದ ಆಕಾಶ್ ಮತ್ತು ಖಾನ್  ಇನಿಂಗ್ಸ್‌ಗೆ ಸ್ಥಿರತೆ ಒದಗಿಸಿದರು. ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲ 112 ರನ್‌ ಸೇರಿಸಿದರು. 

ಮಯಂಕ್ ಬ್ಯಾಟಿಂಗ್

ಮೊದಲ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡವು  26 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 110 ರನ್ ಗಳಿಸಿತ್ತು. ಕ್ರೀಸ್‌ನಲ್ಲಿದ್ದ ಮಯಂಕ್ ಮತ್ತು ಕರುಣ್  ಎರಡನೇ ದಿನ ಬೆಳಿಗ್ಗೆ ಆಟ ಮುಂದುವರಿಸಿದರು.

ಆದರೆ ಕರುಣ್ ಸೇರಿದಂತೆ ಏಳು ಬ್ಯಾಟರ್‌ಗಳು ಒಂದಂಕಿಗೇ ಔಟಾದರು. ಅದರಲ್ಲಿ ಆರ್. ಸ್ಮರಣ್, ಶ್ರೇಯಸ್ ಮತ್ತು ಪ್ರಸಿದ್ಧ ಅವರು ಖಾತೆಯನ್ನೇ ತೆರೆಯಲಿಲ್ಲ. ಇದರ ನಡುವೆಯೂ ಮಯಂಕ್ ಮಾತ್ರ ಏಕಾಗ್ರತೆಯಿಂದ ಆಡಿದರು. ಆದರೆ ಶತಕದ ಸನಿಹ ಇದ್ದ ಮಯಂಕ್ ಅವರು ತುಷಾರ್ ದೇಶಪಾಂಡೆ ಎಸೆತದಲ್ಲಿ ಸಿದ್ಧೇಶ್ ಲಾಡ್ ಪಡೆದ ಕ್ಯಾಚ್‌ಗೆ ನಿರ್ಗಮಿಸಿದರು. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಮುಂಬೈ: 48.1 ಓವರ್‌ಗಳಲ್ಲಿ 120. ಕರ್ನಾಟಕ: 47.1 ಓವರ್‌ಗಳಲ್ಲಿ 173 (ಮಯಂಕ್ ಅಗರವಾಲ್ 92, ಮೋಹಿತ್ ಅವಸ್ಥಿ 27ಕ್ಕೆ4, ತುಷಾರ್ ದೇಶಪಾಂಡೆ 33ಕ್ಕೆ4) ಎರಡನೇ ಇನಿಂಗ್ಸ್: 52 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 189 (ಯಶಸ್ವಿ ಜೈಸ್ವಾಲ್ 36, ಅಖಿಲ್ ಹೆರ್ವಾಡ್ಕರ್ 33, ಆಕಾಶ್ ಆನಂದ್ ಬ್ಯಾಟಿಂಗ್‌ 53, ಮುಷೀರ್ ಖಾನ್ ಬ್ಯಾಟಿಂಗ್‌ 49, ಶ್ರೇಯಸ್ ಗೋಪಾಲ್ 35ಕ್ಕೆ1) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.