
ಗೋವಾ ತಂಡದ ಅರ್ಜುನ್ ತೆಂಡೂಲ್ಕರ್ ಹಾಗೂ ಕರ್ನಾಟಕ ತಂಡದ ನಾಯಕ ಮಯಂಕ್ ಅಗರ್‌ವಾಲ್ ಅವರು ಶುಕ್ರವಾರ ಅಭ್ಯಾಸದ ವೇಳೆ ಸಮಾಲೋಚನೆ ನಡೆಸಿದರು
ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್ ಪಿ.ಎಸ್.
ಶಿವಮೊಗ್ಗ: ಇಲ್ಲಿನ ನವುಲೆಯ ಕೆರೆ ತಟದಲ್ಲಿ ತಲೆ ಎತ್ತಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್ ಕಲರವ ಶುರುವಾಗಿದೆ.
ಹೋದ ವರ್ಷದ ಡಿಸೆಂಬರ್‌ನಲ್ಲಿ 16 ವರ್ಷದೊಳಗಿನವರ ವಿಜಯ್ ಮರ್ಚಂಟ್ ಟ್ರೋಫಿ ಪಂದ್ಯಗಳಿಗೆ ಸಾಕ್ಷಿಯಾಗಿದ್ದ ಈ ಮೈದಾನ ಈಗ ಕರ್ನಾಟಕ ಮತ್ತು ಗೋವಾ ನಡುವಣ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯಕ್ಕಾಗಿ ಸಜ್ಜಾಗಿದೆ.
ನಗರವು 5 ವರ್ಷಗಳ ನಂತರ ರಣಜಿ ಪಂದ್ಯವೊಂದರ ಆತಿಥ್ಯ ವಹಿಸುತ್ತಿದೆ. ಮಯಂಕ್ ಅಗರವಾಲ್, ಕರುಣ್ ನಾಯರ್, ದೇವದತ್ತ ಪಡಿಕ್ಕಲ್ ಅವರಂತಹ ತಾರಾ ವರ್ಚಸ್ಸಿನ ಆಟಗಾರರು ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದು, ಅವರ ಆಟವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಇಲ್ಲಿನ ಕ್ರಿಕೆಟ್ ಪ್ರಿಯರು ಕಾತರರಾಗಿದ್ದಾರೆ. ಪ್ರೇಕ್ಷಕರ ಸ್ವಾಗತಕ್ಕೆ ಸವಳಂಗ ರಸ್ತೆಯಲ್ಲಿ ಫ್ಲೆಕ್ಸ್‌ಗಳೂ ತಲೆ ಎತ್ತಿವೆ.
ಮೊದಲ ಪಂದ್ಯದಲ್ಲಿ ಸೌರಾಷ್ಟ್ರದ ಸವಾಲು ಎದುರಿಸಿದ್ದ ಮಯಂಕ್ ಮುಂದಾಳತ್ವದ ಕರ್ನಾಟಕ, ಗೆಲುವಿನ ಮುನ್ನುಡಿ ಬರೆಯಲು ವಿಫಲವಾಗಿತ್ತು. ನಾಲ್ಕು ರನ್‌ಗಳಿಂದ ಇನಿಂಗ್ಸ್ ಹಿನ್ನಡೆ ಅನುಭವಿಸಿದ್ದ ತಂಡ, ಎರಡನೇ ಇನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ತೋರಿಯೂ ಡ್ರಾಗೆ ತೃಪ್ತಿಪಟ್ಟಿತ್ತು. ಆದರೆ ಗೋವಾ ಆರಂಭಿಕ ಹೋರಾಟದಲ್ಲೇ ಚಂಡೀಗಢ ತಂಡವನ್ನು ಇನಿಂಗ್ಸ್ ಮತ್ತು 75 ರನ್‌ಗಳಿಂದ ಹಣಿದಿತ್ತು. ಇದರೊಂದಿಗೆ ‘ಬಿ’ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನೂ ಅಲಂಕರಿಸಿತ್ತು. ಈ ಜಯದೊಂದಿಗೆ ಆತ್ಮವಿಶ್ವಾಸದ ಉತ್ತುಂಗದಲ್ಲಿರುವ ದೀಪ್‌ರಾಜ್ ಗಾಂವ್ಕರ್ ಬಳಗ, ಆತಿಥೇಯರಿಗೆ ಪ್ರಬಲ ಪೈಪೋಟಿ ಒಡ್ಡುವ ಹುಮ್ಮಸ್ಸಿನಲ್ಲಿದೆ.
ಮೊದಲ ಪಂದ್ಯದಲ್ಲಿ ಆಲ್‌ರೌಂಡ್ ಸಾಮರ್ಥ್ಯ ತೋರಿದ್ದ ಶ್ರೇಯಸ್ ಗೋಪಾಲ್ ಮೇಲೆ ನಿರೀಕ್ಷೆಯ ಭಾರ ತುಸು ಹೆಚ್ಚೇ ಇದೆ. ಸೌರಾಷ್ಟ್ರ ಎದುರು ಮೊದಲ ಇನಿಂಗ್ಸ್‌ನಲ್ಲಿ ಎಂಟು ವಿಕೆಟ್ ಉರುಳಿಸಿದ್ದ ಇವರು, ಅರ್ಧಶತಕ ದಾಖಲಿಸಿ ಬ್ಯಾಟಿಂಗ್‌ನಲ್ಲೂ ಮಿಂಚಿದ್ದರು. ಎರಡನೇ ಇನಿಂಗ್ಸ್‌ನಲ್ಲೂ ಸ್ಪಿನ್ ಚಮತ್ಕಾರ ತೋರಿ ಮೂರು ವಿಕೆಟ್ ಕಬಳಿಸಿದ್ದರು.
ಬ್ಯಾಟಿಂಗ್‌ನಲ್ಲಿ ಆತಿಥೇಯ ಆಟಗಾರರು ಸ್ಥಿರ ಸಾಮರ್ಥ್ಯ ತೋರಬೇಕಿದೆ. ಸೌರಾಷ್ಟ್ರ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ದಾಖಲಿಸಿ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದ್ದ ಪಡಿಕ್ಕಲ್, ಕರುಣ್ ಮತ್ತು ಸ್ಮರಣ್ ರವಿಚಂದ್ರನ್, ಎರಡನೇ ಇನಿಂಗ್ಸ್‌ನಲ್ಲಿ ವೈಫಲ್ಯ ಕಂಡಿದ್ದರು. ನಾಯಕ ಮಯಂಕ್, ನಿಕಿನ್ ಜೋಸ್ ಮತ್ತು ವಿಕೆಟ್ ಕೀಪರ್ ಕೃಷ್ಣನ್ ಶ್ರೀಜಿತ್ ಕೂಡ ನಿರೀಕ್ಷೆಗೆ ತಕ್ಕಂತೆ ಆಡಿರಲಿಲ್ಲ. ಗೋವಾ ಎದುರು ಗೆಲ್ಲಬೇಕಾದರೆ ಇವರು ದರ್ಶನ್ ಮಿಸಾಳ್, ಮೋಹಿತ್ ರೇಡ್ಕರ್, ಅರ್ಜುನ್ ತೆಂಡೂಲ್ಕರ್ ಮತ್ತು ಲಲಿತ್ ಯಾದವ್ ಅವರ ದಾಳಿಯನ್ನು ಸಮರ್ಥವಾಗಿ ಎದುರಿಸಬೇಕು.
ಗೋವಾ ತಂಡ ರನ್ ಹೊಳೆ ಹರಿಸುವ ಸಾಮರ್ಥ್ಯವುಳ್ಳ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಚಂಡೀಗಢ ವಿರುದ್ಧ ದ್ವಿಶತಕ ದಾಖಲಿಸಿದ್ದ ಅಭಿನವ್ ತೇಜ್‌ರಾಣಾ ಮತ್ತು ಲಲಿತ್ ಯಾದವ್, ಅಪಾಯಕಾರಿಯಾಗಬಲ್ಲರು. ಮಂಥನ್, ಪ್ರಭುದೇಸಾಯಿ, ನಾಯಕ ದೀಪ್‌ರಾಜ್ ಅವರ ಬಲವೂ ಈ ತಂಡಕ್ಕಿದೆ. ಇವರನ್ನು ಕಟ್ಟಿಹಾಕಲು ಅಭಿಲಾಷ್ ಶೆಟ್ಟಿ, ಶಿಖರ್ ಶೆಟ್ಟಿ, ಮೊಹ್ಸಿನ್ ಖಾನ್ ಮತ್ತು ಎಂ.ವೆಂಕಟೇಶ್ ಅವರು ಯಾವ ಅಸ್ತ್ರ ಪ್ರಯೋಗಿಸಲಿದ್ದಾರೆ ಎಂಬ ಕುತೂಹಲ ಮನೆಮಾಡಿದೆ. ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯೂ ಇದೆ.
ಪಂದ್ಯದ ಆರಂಭ: ಬೆಳಿಗ್ಗೆ 9.30.
ತಂಡಗಳು ಇಂತಿವೆ
ಕರ್ನಾಟಕ: ಮಯಂಕ್ ಅಗರವಾಲ್, ಕರುಣ್ ನಾಯರ್, ಸ್ಮರಣ್ ಆರ್., ಶ್ರೀಜಿತ್ ಕೆ.ಎಲ್, ಶ್ರೇಯಸ್ ಗೋಪಾಲ್, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ವೆಂಕಟೇಶ್ ಎಂ., ಎಸ್.ಜೆ.ನಿಕಿನ್ ಜೋಸ್, ಅಭಿನವ್ ಮನೋಹರ್, ಕೃತಿಕ್ ಕೃಷ್ಣ, ಅನೀಶ್ ಕೆ.ವಿ., ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಯಶೋವರ್ಧನ್ ಪರಂತಾಪ್.
ಗೋವಾ: ದೀಪ್‌ರಾಜ್ ಗಾಂವ್ಕರ್, ಲಲಿತ್ ಯಾದವ್, ಕಶ್ಯಪ್ ಬಾಖಳೆ, ಸಮರ್ ದುಭಾಶಿಶ್, ಇಶಾನ್ ಗಡೇಕರ್, ರಾಜಶೇಖರ್ ಹರಿಕಾಂತ್, ಕೆ.ಮಂಥನ್, ದರ್ಶನ್ ಮಿಸಾಳ್, ಹೇರಂಬ್ ಪರಬ್, ವಿಜೇಶ್ ಪ್ರಭುದೇಸಾಯಿ, ಸುಯಾಶ್ ಪ್ರಭುದೇಸಾಯಿ, ಮೋಹಿತ್ ರೇಡ್ಕರ್, ವಿಕಾಸ್ ಸಿಂಗ್, ಅಭಿನವ್ ತೇಜ್‌ರಾಣಾ, ಅರ್ಜುನ್ ತೆಂಡೂಲ್ಕರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.