ADVERTISEMENT

ರಣಜಿ ಟ್ರೋಫಿ | ಡ್ರಾ ಪಂದ್ಯದಲ್ಲಿ ಕೇರಳ; ಕರ್ನಾಟಕದ ಹಾದಿ ಕ್ಲಿಷ್ಟ

​ಪ್ರಜಾವಾಣಿ ವಾರ್ತೆ
Published 27 ಜನವರಿ 2025, 5:03 IST
Last Updated 27 ಜನವರಿ 2025, 5:03 IST
ಕೇರಳ ತಂಡದ ಆದಿತ್ಯ ಸರವಟೆ
ಕೇರಳ ತಂಡದ ಆದಿತ್ಯ ಸರವಟೆ   

ತಿರುವನಂತಪುರ: ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸಿ ಗುಂಪಿನ ಆರನೇ ಪಂದ್ಯದಲ್ಲಿ ಕೇರಳ ತಂಡವು ಮಧ್ಯಪ್ರದೇಶ ಎದುರು ಸೋಲಿನ ಆತಂಕದಿಂದ ತಪ್ಪಿಸಕೊಂಡಿತು. ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. 

ಇದರೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ 2ನೇ ಸ್ಥಾನ ಪಡೆಯಿತು. ಕೇರಳದ ಖಾತೆಯಲ್ಲಿ ಒಟ್ಟು 21 ಅಂಕಗಳಿವೆ. ಇದರಿಂದಾಗಿ ಕರ್ನಾಟಕದ ನಾಕೌಟ್ ಹಾದಿ ಕಠಿಣವಾಗಿದೆ. 

ಗುಂಪು ಹಂತದಲ್ಲಿ ಕೇರಳ ಮತ್ತು ಕರ್ನಾಟಕ ತಂಡಗಳು ತಲಾ ಒಂದು ಪಂದ್ಯ ಆಡಬೇಕಿದೆ. ಕೇರಳ ತಂಡವು ತನ್ನ ಕೊನೆಯ ಪಂದ್ಯವನ್ನು ಬಿಹಾರದ ವಿರುದ್ಧ ಆಡಲಿದೆ. ದುರ್ಬಲ ತಂಡವಾಗಿರುವ ಬಿಹಾರವನ್ನು ಕೇರಳವು ಸೋಲಿಸುವ ಎಲ್ಲ ಸಾಧ್ಯತೆಗಳೂ ಇವೆ. 

ADVERTISEMENT

ಒಟ್ಟು 19 ಅಂಕ ಗಳಿಸಿರುವ ಕರ್ನಾಟಕ ತಂಡವು ಬೆಂಗಳೂರಿನಲ್ಲಿ ನಡೆಯಲಿರುವ ಅಂತಿಮ ಸುತ್ತಿನ ಪಂದ್ಯದಲ್ಲಿ ಬಲಿಷ್ಠ ಹರಿಯಾಣವನ್ನು ಎದುರಿಸಲಿದೆ. ಅದರಲ್ಲಿ ತಂಡವು ಪೂರ್ಣ 7 ಅಂಕ ಗಳಿಸಬೇಕು. ಇತ್ತ ಬಿಹಾರ ವಿರುದ್ಧ ಕೇರಳ ಸೋತರೆ ಅಥವಾ ಡ್ರಾ ಆದರೆ ಕರ್ನಾಟಕ ತಂಡಕ್ಕೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಸಿಗಲಿದೆ. ಒಂದೊಮ್ಮೆ ಹರಿಯಾಣ ಎದುರು ಡ್ರಾ ಮಾಡಿಕೊಂಡು 3 ಅಂಕ ಗಳಿಸಿದರೂ ಕರ್ನಾಟಕಕ್ಕೆ ನಾಲ್ಕರ ಘಟ್ಟದ ಪ್ರವೇಶ ಕಷ್ಟವಾಗಲಿದೆ. ಹರಿಯಾಣ ತಂಡವು ಈಗಾಗಲೇ 26 ಅಂಕ ಗಳಿಸಿ ನಾಕೌಟ್ ಹೊಸ್ತಿಲಿಗೆ ಬಂದು ನಿಂತಿದೆ. 

ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು ಶನಿವಾರ ಮುಗಿದ ಪಂಜಾಬ್ ಎದುರಿನ ಪಂದ್ಯದಲ್ಲಿ ಇನಿಂಗ್ಸ್ ಮತ್ತು 207 ರನ್‌ಗಳಿಂದ ಜಯಿಸಿತ್ತು.  ಗುಂಪಿನಲ್ಲಿ ಒಟ್ಟು ಆರು ಪಂದ್ಯಗಳಲ್ಲಿ ಕರ್ನಾಟಕ ತಂಡವು ಎರಡರಲ್ಲಿ ಜಯಿಸಿದೆ. ಉಳಿದ ಪಂದ್ಯಗಳು ಡ್ರಾ ಆಗಿದ್ದವು. ಅದರಲ್ಲೂ ಎರಡು ಪಂದ್ಯಗಳು ಮಳೆಯಿಂದಾಗಿ ಪೂರ್ಣಗೊಂಡಿರಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.