
ಪುಣೆ: ನಾಯಕ ಮಯಂಕ್ ಅಗರವಾಲ್ (80, 181ಎ, 7x4, 6x2) ಮತ್ತು ಲಯದಲ್ಲಿರುವ ರವಿಚಂದ್ರನ್ ಸ್ಮರಣ್ (51, 84ಎ, 7x4) ಅವರ ಉಪಯುಕ್ತ ಆಟದ ನೆರವಿನಿಂದ ಕರ್ನಾಟಕ ತಂಡ, ಶನಿವಾರ ಆರಂಭವಾದ ರಣಜಿ ಟ್ರೋಫಿ ಬಿ ಗುಂಪಿನ ಎಲೈಟ್ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಮೊದಲ ದಿನ ಕುಸಿತದಿಂದ ಪಾರಾಯಿತು. ಆದರೆ ಮಹಾರಾಷ್ಟ್ರದ ಬೌಲರ್‌ಗಳೂ ಬಿಗು ದಾಳಿಯ ಮೂಲಕ ದಿನದ ಗೌರವ ಹಂಚಿಕೊಂಡರು.
ಇಲ್ಲಿನ ಎಂಸಿಎ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಕರ್ನಾಟಕ ದಿನದಾಟದ ಕೊನೆಗೆ 89 ಓವರುಗಳಲ್ಲಿ 5 ವಿಕೆಟ್‌ಗೆ 257 ರನ್ ಹೊಡೆಯಿತು. ಈ ವರ್ಷ ಮಹಾರಾಷ್ಟ್ರ ತಂಡಕ್ಕೆ ಮರಳಿರುವ 38 ವರ್ಷ ವಯಸ್ಸಿನ ಆಫ್ ಸ್ಪಿನ್ನರ್ ಜಲಜ್ ಸಕ್ಸೇನಾ ಮೂರು ವಿಕೆಟ್ ಪಡೆದು ಕರ್ನಾಟಕ ಪೂರ್ಣ ಮೇಲುಗೈ ಪಡೆಯದಂತೆ ತಡೆದರು.
ಮಹಾರಾಷ್ಟ್ರ ಬೌಲರ್‌ಗಳು ದಿನದ ಹೆಚ್ಚಿನ ಅವಧಿಯಲ್ಲಿ ಗಮನಸೆಳೆದರು. ಆದರೆ ದಿನದ ಕೊನೆಯ 27.5 ಓವರುಗಳಲ್ಲಿ ವಿಕೆಟ್ ಪಡೆಯಲು ವಿಫಲರಾದರು. ಅಭಿನವ್ ಮನೋಹರ್ (ಅಜೇಯ 31, 102ಎ, 6x2) ಮತ್ತು ಈ ಋತುವಿನಲ್ಲಿ ಬ್ಯಾಟಿನಲ್ಲೂ ಕೊಡುಗೆ ನೀಡಿರುವ ಶ್ರೇಯಸ್ ಗೋಪಾಲ್ (ಬ್ಯಾಟಿಂಗ್ 32, 80ಎ, 4x3) ಅವರು ಬೇರೂರಿ ಆಡಿದರು. 194 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಾಗ ಜೊತೆಗೂಡಿದ ಇವರಿಬ್ಬರು ಮುರಿಯದ ಆರನೇ ವಿಕೆಟ್‌ಗೆ ಅಮೂಲ್ಯ 63 ರನ್ ಸೇರಿಸಿದ್ದಾರೆ.
ಕರ್ನಾಟಕ ಈ ಪಂದ್ಯಕ್ಕೆ ಶಿಖರ್ ಶೆಟ್ಟಿ ಮತ್ತು ವೈಶಾಖ್ ವಿಜಯಕುಮಾರ್ ಅವರನ್ನು ಕೈಬಿಟ್ಟು ಎಂ.ವೆಂಕಟೇಶ್ ಮತ್ತು ಅಭಿಲಾಷ್ ಶೆಟ್ಟಿ ಅವರಿಗೆ ಅವಕಾಶ ನೀಡಿತು.
ಕರ್ನಾಟಕ ತಂಡಕ್ಕೆ ಅನೀಶ್ ಕೆ.ವಿ. (34, 58ಎ, 4x4, 6x1) ಮತ್ತು ಅಗರವಾಲ್ ಮಿಂಚಿನ ಆರಂಭ ನೀಡಿದರು. ಅಗರವಾಲ್ ಈ ಋತುವಿನ ಎರಡನೇ ಅರ್ಧ ಶತಕ ಬಾರಿಸಿದ್ದು, ಮೊದಲ ವಿಕೆಟ್‌ಗೆ 66 ರನ್‌ಗಳು ಬಂದವು.
ಈ ಹಂತದಲ್ಲಿ ಜಲಜ್, ಮಹಾರಾಷ್ಟ್ರಕ್ಕೆ ಬೇಗನೇ ಎರಡು ವಿಕೆಟ್ ಗಳಿಸಿಕೊಟ್ಟರು. ಅನೀಶ್ ಅವರನ್ನು ಎಲ್‌ಬಿ ಬಲೆಗೆ ಬೀಳಿಸಿದ ಜಲಜ್, ನಾಲ್ಕು ಓವರುಗಳ ನಂತರ ಕೆ.ಎಲ್.ಶ್ರೀಜಿತ್ ಅವರನ್ನು ಬೌಲ್ಡ್ ಮಾಡಿದರು. ಆಗ ಮೊತ್ತ 23 ಓವರುಗಳಲ್ಲಿ 2 ವಿಕೆಟ್‌ಗೆ 82.
ಈ ಹಿಂದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಕರುಣ್ ನಾಯರ್ (4, 14ಎ) ಅವರು ಮಧ್ಯಮ ವೇಗಿ ರಾಮಕೃಷ್ಣ ಘೋಷ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಈ ಹಂತದಲ್ಲಿ (89ಕ್ಕೆ3) ಮಯಂಕ್ ಜೊತೆಗೂಡಿದ ಸ್ಮರಣ್ 99 ರನ್ ಜೊತೆಯಾಟದ ಮೂಲಕ ತಂಡದ ರಕ್ಷಣೆಗೆ ನಿಂತರು. ಆದರೆ ಸ್ಮರಣ್ ಮತ್ತು ಮಯಂಕ್ ಅವರ ವಿಕೆಟ್‌ಗಳನ್ನು ಐದು ಓವರುಗಳ ಅಂತರದಲ್ಲಿ ಪಡೆದ ಮಹಾರಾಷ್ಟ್ರ ಪ್ರತಿಹೋರಾಟ ತೋರಿತು.
ಮೊದಲ ಇನಿಂಗ್ಸ್:
ಕರ್ನಾಟಕ: 89 ಓವರುಗಳಲ್ಲಿ 5 ವಿಕೆಟ್‌ಗೆ 257 (ಕೆ.ವಿ.ಅನೀಶ್ 34, ಮಯಂಕ್ ಅಗರವಾಲ್ 80, ಆರ್.ಸ್ಮರಣ್ 54, ಅಭಿನವ ಮನೋಹರ್ ಬ್ಯಾಟಿಂಗ್ 31, ಶ್ರೇಯಸ್ ಗೋಪಾಲ್ ಬ್ಯಾಟಿಂಗ್ 32; ಜಲಜ್ ಸಕ್ಸೇನ 80ಕ್ಕೆ3, ವಿಕಿ ಒಸ್ಟ್ವಾಲ್ 50ಕ್ಕೆ1, ರಾಮಕೃಷ್ಣ ಘೋಷ್ 33ಕ್ಕೆ1) ವಿರುದ್ಧ ಮಹಾರಾಷ್ಟ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.