ADVERTISEMENT

Ranji Trophy | ಹುಬ್ಬಳ್ಳಿಯಲ್ಲಿ ಆಡುವುದು ಖುಷಿಯ ವಿಷಯ: ದೇವದತ್ತ ಪಡಿಕ್ಕಲ್

ಸತೀಶ ಬಿ.
Published 23 ಫೆಬ್ರುವರಿ 2026, 20:06 IST
Last Updated 23 ಫೆಬ್ರುವರಿ 2026, 20:06 IST
<div class="paragraphs"><p>ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಹಾಗೂ&nbsp;ಕರ್ನಾಟಕ ತಂಡದ ನಾಯಕ ದೇವದತ್ತ ಪಡಿಕ್ಕಲ್&nbsp;</p></div>

ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಹಾಗೂ ಕರ್ನಾಟಕ ತಂಡದ ನಾಯಕ ದೇವದತ್ತ ಪಡಿಕ್ಕಲ್ 

   

ಹುಬ್ಬಳ್ಳಿ: ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ತಮ್ಮ ಬಲಗೈನ ಎರಡೂ ಬೆರಳಿಗೆ ಬ್ಯಾಂಡೇಜ್ ಪಟ್ಟಿ ಹಾಕಿಕೊಂಡಿದ್ದರು. ತಮ್ಮ ಎಂದಿನ ಶಾಂತ ಮುಖಭಾವ ಮತ್ತು ಕಿರುನಗೆಯೊಂದಿಗೆ ಸುದ್ದಿಗಾರರ ಮುಂದೆ ಕುಳಿತರು.

ಐತಿಹಾಸಿಕ ಫೈನಲ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿರುವ ದೇವದತ್ತ ಪಕ್ಕದಲ್ಲಿ ಜಮ್ಮು–ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಕೂಡ ಇದ್ದರು. ಇಬ್ಬರೂ ಸಮಚಿತ್ತದ ಮತ್ತು ಕರಾರುವಾಕ್ ಉತ್ತರಗಳನ್ನು ನೀಡಿದರು. 

ADVERTISEMENT

‘ರಣಜಿ ಟ್ರೋಫಿಯಂತಹ ಮಹತ್ವದ ಟೂರ್ನಿಯ ಮಧ್ಯದಲ್ಲಿ ನಾಯಕತ್ವ ವಹಿಸುವುದು ಸವಾಲಿನದ್ದು.  ಆದರೆ, ತಂಡದಲ್ಲಿ ಅನುಭವಿ ಆಟಗಾರರಿರುವುದರಿಂದ ಕಷ್ಟವಾಗಲಿಲ್ಲ’ ಎಂದು ಪಡಿಕ್ಕಲ್‌ ಹೇಳಿದರು.

ಉತ್ತರಾಖಂಡ ಎದುರಿನ ಸೆಮಿಫೈನಲ್‌ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಕೈಬೆರಳಿಗೆ ಗಾಯಮಾಡಿಕೊಂಡಿದ್ದ ಅವರು, ಸಂಪೂರ್ಣ ಚೇತರಿಸಿಕೊಂಡಿದ್ದಾರೆ.

‘ಫೈನಲ್‌ ಪಂದ್ಯವೆಂದರೆ ಸಹಜವಾಗಿಯೇ ಒತ್ತಡ ಇರುತ್ತದೆ. ಆದರೆ, ತವರಿನ ಅಂಗಳದಲ್ಲಿ ಈ ಪಂದ್ಯ ಆಡುತ್ತಿರುವುದು ಖುಷಿಯ ವಿಚಾರ. ಫೈನಲ್‌ಗೆ ನಮ್ಮ ತಂಡ ಸಜ್ಜಾಗಿದೆ‘ ಎಂದು ಹೇಳಿದರು.

ರಾಜ್ಯದ ಎಲ್ಲ ಭಾಗಗಳಲ್ಲಿಯೂ ಉತ್ತಮ ಪ್ರತಿಭಾವಂತ ಆಟಗಾರರರಿದ್ದಾರೆ. ಉತ್ತರ ಕರ್ನಾಟಕ ಭಾಗದಿಂದ ಬಂದವರೂ ಟೆಸ್ಟ್‌ ಕ್ರಿಕೆಟ್‌ ಆಡಿದ್ದಾರೆ. ಯುವ ಪ್ರತಿಭೆಗಳಿಗೆ ಹೆಚ್ಚು ಪ್ರೋತ್ಸಾಹ ಸಿಗಬೇಕೆಂದರೆ ಇಲ್ಲಿ ಹೆಚ್ಚು ಪಂದ್ಯಗಳು ನಡೆಯಬೇಕು ಎಂದರು.

ಪಾರಸ್ ಡೋಗ್ರಾ ಮಾತನಾಡಿ, ‘ಫೈನಲ್ ತಲುಪಿರುವುದು ಮಹತ್ವದ ಸಂಗತಿ. ಸೆಮಿಫೈನಲ್‌ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್‌ ತಂಡ ಬಂಗಾಳವನ್ನು ಸೋಲಿಸಿದ್ದರಿಂದ ನಮ್ಮ ಆಟಗಾರರದಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಕರ್ನಾಟಕ ತಂಡ ದಲ್ಲಿ ಖ್ಯಾತ ಆಟಗಾರರಿದ್ದಾರೆ. ಆದರೆ, ನಾವು ನಮ್ಮ ಆಟ ಆಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.